ದೆಹಲಿ: ಪಾನ್ ಮಸಾಲಾ ಉತ್ಪನ್ನದ ಪ್ರಚಾರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬೇಡಿ ಎಂದು ಬಾಲಿವುಡ್ ನಟರ ಪತ್ನಿಗೆ ಆಪ್ ಸರ್ಕಾರ ಪತ್ರ ಬರೆದು ಮನವಿ ಮಾಡಿಕೊಂಡಿದೆ.
ಈ ಹಿಂದೆ ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ನಟರಿಗೆ ಮನವಿ ಮಾಡಿಕೊಂಡಿತ್ತು. ಆದರೆ ಅವರು ಅದಕ್ಕೆ ಸ್ಪಂದಿಸದ ಕಾರಣ ಈ ಬಾರಿ ನಟರ ಪತ್ನಿಗೆ ಪತ್ರ ಬರೆದು ವಿನಂತಿ ಮಾಡಿಕೊಂಡಿದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾನ್ ಮಸಾಲಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳದಂತೆ ನಿಮ್ಮ ಗಂಡನ ಮನವೊಲಿಸಿ ಎಂದು ಶಾರುಖ್ ಪತ್ನಿ ಗೌರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಪಾನ್ ಮಸಾಲಾದಲ್ಲಿ ತಂಬಾಕು ಇಲ್ಲದಿದ್ದರೂ ಕೂಡಾ ಅಡಿಕೆ ಇರುತ್ತದೆ. ಇದು ಕ್ಯಾನ್ಸರ್ ಕಾರಕ ಎಂದು ಸಾಬೀತುಪಡಿಸಲು ಹಲವು ವೈಜ್ಞಾನಿಕ ಸಾಕ್ಷ್ಯಗಳಿವೆ ಎಂದು ಪತ್ರದಲ್ಲಿ ವಿವರಿಸಿದೆ.
ಅದೇ ರೀತಿ ಅಜಯ್ ದೇವಗನ್ ಪತ್ನಿ ಕಾಜೋಲ್, ಅರ್ಬಾಜ್ ಖಾನ್ ಪತ್ನಿ ಮಲೈಕಾ ಅರೋರಾ ಮತ್ತು ಗೋವಿಂದ ಪತ್ನಿ ಸುನಿತಾ ಅಹುಜಾಗೆ ಪತ್ರ ಬರೆದು ವಿನಂತಿಸಿಕೊಂಡಿದೆ.