ಅಂತರಾಷ್ಟ್ರೀಯ

ಬ್ರಸಲ್ಸ್: ಇನ್ಫೊಸಿಸ್ ಟೆಕ್ಕಿ ನಾಪತ್ತೆ ! ಸ್ಫೋಟದ ನಂತರ ಸಾಧ್ಯವಾಗದ ಸಂಪರ್ಕ -ಕುಟುಂಬದಲ್ಲಿ ಆತಂಕ

Pinterest LinkedIn Tumblr

New Delhi: Infosys employee Raghvendra Ganesh who has been missing after terror attacks in Brussels. Indian Embassy in the Brussels is making efforts to locate him. PTI Photo / (Sushma Swaraj's Twitter)   (PTI3_23_2016_000242B)

ನವದೆಹಲಿ:ಬೆಲ್ಜಿಯಂ ರಾಜಧಾನಿ ಬ್ರಸಲ್ಸ್‌ನಲ್ಲಿ ಮಂಗಳವಾರ ನಡೆದ ಸರಣಿ ಸ್ಫೋಟದ ನಂತರ ಇನ್ಫೊಸಿಸ್‌ ಉದ್ಯೋಗಿ ತಮಿಳುನಾಡು ಮೂಲದ ರಾಘವೇಂದ್ರನ್‌ ಗಣೇಶನ್‌ ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಮಾಡಲು ಬ್ರಸಲ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಯತ್ನ ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

‘ರಾಘವೇಂದ್ರನ್‌ ಗಣೇಶನ್‌ ಅವರನ್ನು ಪತ್ತೆ ಮಾಡಲು ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ’ ಎಂದು ಸುಷ್ಮಾ ಅವರು ಟ್ವೀಟ್‌ ಮಾಡಿದ್ದಾರೆ. ರಾಘವೇಂದ್ರನ್‌ ಅವರ ಫೋಟೊವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಸುಷ್ಮಾ, ಅವರ ಪತ್ತೆಗೆ ನೆರವಾಗುವಂತೆ ಕೋರಿದ್ದಾರೆ.

ಬ್ರಸಲ್ಸ್‌ನಲ್ಲಿ ಸರಣಿ ಸ್ಫೋಟ ನಡೆಯುವುದಕ್ಕೆ ಒಂದು ತಾಸು ಮುಂಚೆ ರಾಘವೇಂದ್ರನ್‌ ಅವರು ಮುಂಬೈಯಲ್ಲಿರುವ ತಮ್ಮ ತಾಯಿ ಅಣ್ಣಪೂರ್ಣಿ ಗಣೇಶನ್‌ ಜತೆ ಮಾತನಾಡಿದ್ದರು.

ಸುಷ್ಮಾ ಅವರು ಅಣ್ಣಪೂರ್ಣಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ರಾಘವೇಂದ್ರನ್‌ ಅವರನ್ನು ಪತ್ತೆ ಮಾಡಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಸುಷ್ಮಾ ಭರವಸೆ ನೀಡಿದ್ದಾರೆ.

ಮಂಗಳವಾರ ಕೆಲಸಕ್ಕೆ ಹೋಗುವ ಮೊದಲು ರಾಘವೇಂದ್ರನ್‌ ಜತೆ ಮಾತನಾಡಿರುವುದಾಗಿ ಅಣ್ಣಪೂರ್ಣಿ ಅವರು ಸುಷ್ಮಾ ಅವರಿಗೆ ತಿಳಿಸಿದ್ದಾರೆ. ಸ್ಫೋಟ ನಡೆದ ಮೆಟ್ರೊ ರೈಲು ಸಾರಿಗೆ ಮೂಲಕ ರಾಘವೇಂದ್ರನ್‌ ದಿನವೂ ಕೆಲಸಕ್ಕೆ ಹೋಗುತ್ತಿದ್ದರು. ಸ್ಫೋಟದ ನಂತರ ರಾಘವೇಂದ್ರನ್‌ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಅಣ್ಣಪೂರ್ಣಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

‘ಒಬ್ಬ ಉದ್ಯೋಗಿಯನ್ನು ಸಂಪರ್ಕಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಇತರ ಎಲ್ಲ ಉದ್ಯೋಗಿಗಳನ್ನೂ ಸಂಪರ್ಕಿಸಲಾಗಿದೆ. ನಾಪತ್ತೆಯಾಗಿರುವ ವ್ಯಕ್ತಿಯ ಕುಟುಂಬದ ಜತೆ ಸಂಪರ್ಕದಲ್ಲಿದ್ದೇವೆ. ಆದ್ಯತೆಯ ಮೇರೆಗೆ ನಮ್ಮ ಉದ್ಯೋಗಿಯನ್ನು ಪತ್ತೆ ಮಾಡಲು ಬ್ರಸಲ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಕೋರಿದ್ದೇವೆ’ ಎಂದು ಬೆಂಗಳೂರಿನಿಂದ ಇನ್ಫೊಸಿಸ್‌ ಹೇಳಿಕೆ ನೀಡಿದೆ.

ರಾಘವೇಂದ್ರನ್‌ ಮೊದಲು ಪುಣೆ ಇನ್ಫೊಸಿಸ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಾಲ್ಕು ವರ್ಷ ಹಿಂದೆ ಅವರನ್ನು ಬ್ರಸಲ್ಸ್‌ಗೆ ವರ್ಗಾಯಿಸಲಾಗಿತ್ತು.

‘ಮಂಗಳವಾರದಿಂದಲೇ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಸಂಪರ್ಕ ಸಾಧ್ಯವಾಗಿಲ್ಲ ಎಂಬುದು ಆತಂಕದ ವಿಚಾರವಾಗಿದೆ’ ಎಂದು ಬೆಲ್ಜಿಯಂಗೆ ಭಾರತದ ರಾಯಭಾರಿಮಂಜೀವ್‌ ಸಿಂಗ್‌ ಪುರಿ ತಿಳಿಸಿದ್ದಾರೆ.

ಬ್ರಸಲ್ಸ್‌ನಲ್ಲಿರುವ ಇನ್ಫೊಸಿಸ್‌ ಸಿಬ್ಬಂದಿ ಕೂಡ ರಾಘವೇಂದ್ರನ್‌ ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ ಎಂದು ಪುರಿ ಹೇಳಿದ್ದಾರೆ.

Write A Comment