ಕರ್ನಾಟಕ

ಕೂಗಾಟವೇ ಮೇಲ್ಮನೆಯ ಕಲಾಪ

Pinterest LinkedIn Tumblr

kalapaಬೆಂಗಳೂರು, ಮಾ. ೨- ದುಬಾರಿ ವಾಚ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ನಡೆಸುತ್ತಿರುವ ಧರಣಿಯನ್ನು ಇಂದು ಮುಂದುವರಿಸಿದ್ದರಿಂದ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಕಾವೇರಿದ ವಾತಾವರಣದಲ್ಲಿ ನಡೆದ ವಾಗ್ವಾದದಿಂದ ಪರಿಷತ್‌ನಲ್ಲಿ ಯಾವುದೇ ಕಲಾಪವನ್ನು ನಡೆಸಲು ಸಾಧ್ಯವಾಗದೆ ನಾಳೆಗೆ ಮುಂದೂಡಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಳಿದು ಧರಣಿ ಮುಂದುವರೆಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಉಂಟಾದ ಮಾತಿನ ಚಕಮಕಿಯಿಂದ ಸಭಾಪತಿ ಶಂಕರಮೂರ್ತಿ ಸದನವನ್ನು ಅರ್ಧ ಗಂಟೆ ಮುಂದೂಡಿದರು. ಮತ್ತೆ ಸದನ ಸೇರಿದಾಗ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಇದರಿಂದ ಸದನ ಗದ್ದಲದಲ್ಲಿ ಮುಳುಗಿದಾಗ ಸಭಾಪತಿ ಶಂಕರಮೂರ್ತಿ ಅವರು ನಾಳೆಗೆ ಸದನವನ್ನು ಮುಂದೂಡಿದರು.
ಬೆಳಗ್ಗೆ ಸದನ ಆರಂಭವಾದಾಗ ಬಿಜೆಪಿ ಸದಸ್ಯರು ಧರಣಿಯನ್ನು ಮುಂದುವರಿಸಿದ ಮಧ್ಯೆ ಸಭಾಪತಿ, ಧರಣಿ ನಿರತ ಸದಸ್ಯರನ್ನು ಉದ್ದೇಶಿಸಿ ಮಾತನಾ‌ಡಿದ ಸಭಾಪತಿ ಶಂಕರಮೂರ್ತಿ ಸದಸ್ಯರು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿ, ತಮ್ಮ ವಿಷಯವನ್ನು ಈಗಾಗಲೇ ಪ್ರಸ್ತಾಪಿಸಿದ್ದೀರಿ. ಸದನ ನಡೆಸಲು ಅವಕಾಶ ಮಾಡಿಕೊಡಿ ಎಂದರು.
ಸಭಾನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಅಧಿವೇಶನ ಇರುವುದು ಇನ್ನು ನಾಲ್ಕೇ ದಿನ. ಸದನ ನಡೆಯಲು ಅವಕಾಶ ಮಾಡಿಕೊಡಬೇಕು. ಪ್ರತಿಪಕ್ಷದ ಬಿಜೆಪಿ ಸದಸ್ಯರಿಗೆ ಸದನ ನಡೆಸುವುದು ಇಷ್ಟವಿಲ್ಲದಂತೆ ಕಾಣುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಜನ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಚರ್ಚೆ ನಡೆಸದೆ ವಾಚು, ಪೆನ್ನು, ಶೂ ಎಂದು ಚರ್ಚೆ ನಡೆಸುತ್ತಿದ್ದಾರೆ. ಜನ ಇಂತಹುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ಸಭಾನಾಯಕರ ಮಾತಿಗೆ ಸರ್ಕಾರಿ ಮುಖ್ಯ ಸಚೇತಕ ಆರ್.ವಿ. ವೆಂಕೇಟಶ್ ಸೇರಿದಂತೆ ಆಡಳಿತ ಪಕ್ಷದ ಹಲವು ಸದಸ್ಯರು ದ್ವನಿಗೂಡಿಸಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎನ್ನುವ ಹೆಸರು ಪಡೆದಿತ್ತು. ಬಿಜೆಪಿಯವರು ಬಂ‌ಡರು, ಬಂಡತನಕ್ಕೂ ಹಿತಿಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಧರಣಿನಿರತ ಬಿಜೆಪಿ ಸದಸ್ಯರು ಗಿಫ್ಟೋ, ತೆಫ್ಟೋ ಎಂದು ಬಾವಿಯಲ್ಲೇ ಘೋಷಣೆ ಕೂಗಿದರೆ, ಮತ್ತೊಂದೆಡೆ ಆಡಳಿತ ಪಕ್ಷದ ಸದಸ್ಯರು ಸದನ ನಡೆಸಿ, ಸದನ ನಡೆಸಿ ಎಂದು ಪ್ರತಿಯಾಗಿ ಘೋಷಣೆಗಳನ್ನು ಕೂಗಿದರು.
ಈ ಹಂತದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎನ್ನುವುದೆ ಅರ್ಥವಾಗದಂತಹ ಪರಿಸ್ಥಿತಿ ಉಂಟಾಗಿತ್ತು.
ಪ್ರತಿಪಕ್ಷದ ಉಪನಾಯಕ ಕೆ.ಬಿ. ಶಾಣಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ತನಕ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.
ಆಗ ಸಭಾನಾಯಕ ಎಸ್. ಆರ್. ಪಾಟೀಲ್ ತಿರುಗೇಟು ನೀಡಿ, ಸಿದ್ಧರಾಮಯ್ಯ ಪ್ರಾಮಾಣಿಕ ಮತ್ತು ದಕ್ಷ ಮುಖ್ಯಮಂತ್ರಿ. ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಆಗ ಎಸ್.ಆರ್.ಪಾಟೀಲ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಬಿಜೆಪಿ ನಾಯಕರ ಬಳಿ ದುಬಾರಿ ವಾಚ್‌ಗಳಿವೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ 10 ಲಕ್ಷದ ಸೂಟ್ ಧರಿಸಿದ್ದಾರೆ. ಅವುಗಳಿಗೆ ತೆರಿಗೆ ಕಟ್ಟಿದ್ದೀರಿ. ಈ ಬಗ್ಗೆ ಚರ್ಚೆ ನಡೆಸಲು ಒಪ್ಪುತ್ತಿರಾ ಎಂದು ಪ್ರಶ್ನಿಸಿದರು.
ಸಭಾಪತಿ ಶಂಕರಮೂರ್ತಿ ಮಧ್ಯ ಪ್ರವೇಶಿಸಿ ಬಿಜೆಪಿ ಸದಸ್ಯರು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿ ನಿಮ್ಮ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ. ಸದನ ನಡೆಸಲು ಅವಕಾಶ ಮಾಡಿಕೊಡಿ ಎಂದು ಹೇಳಿದರೂ, ಸದಸ್ಯರು ಕೇಳದ ಹಿನ್ನೆಲೆಯಲ್ಲಿ ಅರ್ಧ ಗಂಟೆ ಕಾಲ ಸದನವನ್ನು ಮುಂದೂಡಿದರು.
ಮತ್ತೆ ಸದನ ಆರಂಭವಾದಗ ಪ್ರತಿಪಕ್ಷದ ಉಪನಾಯ ಕೆ.ಬಿ.ಶರಣಪ್ಪ, ಸಿಎಂರವರು ರಾಜೀನಾಮೆ ಕೊಟ್ಟರೆ ನಾವು ಸ್ವಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ ಎನ್ನುತ್ತಿದ್ದಂತೆ ಸಭಾನಾಯಕ ಎಸ್.ಆರ್. ಪಾಟೀಲ್ ಅವರು, ಪ್ರಧಾನಿ ನರೇಂದ್ರ ಮೋದಿ ಕೂಡ ರಾಜೀನಾಮೆ ಕೊಡುತ್ತಾರೆಯೇ ಎಂದು ಛೇಡಿಸಿದರು. ಆಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮತ್ತೆ ಆರೋಪ-ಪ್ರತ್ಯಾರೋಪಗಳು ನಡೆದವು.
ಈ ಹಂತದಲ್ಲಿ ಸದನವನ್ನು ನಿಯಂತ್ರಿಸಲು ಆಗದು ಎಂಬ ನಿರ್ಧಾರಕ್ಕೆ ಬಂದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸದನವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿರುವುದಾಗಿ ಪ್ರಕಟಿಸಿದರು.

Write A Comment