ಕರ್ನಾಟಕ

ದೊಡ್ಡವರಿಗೆ ಮೀಸಲಾತಿ ಅನಗತ್ಯ: ಸಂತೋಷ್ ಹೆಗಡೆ

Pinterest LinkedIn Tumblr

santhoshಬೆಂಗಳೂರು, ಮಾ. ೩- ಸಮ ಸಮಾಜದ ನಿರ್ಮಾಣಕ್ಕೆ ಮೀಸಲಾತಿ ಅಗತ್ಯ. ಆದರೆ, ಮೀಸಲಾತಿಯಿಂದ ಅನುಕೂಲ ಪಡೆದು ಉನ್ನತಮಟ್ಟಕ್ಕೇರಿದವರು ಮತ್ತೆ ಮತ್ತೆ ಮೀಸಲಾತಿ ಪಡೆಯುತ್ತಿರುವುದು ಸರಿಯಲ್ಲ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಮೀಸಲಾತಿ ಸಿಗಬೇಕು ಎಂದು ನಿವೃತ್ತ ಲೋಕಾಯುಕ್ತ ಡಾ.ಸಂತೋಷ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಂಧಿಭವನದಲ್ಲಿಂದು ನಡೆದ ಸಮಾರಂಭದಲ್ಲಿ ಡಾ. ರಾಮಕೃಷ್ಣಯ್ಯ ಮದ್ದೆಗ್ರಾಮ ಅವರು ಬರೆದಿರುವ `ಸರ್ಕಾರವೇ ಮಾತನಾಡು’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಮೀಸಲಾತಿ ಪಡೆದು ಅಧಿಕಾರಿಗಳಾದವರ ಮಕ್ಕಳು ಕೂಡ ಮೀಸಲಾತಿ ಪಡೆಯುತ್ತಿರುವುದು ಸರಿಯಲ್ಲ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಐ‌ಎ‌ಎಸ್‌ ಅಧಿಕಾರಿಗಳ ಮಕ್ಕಳು ಮೀಸಲಾತಿ ಪ‌ಡೆಯುತ್ತಿದ್ದಾರೆ. ಇದರಿಂದ ನಿಜವಾಗಿ ದೊರಕಬೇಕಾದ ಮೀಸಲಾತಿ ಬೇರೊಬ್ಬರ ಪಾಲಾಗುತ್ತಿದೆ ಎಂದು ವಿಷಾದಿಸಿದರು.

ಭ್ರಷ್ಟರು ಮತ್ತು ಅಧಿಕಾರಿಗಳ ಮಧ್ಯೆ ಸಂಬಂಧ ಇರುವುದರ ಮಧ್ಯೆ ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಜನರಲ್ಲಿ ಮಿತಿ ಮೀರಿರುವ ದುರಾಸೆ ಇರುವುದರಿಂದ ಭ್ರಷ್ಟಾಚಾರಕ್ಕೆ ಕೈ ಹಾಕುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿಗೆ ಕಿಲೋಮೀಟರ್ ಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಇದೆ. ಕೋಟ್ಯಾಂತರ ರೂ. ಇದಕ್ಕಾಗಿ ವ್ಯಯಿಸುತ್ತಿದ್ದರು ನೀರಿನ ಸಮಸ್ಯೆ ನಿವಾರಣೆ ಸಾಧ್ಯವಾಗಿಲ್ಲ ಎಂದು ಹೇಳಿದರು.

ಸಾರ್ವಜನಿಕ ಜೀವನದಲ್ಲಿ ತಾವು ಕಂಡುಕೊಂಡ ಅನುಭವಗಳನ್ನು ಆತ್ಮಕಥೆಯ ರೂಪದಲ್ಲಿ ಬರೆಯಲು ನಿರ್ಧರಿಸಿದ್ದೇನೆ. ನಾನು ಯಾರು ಎಂಬುದು ಈ ಪುಸ್ತಕದ ಹೆಸರು ಆಗಲಿದೆ ಎಂದು ಹೇಳಿದರು.

ಗಾಂಧಿಭವನದ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ಮಾತನಾಡಿ, ರಾಮಕೃಷ್ಣಯ್ಯ ಅವರ ಭಾವನೆ ನಮ್ಮೆಲ್ಲರ ಭಾವನೆಯೂ ಆಗಿದೆ. ಈ ಭಾವನೆಗಳನ್ನು ಅವರು ಪುಸ್ತಕದ ರೂಪದಲ್ಲಿ ತಂದಿದ್ದಾರೆ. ಸಮಾಜದಲ್ಲಿ ಬದಲಾವಣೆ ಅಗತ್ಯವಿದ್ದು, ಶಿಕ್ಷಣ ಪಡೆದವರೆ ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಗೋ.ರು. ಚನ್ನಬಸಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಿರೀಕ್ಷಿತ ಜೀವನಶಿಸ್ತು, ಪ್ರಾಮಾಣಿಕ ದುಡಿಮೆ, ಸ್ವಾಭಿಮಾನ ಇನ್ನೂ ಜನರಲ್ಲಿ ಮೂಡಿಲ್ಲ. ಸಂವಿಧಾನದ ಪ್ರಸ್ತಾವನೆಗೆ ಅನುಗುಣವಾಗಿ ನಡೆಯಲು ಸಾಧ್ಯವಾಗದಿರುವುದು ದೇಶದ ದುರಂತ. ವೈಯಕ್ತಿಕ ಶೀಲ ಮತ್ತು ಚಾರಿತ್ರ್ಯಗಳಿಗೆ ಮಂಕು ಬಡಿದಿದೆ. ಸಾರ್ವಜನಿಕ ಜೀವನದಲ್ಲಿರುವವರು ಶೀಲ ಮತ್ತು ಚಾರಿತ್ರ್ಯವನ್ನು ಕಾಪಾಡಿಕೊಂಡರೆ ಸಮುದಾಯ ಅವರಿಗೆ ಬೆಂಬಲ, ಗೌರವ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಚ್.ಎಸ್. ದೊರೆಸ್ವಾಮಿ ವಹಿಸಿದರು. ಪ್ರಾಧ್ಯಾಪಕ ಡಾ. ಪ್ರಧಾನ್ ಗುರುದತ್, ಹಿರಿಯ ಪತ್ರಕರ್ತ ಎಂ.ಎ. ಪೊನ್ನಪ್ಪ, ಜಾನಪದ ಪರಿಷತ್ ಅಧ್ಯಕ್ಷ ಟಿ.ಚಿನ್ನೇಗೌಡ, ಡಾ.ಟಿ.ಜಿ.ವೆಂಕಟಯ್ಯ ಮತ್ತಿತರರು ಭಾಗವಹಿಸಿದ್ದರು.

ಪುಸ್ತಕ ಕನ್ನ‌ಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಲೋಕಾರ್ಪಣೆಗೊಂಡಿದೆ. ಸಮೃದ್ಧಿ ಪ್ರಕಾಶನ ಈ ಪುಸ್ತಕಗಳನ್ನು ಪ್ರಕಟಿಸಿವೆ.

Write A Comment