ಮನೋರಂಜನೆ

ಯುಎಇ ವಿರುದ್ಧ ದೋನಿ ಬಳಗಕ್ಕೆ ಸುಲಭ ಜಯ

Pinterest LinkedIn Tumblr

Indo-UAE

ಮೀರ್‌ಪುರ್: ನಿರೀಕ್ಷೆಯಂತೆ ಭಾರತ ತಂಡವು ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಗುರುವಾರ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು.

ಏಷ್ಯಾ ಕಪ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಕಳೆದ ಮೂರು ಪಂದ್ಯಗಳಲ್ಲಿಯೂ ಗೆದ್ದು ಈಗಾಗಲೇ ಫೈನಲ್ ತಲುಪಿರುವ ಮಹೇಂದ್ರಸಿಂಗ್ ದೋನಿ ಬಳಗಕ್ಕೆ ಯುಎಇ ಸುಲಭದ ತುತ್ತಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಯುಎಇ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 81 ರನ್ ಗಳಿಸಿದರು. ಸುಲಭದ ಗುರಿಯನ್ನು ಬೆನ್ನತ್ತಿದ ಭಾರತ ತಂಡವು 10.1 ಓವರ್‌ಗಳಲ್ಲಿ 1 ವಿಕೆಟ್‌ಗೆ 82 ರನ್ ಗಳಿಸಿ ಜಯದ ಸಂಭ್ರಮ ಆಚರಿಸಿತು. ಇದರೊಂದಿಗೆ ಲೀಗ್ ಹಂತದ ಎಲ್ಲ ಪಂದ್ಯಗಳಲ್ಲಿಯೂ ದೋನಿ ಬಳಗವು ಜಯಿಸಿದ ಸಾಧನೆ ಮಾಡಿತು. ಫೈನಲ್‌ನಲ್ಲಿ ಆತಿಥೇಯ ಬಾಂಗ್ಲಾ ತಂಡವನ್ನು ಎದುರಿಸಲಿದೆ.

ಆರಂಭದಲ್ಲಿ ಭಾರತ ತಂಡದ ಬೌಲರ್‌ಗಳನ್ನು ಎದುರಿಸಲು ಪರದಾಡಿತು. ಆರಂಭಿಕ ಬ್ಯಾಟ್ಸ್‌ಮನ್‌ ಗಳಾದ ರೋಹನ್ ಮುಸ್ತಫಾ ಮತ್ತು ಸ್ವಪ್ನಿಲ್ ಪಾಟೀಲ ಮೊದಲ ಎರಡು ಓವರ್‌ಗಳಲ್ಲಿ ಒಂದೂ ರನ್ ಗಳಿಸಲಿಲ್ಲ.

ನೇಗಿ ಪದಾರ್ಪಣೆ: ಭಾರತ ತಂಡವು ಈಗಾಗಲೇ ಫೈನಲ್ ಪ್ರವೇಶಿಸಿದ್ದರಿಂದ ಯುಎಇ ವಿರುದ್ಧದ ಪಂದ್ಯವು ಔಪಚಾರಿಕವಾಗಿತ್ತು. ಅದೇ ಕಾರಣಕ್ಕಾಗಿ ಕಾಯ್ದಿಟ್ಟ ಆಟಗಾರರು ಕಣಕ್ಕಿಳಿಯಲು ಅವಕಾಶ ಸಿಕ್ಕಿತು.

ಎಡಗೈ ಆಲ್‌ರೌಂಡರ್ ಪವನ್ ನೇಗಿ ಪದಾರ್ಪಣೆ ಮಾಡಿದರು. ಅನುಭವಿ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್, ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಅವರು ಆಡಿದರು. ಆಶಿಶ್ ನೆಹ್ರಾ, ರವೀಂದ್ರ ಜಡೇಜ, ಆರ್. ಅಶ್ವಿನ್ ವಿಶ್ರಾಂತಿ ಪಡೆದರು.

ಈ ಪಂದ್ಯದಲ್ಲಿ ಯುಇಎ ತಂಡವು ಭಾರತಕ್ಕೆ ಯಾವ ಹಂತದಲ್ಲಿಯೂ ಕಠಿಣ ಸವಾಲು ಒಡ್ಡಲು ಸಾಧ್ಯವಾಗಲಿಲ್ಲ. ಯುಎಇ ಆಟಗಾರರು ಆರಂಭ ದಿಂದಲೇ ಭಾರತದ ಬೌಲರ್‌ ಗಳನ್ನು ದಿಟ್ಟತನದಿಂದ ಎದುರಿಸಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹನ್ ಮುಸ್ತಫಾ ಮತ್ತು ಸ್ವಪ್ನಿಲ್ ಪಾಟೀಲ ಮೊದಲ ಎರಡು ಓವರ್‌ಗಳಲ್ಲಿ ಒಂದೂ ರನ್ ಗಳಿಸಲಿಲ್ಲ.

ಆದರೆ, ಮೂರನೇ ಓವರ್‌ನಲ್ಲಿ ಭುವನೇಶ್ವರಕುಮಾರ್ ಎಸೆತದಲ್ಲಿ ಸ್ವಪ್ಪಿಲ್ ಪಾಟೀಲ ವಿಕೆಟ್ ಒಪ್ಪಿಸಿದರು.

ನಂತರದ ಓವರ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಅವರ ಎಸೆತವನ್ನು ಹೊಡೆದ ಮೊಹಮ್ಮದ್ ಶೆಹಜಾದ್ ಅವರು ಸುರೇಶ್ ರೈನಾಗೆ ಕ್ಯಾಚ್ ನೀಡಿದರು.
ಮುಸ್ತಫಾ ಜೊತೆಗೂಡಿ ಶೈಮನ್ ಅನ್ವರ್ (43 ರನ್)ನಿಧಾನವಾಗಿ ಆಡಿ ರನ್ ಗಳಿಸುವ ಯತ್ನ ಮಾಡಿದರು. ಒಂಬತ್ತನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಮುಸ್ತಫಾ ಅವರನ್ನು ಔಟ್ ಮಾಡಿ ಜೊತೆಯಾಟವನ್ನು ಮುರಿದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ವಲ್ಪಮಟ್ಟಿನ ಪ್ರಯತ್ನ ನಡೆಸಿದ ಮುಹಮ್ಮದ್ ಉಸ್ಮಾನ್ ಅವರ ವಿಕೆಟ್ ಪಡೆದ ಪವನ್ ನೇಗಿ ಪದಾರ್ಪಣೆಯ ಸಂಭ್ರಮ ಆಚರಿಸಿದರು.

ಶೈಮನ್ ಅನ್ವರ್ ಏಕಾಂಗಿ ಹೋರಾಟ ಮುಂದುವರಿಯಿತು. ಕೊನೆಯ ಓವರ್‌ನಲ್ಲಿ ಅವರನ್ನು ಮಹೇಂದ್ರಸಿಂಗ್ ದೋನಿ ರನೌಟ್ ಮಾಡಿದರು. ಅಲ್ಲಿಗೆ ಯುಎಇ ಹೋರಾಟ ಅಂತ್ಯ ಕಂಡಿತು.

ಸುಲಭದ ಮೊತ್ತ ಬೆನ್ನತ್ತಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬಿರುಸಿನ ಆಟಕ್ಕೆ ಇಳಿದರು. ಎದುರಾಳಿ ಬೌಲರ್‌ಗಳನ್ನು ದಂಡಿಸಿದರು. ಏಳು ಬೌಂಡರಿ, ಒಂದು ಭರ್ಜರಿ ಸಿಕ್ಸರ್‌ ಇದ್ದ 39 ರನ್ ಗಳಿಸಿದರು. ಅದಕ್ಕಾಗಿ ಅವರು ಕೇವಲ 28 ಎಸೆತಗಳನ್ನು ಆಡಿದರು.

ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಶಿಖರ್ ಧವನ್ (ಔಟಾಗದೆ 19) ಮತ್ತು ರೋಹಿತ್ ಮೊದಲ ವಿಕೆಟ್ ಜೊತೆಯಾಟದಲ್ಲಿ 43 ರನ್ ಗಳಿಸಿದರು.
ಆರನೇ ಓವರ್‌ನಲ್ಲಿ ರೋಹಿತ್ ಶರ್ಮಾ ಮೊಹಮ್ಮದ್ ನಾವೀದ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಯುವರಾಜ್ ಸಿಂಗ್ (ಔಟಾಗದೆ 25) ಶಿಖರ್ ಧವನ್ ಜೊತೆಗೂಡಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು.

ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದ ಯುವಿ 14 ಎಸೆತಗಳ್ಲಲಿ 4ಬೌಂಡರಿ, 1 ಸಿಕ್ಸರ್ ಇದ್ದ 25 ರನ್‌ಗಳನ್ನು ಹೊಡೆದರು. ಇನಿಂಗ್ಸ್‌ನಲ್ಲಿ ಇನ್ನೂ 59 ಎಸೆತಗಳು ಬಾಕಿ ಇರುವಂತೆಯೇ ತಂಡವು ಜಯಿಸಿತು.

ಸ್ಕೋರ್‌ಕಾರ್ಡ್‌
ಯುಎಇ 9 ಕ್ಕೆ 81 (20 ಓವರ್‌ಗಳಲ್ಲಿ)

ರೋಹನ್ ಮುಸ್ತಫಾ ಸಿ ವಿರಾಟ್ ಕೊಹ್ಲಿ ಬಿ ಹಾರ್ದಿಕ್ ಪಾಂಡ್ಯ 11
ಸ್ವಪ್ನಿಲ್ ಪಾಟೀಲ ಸಿ ಮತ್ತು ಬಿ ಭುವನೇಶ್ವರ್‌ಕುಮಾರ 01
ಮೊಹಮ್ಮದ್ ಶಹಜಾದ್ ಸಿ ಸುರೇಶ್ ರೈನಾ ಬಿ ಜಸ್‌ಪ್ರೀತ್ ಬೂಮ್ರಾ 00
ಶೈಮನ್ ಅನ್ವರ್ ರನ್‌ಔಟ್ (ದೋನಿ) 43
ಮುಹಮ್ಮದ್ ಉಸ್ಮಾನ್ ಸಿ ಹರಭಜನ್ ಸಿಂಗ್ ಬಿ ಪವನ್ ನೇಗಿ 09
ಅಮ್ಜದ್ ಜಾವೇದ್ ಸಿ ಪವನ್ ನೇಗಿ ಬಿ ಹರಭಜನ್ ಸಿಂಗ್ 00
ಮುಹಮ್ಮದ್ ಕಲೀಂ ಸಿ ಹಾರ್ದಿಕ್ ಪಾಂಡ್ಯ ಬಿ ಯುವರಾಜ್ ಸಿಂಗ್ 02
ಫಹಾದ್ ತಾರೀಕ್ ರನ್‌ಔಟ್ (ನೇಗಿ/ದೋನಿ) 03
ಮೊಹಮ್ಮದ್ ನವೀದ್ ಸಿ ನೇಗಿ ಬಿ ಭುವನೇಶ್ವರಕುಮಾರ್ 05
ಅಹಮದ್ ರಜಾ ಔಟಾಗದೆ 00
ಖಾದೀರ್ ಅಹಮದ್ ಔಟಾಗದೆ 00

ಇತರೆ: (ಲೆಗ್‌ಬೈ 2, ವೈಡ್ 5) 07
ವಿಕೆಟ್‌ ಪತನ: 1–1 (ಪಾಟೀಲ; 2.4), 2–2 (ಶಹಜಾದ್; 3.3), 3–25 (ರೋಹನ್; 8.4), 4–51 (ಮುಹಮ್ಮದ್ ಉಸ್ಮಾನ್; 12.5), 5–53 (ಅಮ್ಜದ್; 13.2), 6–62 (ಕಲೀಂ; 15.5), 7–66 (ಫಹಾದ್;16.6), 8–80 (ಮೊಹಮ್ಮದ್ ನವೀದ್; 19.2), 9–81 (ಶೈಮನ್ ಅನ್ವರ್; 19.5)

ಬೌಲಿಂಗ್‌: ಭುವನೇಶ್ವರ್‌ಕುಮಾರ್ 4–2–8–2 (ವೈಡ್1), ಜಸ್‌ಪ್ರೀತ್ ಬುಮ್ರಾ 4–0–24–1 (ವೈಡ್ 1), ಹಾರ್ದಿಕ್ ಪಾಂಡ್ಯ 3–1–11–1 (ವೈಡ್1), ಹರಭಜನ್ ಸಿಂಗ್ 4–1–11–1 (ವೈಡ್ 1), ಪವನ್ ನೇಗಿ 3–0–16–1, ಯುವರಾಜ್ ಸಿಂಗ್ 2–0–10–1 (ವೈಡ್ 1)
ಭಾರತ 1 ಕ್ಕೆ 82 (10.1 ಓವರ್‌ಗಳಲ್ಲಿ)
ರೋಹಿತ್ ಶರ್ಮಾ ಸಿ ಮೊಹಮ್ಮದ್ ನವೀದ್ ಬಿ ಖಾದೀರ್ ಅಹಮದ್ 39
ಶಿಖರ್ ಧವನ್ ಔಟಾಗದೆ 16
ಯುವರಾಜ್ ಸಿಂಗ್ ಔಟಾಗದೆ 25
ಇತರೆ: (ವೈಡ್ 1, ನೋಬಾಲ್ 1) 02
ವಿಕೆಟ್‌ ಪತನ: 1–43 (ರೋಹಿತ್‌; 5.5).
ಬೌಲಿಂಗ್‌: ಮೊಹಮ್ಮದ್ ನವೀದ್ 4–0–21–0 (ನೋಬಾಲ್ 1, ವೈಡ್1), ಅಮ್ಜದ್ ಜಾವೇದ್ 2–0–18–0, ಖಾದೀರ್ ಅಹಮದ್ 2–0–23–1, ಮೊಹಮ್ಮದ್ ಶೆಹಜಾದ್ 1.1–0–14–0, ರೋಹನ್ ಮುಸ್ತಫಾ 1–0–6–0

ಫಲಿತಾಂಶ: ಭಾರತಕ್ಕೆ 9 ವಿಕೆಟ್‌ಗಳ ಜಯ.
ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ (ಭಾರತ)

Write A Comment