ಮನೋರಂಜನೆ

ಇಂಡೋ-ಆಸಿಸ್ ಪಂದ್ಯದಲ್ಲಿ ತಜ್ಞರ – ಕ್ರೀಡಾಭಿಮಾನಿಗಳ ಗಮನ ಸೆಳೆದ ಐದು ಅಂಶಗಳು

Pinterest LinkedIn Tumblr

India win _March 27-2016-006

ಮೊಹಾಲಿ: ಭಾನುವಾರ ರಾತ್ರಿ ಮೊಹಾಲಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿತ್ತು.

ಕ್ರಿಕೆಟ್ ಜಗತ್ತು ಅಚ್ಚರಿಯಿಂದ ನೋಡಿದ ಈ ಪಂದ್ಯದಲ್ಲಿ ಆರಂಭದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತಾದರೂ, ಟೀಂ ಇಂಡಿಯಾ ಸಂಘಟಿತ ಹೋರಾಟ ಮತ್ತು ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ದೈತ್ಯ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಿತು. ಇಂಡೋ-ಆಸಿಸ್ ಪಂದ್ಯದಲ್ಲಿ ತಜ್ಞರ ಮತ್ತು ಕ್ರೀಡಾಭಿಮಾನಿಗಳ ಗಮನ ಸೆಳೆದ ಐದು ಅಂಶಗಳು ಇಲ್ಲಿವೆ.

ಸೋಲಿನ ನಡುವೆಯೂ ಉತ್ತಮ ಪ್ರದರ್ಶನದೊಂದಿಗೆ ವಿದಾಯ ಹೇಳಿದ ಶೇನ್ ವಾಟ್ಸನ್
ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಆಲ್ ರೌಂಡರ್ ಶೇನ್ ವಾಟ್ಸನ್ ಗೆ ಭಾನುವಾರದ ಪಂದ್ಯ ನಿಜಕ್ಕೂ ವಿದಾಯದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಗಮನ ಸೆಳೆದಿದ್ದರೂ, ಶೇನ್ ವಾಟ್ಸನ್ ಕೂಡ ತಮ್ಮ ಅದ್ಬುತ ಆಲ್ ರೌಂಡ್ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಮೊದಲು ಬ್ಯಾಟಿಂಗ್ ವೇಳೆ 2 ಸಿಕ್ಸರ್ ಮತ್ತು 2 ಬೌಂಡರಿ ಮೂಲಕ ಗಮನ ಸೆಳೆದ ವಾಟ್ಸನ್, ಬಳಿಕ ಬೌಲಿಂಗ್ ನಲ್ಲಿಯೂ 1 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದರು. ಅಂತೆಯೇ ಫಾಲ್ಕನರ್ ಬೌಲಿಂಗ್ ನಲ್ಲಿ ಯುವರಾಜ್ ಸಿಂಗ್ ನೀಡಿದ ಕ್ಯಾಚ್ ಅನ್ನು ಅದ್ಭುತವಾಗಿ ಹಿಡಿದ ವಾಟ್ಸನ್ ತಾವೊಬ್ಬ ಅದ್ಭುತ ಅಲ್ ರೌಂಡರ್ ಎಂದು ಮತ್ತೆ ಸಾಬೀತು ಪಡಿಸಿದರು.

ಅವಕಾಶ ವಂಚಿತ ಯುವಿಗೆ ಕಮ್ ಬ್ಯಾಕ್ ಪಂದ್ಯ
ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಈ ವರೆಗೂ ನಾಲ್ಕು ಪಂದ್ಯಗಳನ್ನಾಡಿದ್ದು, ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಮಾತ್ರ ಹೆಚ್ಚು ಮಿಂಚುವಲ್ಲಿ ವಿಫಲರಾಗಿದ್ದರು. ಒಂದರ್ಥದಲ್ಲಿ ನಿಜಕ್ಕೂ ಅವರು ಅವಕಾಶ ವಂಚಿತರೆಂದೇ ಹೇಳಬಹುದು. ತಂಡದಲ್ಲಿದ್ದರೂ ಕೂಡ ಬ್ಯಾಟಿಂಗ್ ಮಾಡುವ ಅವಕಾಶ ಅವರಿಗೆ ಅಷ್ಟಾಗಿ ದೊರೆತಿರಲಿಲ್ಲ. ಇನ್ನು ಬೌಲಿಂಗ್ ನಲ್ಲಿ ಕೂಡ ಅವರಿಗೆ ಹೆಚ್ಚಾಗಿ ಅವಕಾಶ ದೊರೆತಿರಲಿಲ್ಲ. ಆದರೆ ಆಸಿಸ್ ವಿರುದ್ಧದ ಪಂದ್ಯ ನಿಜಕ್ಕೂ ಯುವಿಗೆ ಕಮ್ ಬ್ಯಾಕ್ ಪಂದ್ಯವಾಗಿತ್ತು. ಮೊದಲು ಬೌಲಿಂಗ್ ನಲ್ಲಿ ಮಿಂಚಿದ ಯುವಿ 3 ಓವರ್ ಎಸೆದು ಕೇವಲ 19 ರನ್ ನೀಡಿ ಆಸಿಸ್ ತಂಡದ ನಾಯಕ ಸ್ಮಿತ್ ಅವರ ವಿಕೆಟ್ ಕಬಳಿಸಿದ್ದರು. ಬಳಿಕ ಬ್ಯಾಟಿಂಗ್ ನಲ್ಲಿ ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟ ಯುವಿ 18 ಎಸೆತಗಳಲ್ಲಿ 21 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ಯುವಿಗೆ ಇದು ನಿಜಕ್ಕೂ ಕಮ್ ಬ್ಯಾಕ್ ಪಂದ್ಯವಾಗಿತ್ತು ಎಂದು ಹೇಳಬಹುದು.

ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ
ಇಡೀ ಪಂದ್ಯ ಹಲವು ವೈಶಿಷ್ಟ್ಯತೆಗಳನ್ನು ಹೊಂದಿತ್ತಾದರೂ, ಎಲ್ಲವನ್ನು ಮರೆಮಾಚಿಸಿದ್ದು ಮಾತ್ರ ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ. ಒಂದು ಹಂತಜಲ್ಲಿ ಸೋಲಿನತ್ತ ಮುಖ ಮಾಡಿದ್ದ ಭಾರತ ತಂಡಕ್ಕೆ ಯುವರಾಜ್ ಸಿಂಗ್ ಜೊತೆ ಗೂಡಿ ಕೊಹ್ಲಿ ರನ್ ಪ್ರವಾಹವನ್ನೇ ಹರಿಸಿದ್ದರು. ಸ್ಲಾಗ್ ಓವರ್ ಗಳಲ್ಲಿ ಆಸಿಸ್ ನ ಬೌಲರ್ ಗಳನ್ನು ದಂಡಿಸಿದ್ದ ಕೊಹ್ಲಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಕೇವಲ 51 ಎಸೆತಗಳಲ್ಲಿ 82 ರನ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಕೇವಲ ಗೆಲುವು ಮಾತ್ರವಲ್ಲದೇ ಈ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಮತ್ತೆ ಗೆಲುವಿನ ರನ್ ಸಿಡಿಸಿದ ನಾಯಕ ಧೋನಿ
ಕಳೆದ ಹಲವು ಪಂದ್ಯಗಳಿಂದ ಗೆಲುವಿನ ರನ್ ಗಳನ್ನು ಸಿಡಿಸುತ್ತಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಆಸಿಸ್ ವಿರುದ್ಧದ ಪಂದ್ಯದಲ್ಲಿಯೂ ಅದನ್ನು ಮುಂದುವರೆಸಿದ್ದು, ನಿನ್ನೆಯ ಪಂದ್ಯದಲ್ಲಿ ಬೌಂಡರಿ ಸಿಡಿಸುವ ಮೂಲಕ ಗೆಲುವಿನ ರನ್ ಸಿಡಿಸಿದರು. ಕೊಹ್ಲಿ ಮತ್ತು ಧೋನಿ ಜೋಡಿ ಕೇವಲ 31 ಎಸೆತಗಳಲ್ಲಿ ಬರೊಬ್ಬರಿ 67 ರನ್ ಸಿಡಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಆಸಿಸ್ ನ ಉತ್ತಮ ಆರಂಭ ವರ್ಸಸ್ ಭಾರತದ ಅತ್ಯುತ್ತಮ ಫಿನಿಶಿಂಗ್
ಮೊಹಾಲಿ ಪಂದ್ಯ ನಿಜಕ್ಕೂ ಆಸ್ಟ್ರೇಲಿಯಾದ ಉತ್ತಮ ಆರಂಭ ವರ್ಸಸ್ ಭಾರತದ ಅತ್ಯುತ್ತಮ ಫಿನಿಶಿಂಗ್ ಎಂಬತಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆ್ಯರಾನ್ ಫಿಂಚ್ ಮತ್ತು ಖವಾಜಾ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆದಿತ್ತು. ಕೇವಲ 26 ಎದುರಿಸಿದ ಈ ಜೋಡಿ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ 54 ರನ್ ಸಿಡಿಸಿತ್ತು. ಆದರೆ ಆ ಬಳಿಕ ಭಾರತ ತಿರುಗಿ ಬೀಳುವುದರೊಂದಿಗೆ ಆಸ್ಟ್ರೇಲಿಯಾ ತಂಡ 160 ರನ್ ಗಳ ಮೊತ್ತ ಸಿಡಿಸಿ ಭಾರತಕ್ಕೆ 161 ರನ್ ಗಳ ಗುರಿ ನೀಡಿತ್ತು. ಈ ಸವಾಲಿನ ಮೊತ್ತ ಬೆನ್ನುಹತ್ತಿದ ಭಾರತದ ಆರಂಭ ನಿಜಕ್ಕೂ ಅಷ್ಟೇನೂ ಉತ್ತಮವಾಗಿರಲಿಲ್ಲ. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ನಿಧಾನಗತಿಯ ಬ್ಯಾಟಿಂಗ್ ತಂತ್ರಗಾರಿಕೆ ನಿಜಕ್ಕೂ ವಿಫಲವಾಗಿತ್ತು. 23 ಎಸೆತಗಳನ್ನು ಎದುರಿಸಿದ ಈ ಜೋಡಿ ಕೇವಲ 23 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ಆ ಬಳಿಕ ಜೊತೆಗೂಡಿದ ಕೊಹ್ಲಿ-ಯುವರಾಜ್ ಸಿಂಗ್ ಜೋಡಿ (38 ಎಸೆತ. 45 ರನ್) ಮತ್ತು ಕೊಹ್ಲಿ-ಧೋನಿ (31 ಎಸೆತ, 67 ರನ್) ಸಿಡಿಸುವ ಮೂಲಕ ಆಸಿಸ್ ವಿರುದ್ಧ ಗೆದ್ದು ಬೀಗಿತು.

Write A Comment