ಮನೋರಂಜನೆ

ಟಿ-20 ವಿಶ್ವಕಪ್ ಗೆಲ್ಲಲು ಭಾರತದ ಮುಂದಿರುವ ಐದು ತೊಡಕುಗಳು…!

Pinterest LinkedIn Tumblr

w

ಮುಂಬೈ: ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ ಸೆಮಿ ಫೈನಲ್ ಪ್ರವೇಶ ಮಾಡಿದ್ದಾಯ್ತು. ಆದರೆ ನಿಜಕ್ಕೂ ಭಾರತ ಟ್ರೋಫಿ ಗೆಲ್ಲಲು ಸಮರ್ಥವೇ? ಅಥವಾ ಟ್ರೋಫಿ ಗೆಲ್ಲಲು ಭಾರತಕ್ಕೆ ಎದುರಾಗಿರುವ ತೊಡಕುಗಳಾದರೂ ಏನು..?

ಮೊಹಾಲಿ ಮತ್ತು ಕೋಲ್ಕತಾ ಪಂದ್ಯಗಳ ಬಳಿಕ ಇಡೀ ಭಾರತ ದೇಶದ ಕ್ರಿಕೆಟ್ ಅಭಿಮಾನಿಗಳು ಟಿ20 ವಿಶ್ವಕಪ್ ಮತ್ತೆ ಭಾರತಕ್ಕೆ ವಾಪಸಾಗುವ ಕುರಿತು ಕನಸುಗಳನ್ನು ಕಾಣುತ್ತಿದ್ದಾರೆ. ಆದರೆ ಮುಂದಿನ ಪಂದ್ಯಗಳು ನಿರ್ಣಾಯಕ ಹಂತದ ಪಂದ್ಯಗಳಾದ್ದರಿಂದ ಟೀಂ ಇಂಡಿಯಾದ ಒಂದು ಸಣ್ಣ ತಪ್ಪು ಕೂಡ ದುಬಾರಿಯಾಗಿ ಪರಿಣಮಿಸಿ ಟೂರ್ನಿಯಿಂದಲೇ ಹೊರಬರುವ ಸಾಧ್ಯತೆಗಳು ಕೂಡ ಇದೆ. ಟ್ರೋಫಿ ಗೆಲ್ಲುವ ನಿಟ್ಟಿನಲ್ಲಿ ಭಾರತಕ್ಕೆ ತೊಡಕಾಗಿರುವ ಅಂಶಗಳು ಇಲ್ಲಿವೆ.

1. ಆರಂಭಿಕರ ವೈಫಲ್ಯ
ಟಿ20 ವಿಶ್ವಕಪ್ ನಲ್ಲಿ ಭಾರತದ ಜರ್ನಿಯನ್ನು ಗಮನಿಸಿದರೆ ನಿಜಕ್ಕೂ ಈ ಅಂಶ ಎಲ್ಲರ ಗಮನ ಸೆಳೆಯುತ್ತದೆ. ಟಿ20 ಟೂರ್ನಿಯಲ್ಲಿ ಭಾರತ ಈ ವರೆಗೂ 4 ಪಂದ್ಯಗಳನ್ನು ಆಡಿದ್ದು, ಯಾವೊಂದು ಪಂದ್ಯದಲ್ಲಿಯೂ ಬ್ಯಾಟಿಂಗ್ ನಲ್ಲಿ ಭಾರತ ಉತ್ತಮ ಎನ್ನುವ ಆರಂಭವನ್ನೇ ಕಂಡಿಲ್ಲ. ಭಾರತದ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಈವರೆಗೂ ವೈಫಲ್ಯ ಅನುಭವಿಸುತ್ತಾ ಬಂದಿದ್ದು, ಭಾರತಕ್ಕೆ ಉತ್ತಮ ಆರಂಭವನ್ನೇ ನೀಡಿಲ್ಲ. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಈ ಜೋಡಿ ಗಳಿಕೆ 5 ರನ್ ಗಳಾದರೆ, ಕೋಲ್ಕತಾದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಈ ಜೋಡಿ ಗಳಿಸಿದ್ದು ಕೇವಲ 14 ರನ್ ಮಾತ್ರ. ರೋಚಕ ಅಂತ್ಯಕಂಡ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ 42 ರನ್ ಜೊತೆಯಾಟ ಬಂದಿತಾದರೂ, ಈ ಜೋಡಿಯ ಸಾಮರ್ಥ್ಯಕ್ಕೆ ಅದೊಂದನ್ನೇ ಪರಿಗಣಿಸಲು ಸಾಧ್ಯವಿಲ್ಲ. ಇನ್ನು ಭಾನುವಾರ ರಾತ್ರಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಶರ್ಮಾ ಮತ್ತು ಧವನ್ ಜೋಡಿ ಗಳಿಸಿದ್ದು, ಕೇವಲ 23 ರನ್ ಗಳು ಮಾತ್ರ.

2. ರೈನಾ ಹಠಾವೋ ಹರ್ಭಜನ್ ಸಿಂಗ್ ಲಾವೋ
ಹಿಂದೆ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಾಗ ಕೆಲ ಕಾರ್ಯಕರ್ತರು ರಾಹುಲ್ ಹಠಾವೋ, ಪ್ರಿಯಾಂಕಾ ಲಾವೋ ಎಂದು ಘೋಷಣೆಗಳನ್ನು ಕೂಗಿದ್ದನ್ನು ನಾವು ಕೇಳಿದ್ದೇವೆ. ಆದರೀಗ ಇದೇ ಘೋಷಣೆ ಟೀಂ ಇಂಡಿಯಾ ಅಭಿಮಾನಿಗಳಲ್ಲೂ ಕೇಳಿಬರುತ್ತಿದ್ದು, ಸತತ ವೈಫಲ್ಯ ಕಾಣುತ್ತಿರುವ ಸುರೇಶ್ ರೈನಾ ಬದಲಿಗೆ ಹರ್ಭಜನ್ ಸಿಂಗ್ ರನ್ನು ಕಣಕ್ಕಿಳಿಸಬೇಕು ಎಂಬ ವಾದ ಕೂಡ ಕೇಳಿಬರುತ್ತಿದೆ. ಧೋನಿ ಬ್ಯಾಟಿಂಗ್ ಮತ್ತು ಬೌಲಿಂಗ್ ದೃಷ್ಟಿಯಿಂದ ಸುರೇಶ್ ರೈನಾ ಅವರನ್ನು ತಂಡದಲ್ಲಿಟ್ಟುಕೊಂಡಿದ್ದಾರೆ ಎನ್ನುವುದಾದರೆ ಈ ವರೆಗೂ ಅವರಿಂದ ಅಂಥಹ ಯಾವುದೇ ಪ್ರದರ್ಶನಗಳು ಹೊರಬಂದಿಲ್ಲ. ಓರ್ವ ಬೌಲರ್ ಆಗಿ ಅಲ್ಲಲ್ಲಿ ಒಂದೊಂದು ವಿಕೆಟ್ ಗಳಿಸಿರುವ ರೈನಾ ಬೌಲರ್ ಆಗಿ ಯಶಸ್ವಿಯಾಗಿದ್ದಾರೆ ಎಂಬುದು ಧೋನಿ ವಾದವಾದರೆ, ಹರ್ಭಜನ್ ಸಿಂಗ್ ಅದಕ್ಕಿಂತಲೂ ಪರಿಣಾಮಕಾರಿ ಬೌಲರ್ ಎಂಬುದು ಇಡೀ ಜಗತ್ತಿಗೇ ತಿಳಿದಿರುವ ವಿಚಾರ.

3. ನಾಯಕ ಧೋನಿಯ ಮುಲಾಜು
ಇನ್ನು ಇಡೀ ತಂಡಕ್ಕೆ ಮಾರಕವಾಗಬಲ್ಲ ಅತೀ ದೊಡ್ಡ ಸಮಸ್ಯೆ ಎಂದರೆ ಅದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯ ಮುಲಾಜು. ಏಕೆಂದರೆ ಸತತ ವೈಫಲ್ಯದ ನಡುವೆಯೂ ತಮ್ಮ ಫೇವರಿಟ್ ಆಟಗಾರರು ಎಂಬ ಒಂದೇ ಕಾರಣದಿಂದ ಧೋನಿ ಈ ಆಟಗಾರರಿಗೆ ತಂಡದಲ್ಲಿ ಆಡುವ ಅವಕಾಶ ಕಲ್ಪಿಸುತ್ತಿರುವುದು ತಂಡಕ್ಕೆ ನಿಜಕ್ಕೂ ದುಬಾರಿಯಾಗುವ ಸಾಧ್ಯತೆಗಳಿವೆ. ಕೇವಲ ಧೋನಿಯ ಮುಲಾಜಿನ ಒಂದೇ ಕಾರಣದಿಂದ ಆರಂಭಿಕ ಆಟಗಾರರಾದ ಶಿಖರ್ ಧವನ್, ರೋಹಿತ್ ಶರ್ಮಾ ಮತ್ತು ಮಧ್ಯಮ ಕ್ರಮಾಂಕದ ಸುರೇಶ್ ರೈನಾ ಸತತ ವೈಫಲ್ಯದ ನಡುವೆಯೂ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಮೂವರು ಉತ್ತಮ ಆಟಗಾರರು ಎಂಬದರಲ್ಲಿ ಎರಡು ಮಾತಿಲ್ಲ. ಆದರೆ ಪ್ರಸ್ತುತ ಅವರ ಫಾರ್ಮ್ ಕೈಕೊಟ್ಟಿದ್ದು, ಫಾರ್ಮ್ ನಲ್ಲಿರುವ ಆಟಗಾರರಿಗೆ ಧೋನಿ ಮಣೆ ಹಾಕಿದರೆ ತಂಡ ಹಿತದೃಷ್ಟಿಯಿಂದ ಒಳ್ಳೆಯದು. ಇನ್ನು ಬದಲಿ ಆಟಗಾರರ ವಿಚಾರಕ್ಕೆ ಬರುವುದಾದರೆ, ಅಜಿಂಕ್ಯಾ ರಹಾನೆ ಮತ್ತು ಹರ್ಭಜನ್ ಸಿಂಗ್ ಇನ್ನೂ ಬೆಂಚ್ ಕಾಯುತ್ತಿದ್ದು, ಈ ವರೆಗೂ ಅವರಿಗೆ ಅಂಗಳಕ್ಕೆ ಇಳಿಯುವ ಅವಕಾಶವೇ ಸಿಕ್ಕಿಲ್ಲ.

4. ಕೆಳ ಕ್ರಮಾಂಕದ ಸಮರ್ಥ ಆಟಗಾರರಿಗೆ ಸಿಗದ ಅವಕಾಶ
ಟೀ ಇಂಡಿಯಾದ ಕೆಳ ಕ್ರಮಾಂಕವನ್ನು ಗಮನಿಸುವುದಾದರೆ, ಧೋನಿ ಬಳಿಕ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯಾ ಮತ್ತು ಆರ್ ಅಶ್ವಿನ್ ಕೂಡ ಉತ್ತಮವಾಗಿ ಬ್ಯಾಟ್ ಬೀಸಬಲ್ಲ ಆಲ್ ರೌಂಡರ್ ಗಳಾಗಿದ್ದು, ಮದ್ಯಮ ಕ್ರಮಾಂಕದ ವೈಫಲ್ಯದ ಬಳಿಕ ನಾಯಕ ಧೋನಿ ಈ ಆಟಗಾರರನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಿತ್ತು. ಆದರೆ ಈ ವರೆಗೂ ಅದು ನಡೆದಿಲ್ಲ. ಹಾರ್ದಿಕ್ ಪಾಂಡ್ಯಾ ಒಂದು ಪಂದ್ಯದಲ್ಲಿ ಧೋನಿಗೂ ಮೊದುಲ ಬ್ಯಾಟ್ ಹಿಡಿದಿದ್ದಾರೆಯಾದರೂ ಅದು ಅಂತಿಮ ಸಮಯದ ಓವರ್ ಗಳಾದ್ದರಿಂದ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವಷ್ಟು ಸಮಯ ಅವರಿಗಿರಲಿಲ್ಲ.

5. ಪ್ರಮುಖ ಘಟ್ಟದಲ್ಲಿ ದುಬಾರಿಯಾಗುತ್ತಿರುವ ನೆಹ್ರಾ
ಟಿ20 ವಿಶ್ವಕಪ್ ಸರಣಿಯಲ್ಲಿ ಯುವ ಆಟಗಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡ ಅವರ ಸರಿಸಮಾನವಾಗಿ ಬೌಲ್ ಮಾಡುತ್ತಿರುವ ತಂಡದ ಹಿರಿಯ ಆಟಗಾರ ಆಶೀಶ್ ನೆಹ್ರಾ ಅವರ ಬೌಲಿಂಗ್ ಸಾಮರ್ಥ್ಯ ನಿಜಕ್ಕೂ ಶ್ಲಾಘನೀಯವೇ. ಆದರೆ ಪಂದ್ಯದ ನಿರ್ಣಾಯಕ ಘಟದಲ್ಲಿ ಇತ್ತೀಚೆಗೆ ನೆಹ್ರಾ ದುಬಾರಿಯಾಗುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನೆಹ್ರಾ 4 ಓವರ್ ಗಳನ್ನು ಎಸೆದಿದ್ದರು. ಈ ಪೈಕಿ ಒಂದು ಮೇಡಿನ್ ಓವರ್ ಕೂಡ ಇತ್ತು. ಆದರೆ ಇನ್ನುಳಿದ 3 ಓವರ್ ಗಳಲ್ಲಿ ನೆಹ್ರಾ 20 ರನ್ ನೀಡಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನೆಹ್ರಾ 4 ಓವರ್ ನಲ್ಲಿ 29 ರನ್ ನೀಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿಯೂ ನೆಹ್ರಾ 20 ರನ್ ನೀಡಿದ್ದರು. ಸಾಮಾನ್ಯ ಪರಿಸ್ಥಿತಿಯಲ್ಲಿ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕುವ ನೆಹ್ರಾ, ನಿರ್ಣಾಯಕ ಘಟ್ಟದಲ್ಲಿ ಮಾತ್ರ ಅದೇಕೋ ಕೊಂಚ ಹೆಚ್ಚು ಎನ್ನುವಂತೆ ರನ್ ಗಳನ್ನು ನೀಡುತ್ತಿದ್ದಾರೆ. ಇದನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯತೆ ನಿಜಕ್ಕೂ ಅವರಿಗಿದೆ.

ಜಾಹಿರಾತುಗಳಲ್ಲಿ “ಝಿದ್ದ್ ಕರೋ ದುನಿಯಾ ಬದ್ಲೋ” (ಹಠ ಮಾಡಿ, ಜಗತ್ತನ್ನು ಬದಲಿಸಿ) ಎಂದು ಹೇಳುವ ಧೋನಿ ಅಂಗಳದಲ್ಲಿ ಮಾತ್ರ ಹಠ ಮಾಡದೇ ಆಟಗಾರರ ವೈಫಲ್ಯವನ್ನು ಸಹಿಸಿಕೊಳ್ಳುತ್ತಿರುವುದು ಏಕೆ ಎಂಬ ಪ್ರಶ್ನೆಯನ್ನು ಕೂಡ ಹುಟ್ಟುಹಾಕುತ್ತಿದೆ. ಧೋನಿ ಪಡೆ ವಿಶ್ವಕಪ್ ಎತ್ತಿಹಿಡಿಯಲು ಇನ್ನು ಎರಡೇ ಹೆಜ್ಜೆ ಬಾಕಿ ಇದ್ದು, ಗುರುವಾರ ಸೆಮಿಫೈನಲ್ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಐಪಿಎಲ್ ನಲ್ಲಿ ಭಾರತ ತಂಡದೊಂದಿಗೆ ಪಳಗಿರುವ ವಿಂಡೀಸ್ ಪಡೆಗೆ ಭಾರತ ಹುಳುಕುಗಳ ಪರಿಚಯ ಚೆನ್ನಾಗಿಯೇ ಇದೆ. ಇನ್ನು ಫೈನಲ್ ನಲ್ಲಿ ಇಂಗ್ಲೆಂಡ್ ಅಥವಾ ನ್ಯೂಜಿಲೆಂಡ್ ಪಡೆಯನ್ನು ಭಾರತ ಎದುರಿಸಬೇಕಿದೆ. ಕಿವೀಸ್ ಪಡೆ ಈಗಾಗಲೇ ತನ್ನ ಮೊದಲ ಪಂದ್ಯದಲ್ಲಿ ಭಾರತಕ್ಕೆ ನೀರು ಕುಡಿಸಿದ್ದು, ಇಂಗ್ಲೆಂಡ್ ಪಡೆ ಎಲ್ಲ ವಿಭಾಗಗಳಲ್ಲಿಯೂ ಉತ್ತಮ ನಿರ್ವಹಣೆ ತೋರಿ ಸೆಮೀಸ್ ಹಂತಕ್ಕೇರಿದೆ. ಹೀಗಾಗಿ ಟಿ20 ವಿಶ್ವಕಪ್ ನಲ್ಲಿ ಫೇವರಿಟ್ ಪಟ್ಟಿಯಲ್ಲಿರುವ ಟೀಂ ಇಂಡಿಯಾ ತನ್ನ ತಪ್ಪುಗಳನ್ನು ತಿದ್ದಿಕೊಳ್ಳದ್ದಿದ್ದರೆ ಖಂಡಿತಾ ಅದರ ಕನಸು ಭಗ್ನವಾಗುವ ಸಾಧ್ಯತೆಗಳಿವೆ.

Write A Comment