ಮನೋರಂಜನೆ

ಭಾರತಕ್ಕೆ ಗೆಲುವು ತಂದುಕೊಟ್ಟ ಆ ಕೊನೆಯ ಓವರ್ ಹೀಗಿತ್ತು…..!

Pinterest LinkedIn Tumblr

ind

ಬೆಂಗಳೂರು: ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್‍ನಲ್ಲಿ ಮುಶ್ಫಿಕರ್ ರಹೀಂ ಸತತ 2 ಬೌಂಡರಿ ಸಿಡಿಸಿದಾಗ ಭಾರತದ ಅಭಿಮಾನಿಗಳ ಎದೆಯಲ್ಲಿ ಢವ ಢವ. ಆದರೆ ಕೊನೆಯ ಮೂರು ಎಸೆತ ಪಂದ್ಯದ ಚಿತ್ರಣವನ್ನೇ ಬದಲಾಯಿಸಿ ಭಾರತಕ್ಕೆ ಒಂದು ರನ್‍ ಜಯವನ್ನು ತಂದುಕೊಟ್ಟಾಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಬಾಂಗ್ಲಾ ಗೆಲ್ಲಲು ಕೊನೆಯ 2 ಓವರ್‍ಗಳಲ್ಲಿ 17ರನ್‍ಗಳ ಅಗತ್ಯವಿತ್ತು. 19ನೇ ಓವರ್‍ನ್ನು ಎಸೆದ ಜಸ್‍ಪ್ರೀತ್ ಬುಮ್ರಾ 6 ರನ್ ನೀಡಿದರು. ಹೀಗಾಗಿ ಕೊನೆಯ ಓವರ್‍ನಲ್ಲಿ 11 ರನ್‍ಗಳ ಅವಶ್ಯಕತೆ ಇತ್ತು.

ಕೊನೆಯ ಓವರ್‍ನ್ನು ಎಸೆಯಲು ಬಂದಿದ್ದು ಹಾರ್ದಿಕ್ ಪಾಂಡ್ಯ. ಬಾಲನ್ನು ಕೈಗೆ ನೀಡುವಾಗಲೇ ಧೋನಿ ಮತ್ತು ಉಳಿದ ಆಟಗಾರರು ಪಾಂಡ್ಯ ಅರನ್ನು ಹುರಿದುಂಬಿಸಿದರು. ರೈನಾ ನಗುಮುಖದಿಂದಲೇ ಪಾಂಡ್ಯ ಕೈಗೆ ಬಾಲನ್ನು ನೀಡುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದರು.

ಮೊದಲ ಎಸೆತದಲ್ಲಿ ಮಹಮದುಲ್ಲ 1ರನ್ ತೆಗೆದರು. ಈ ವೇಳೆ ಸ್ಟ್ರೈಕ್‍ಗೆ ಮುಶ್ಫಿಕರ್ ರಹೀಂ ಬಂದರು. ಬಂದವರೇ ಎರಡು ಮತ್ತು ಮೂರನೇ ಎಸೆತವನ್ನು ಬೌಂಡರಿ ಅಟ್ಟಿದರು. ಹೀಗಾಗಿ ಕೊನೆಯ ಮೂರು ಎಸೆತದಲ್ಲಿ ಬಾಂಗ್ಲಾ ಜಯಗಳಿಸಲು 2 ರನ್‍ಗಳ ಅಗತ್ಯವಿತ್ತು.

4ನೇ ಎಸೆತವನ್ನು ಎತ್ತಿ ಭಾರಿಸಲು ಹೋದ ಮುಶ್ಫಿಕರ್ ರಹೀಂ ಡೀಪ್ ಮಿಡ್‍ವಿಕೆಟ್‍ನಲ್ಲಿ ಧವನ್‍ಗೆ ಕ್ಯಾಚ್ ನೀಡಿ ಹೊರನಡೆದರು. ನಂತರ ಬಂದ ಮಹಮದುಲ್ಲ 5ನೇ ಎಸೆತವನ್ನು ಸಿಕ್ಸರ್ ಹೊಡೆಯಲು ಹೋಗಿ ಜಡೇಜಾಗೆ ಕ್ಯಾಚ್‍ನೀಡಿ ಔಟಾದರು.

ಈಗ ಕೊನೆಯ ಎಸೆತ. ಒಂದು ಬಾಲಿಗೆ ಎರಡು ರನ್‍ಗಳಿಸಿದರೆ ಬಾಂಗ್ಲಾ ಜಯಗಳಿಸುತ್ತದೆ. ಒಂದು ವೇಳೆ ಒಂದು ರನ್ ಓಡಿ ಪಂದ್ಯ ಟೈ ಆದರೂ ಭಾರತದ ಸೆಮಿಫೈನಲ್ ಕನಸು ನುಚ್ಚುನೂರು ಆಗುತ್ತದೆ. ಹೀಗಾಗಿ ಧೋನಿ ಮತ್ತೆ ಪಾಂಡ್ಯ ಬಳಿ ಹೋಗಿ ಟಿಪ್ಸ್ ನೀಡುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿದರು.

ಕೊನೆಯ ಎಸೆತವನ್ನು ಎದುರಿಸಲು ಕ್ರೀಸ್‍ನಲ್ಲಿ ಇದ್ದಿದ್ದು ಶುವಾಗತ ಹೊಮ್. ಕೊನೆಯ ಎಸೆತ ಬ್ಯಾಟ್‍ಗೆ ಸಿಗದ ಕಾರಣ ಬಾಲ್ ನೇರವಾಗಿ ಧೋನಿ ಕೈ ಸೇರಿತು. ಆದರೆ ಈ ವೇಳೆ ರನ್ ಓಡಲು ಯತ್ನಿಸಿದ ಮುಸ್ತಫಿಜುರ್ ರೆಹಮಾನ್ ಅವರನ್ನು ಧೋನಿ ರನ್‍ಔಟ್ ಮಾಡಿದರು. ಈ ಔಟ್ ತೀರ್ಪನ್ನು ನೀಡುವಂತೆ ಅಂಪೈರ್ ಮೂರನೇ ಅಂಪೈರ್ ಜೊತೆ ಕೇಳಿಕೊಂಡರು. ಮೂರನೇ ಅಂಪೈರ್ ರಿಪ್ಲೈ ತೋರಿಸುತ್ತಿದ್ದತೆ ಭಾರತೀಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಮೂರನೇ ಅಂಪೈರ್ ಸ್ಕ್ರೀನ್‍ನಲ್ಲಿ ಔಟ್ ಎಂದು ಹೇಳುತ್ತಿದ್ದಂತೆ ಟೀಂ ಇಂಡಿಯಾ ಒಂದು ರನ್‍ನಿಂದಾಗಿ ರೋಚಕ ಜಯಗಳಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿಸಿಕೊಂಡಿತು.

ಇಲ್ಲೂ ಧೋನಿ ತಮ್ಮ ಬುದ್ಧಿ ಶಕ್ತಿಯನ್ನು ಉಪಯೋಗಿಸಿದ್ದು ಬಾಲನ್ನು ನೇರವಾಗಿ ವಿಕೆಟ್ ಗೆ ಎಸೆಯದೇ ಕೈಯಿಂದಲೇ ರನ್ ಔಟ್ ಮಾಡುವ ಮೂಲಕ ಭಾರತದ ಗೆಲುವಿಗೆ ಕಾರಣಾರಾದರು.

ಅಂಕ ಪಟ್ಟಿಯಲ್ಲಿ ಇದೀಗ ಭಾರತ ಎರಡನೇ ಸ್ಥಾನಕ್ಕೇರಿದ್ದು, ಮಾರ್ಚ್ 27 ರಂದು ಆಸ್ಟ್ರೇಲಿಯಾ ವಿರುದ್ಧ ಅಂತಿಮ ಪಂದ್ಯವನ್ನು ಆಡಲಿದೆ. 4 ಓವರ್‍ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದ ಆರ್ ಅಶ್ವಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Write A Comment