ಹೈದರಾಬಾದ್, ಮಾ. ೨೬ – ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಉಪಕುಲಪತಿ ನಿವಾಸದ ಬಳಿ ಪ್ರತಿಭಟನೆ ಮತ್ತು ಹಿಂಸಾಚಾರ ನಡೆಸಿದ ಆರೋಪದಲ್ಲಿ ಇನ್ನು 20 ಮಂದಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈಗಾಗಲೇ 25 ಮಂದಿ ವಿದ್ಯಾರ್ಥಿಗಳು ಇದೇ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗ ಮತ್ತೆ 20 ಮಂದಿ ವಿದ್ಯಾರ್ಥಿಗಳ ವಿರುದ್ಧ ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಇಪ್ಪತ್ತು ಮಂದಿ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಯರೂ ಇದ್ದಾರೆ.
ಪ್ರಕರಣ ದಾಖಲೆಯಿಂದ ಹೆದರಿರುವ ವಿದ್ಯಾರ್ಥಿನಿಯರು ನಾವು ಹಿಂಸಾಚಾರ ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದು ಪೊಲೀಸರಿಗೆ ಹೇಳುತ್ತಿದ್ದಾರೆ.
ವಿವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿರುವ ವಿದ್ಯಾರ್ಥಿಗಳು ಕಸ್ಟಡಿಯಲ್ಲಿರಬೇಕು, ಇಲ್ಲದಿದ್ದರೆ ಮತ್ತೆ ಪ್ರತಿಭಟನೆಯಲ್ಲಿ ತೊಡಗುತ್ತಾರೆ ಎಂದು ಪೊಲೀಸರು ಪ್ರತಿಪಾದಿಸುತ್ತಿದ್ದಾರೆ. ಹಾಗೆಯೇ ಬಂಧನದಲ್ಲಿರುವ ಬಹುಪಾಲು ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ಸೇರಿದವರಾದ್ದರಿಂದ ಇವರನ್ನು ಬಿಡುಗಡೆ ಮಾಡಿದರೆ ಮತ್ತೆ ಅವರು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಗಳು ಇಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ವಿವಿಯ ಸಂಶೋಧನಾ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದ ಉಪಕುಲಪತಿ ಅಪ್ಪಾ ರಾವ್ ಪೋಡಿಲೆ, ಎರಡು ತಿಂಗಳ ರಜೆಯ ನಂತರ ಮತ್ತೆ ಕರ್ತವ್ಯಕ್ಕೆ ಹಾಜರಾದರು.
ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಉಪಕುಲಪತಿ ನಿವಾಸಕ್ಕೆ ಮುತ್ತಿಗೆ ಹಾಕಿ ಭಾರಿ ದಾಂಧಲೆ ಮಾಡಿದ್ದರು. ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಈ ದಾಂಧಲೆ ಹಿನ್ನೆಲೆಯಲ್ಲಿ 25 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಅವರೆಲ್ಲ ನ್ಯಾಯಾಂಗ ಬಂಧನದಲ್ಲಿದ್ದಾರೆ.