ರಾಷ್ಟ್ರೀಯ

ನಗರ ವಾಸಿಗಳಗೆ ತೆರಿಗೆ ಬಿಸಿ, ಹಳ್ಳಿಗರ ಮೊಗದಲ್ಲಿ ಖುಷಿ ಮೂಡಿಸುವ ಜೇಟ್ಲಿ ಬಜೆಟ್

Pinterest LinkedIn Tumblr

jaitley-budget-2016

ನವದೆಹಲಿ,ಫೆ.29: ಕೈ ಸುಡಲಿರುವ ಸಿಗರೇಟ್, ಕಾರು ಕೊಳ್ಳುವವರ ಜೇಬಿಗೆ ಕತ್ತರಿ, ವಜ್ರಾಭರಣ ದರದಲ್ಲಿ ಏರಿಕೆ, ವೈಯಕ್ತಿಕ ಆದಾಯ ಮಿತಿಯಲ್ಲಿ ಯಥಾಸ್ಥಿತಿ, ನಗರ ವಾಸಿಗಳಗೆ ತೆರಿಗೆ ಬಿಸಿ ಮುಟ್ಟಿಸಿ, ಗ್ರಾಮೀಣರ ಮೊಗದಲ್ಲಿ ಮಂದಹಾಸ ಮೂಡಿಸುವ ಬಜೆಟ್ ಮಂಡನೆಯಾಗಿದೆ. ಲೋಕಸಭೆಯಲ್ಲಿಂದು ಎನ್‌ಡಿಎ ಸರ್ಕಾರದ ಮೂರನೇ ಹಾಗೂ 2016-17ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ , ಜನಪ್ರಿಯತೆಗೆ ಒತ್ತು ನೀಡುವ ಬದಲು ಹಳಿ ತಪ್ಪುತ್ತ್ಟಿರುವ ಆರ್ಥಿಕ ಸ್ಥಿತಿಯನ್ನು ಸಮತೋಲನದ ದಾರಿಗೆ ತರುವ ಬಜೆಟ್ ಮಂಡಿಸಿದ್ದಾರೆ.

ದೇಶದ ಆರ್ಥಿಕ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅರುಣ್ ಜೇಟ್ಲಿ , ಪ್ರಮುಖ ಆದ್ಯತಾ ವಲಯಗಳಿಗೆ ಹೆಚ್ಚಿನ ಗಮನ ನೀಡಿ, ನಗರ ವಾಸಿಗಳಿಗೆ ತೆರಿಗೆ ಬಿಸಿ ಮುಟ್ಟಿಸಿದರೆ, ಅನ್ನದಾತನಿಗೆ ತುಸು ನೆಮ್ಮದಿ ತರುವ ಸರ್ಕಸ್ ನಡೆಸಿದ್ದಾರೆ. ತಮ್ಮ ಬಜೆಟ್‌ನಲ್ಲಿ ಜೇಟ್ಲಿ ,ಕೃಷಿ, ನೀರಾವರಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ರಸ್ತೆಗಳ ಸುಧಾರಣೆ, ಆರೋಗ್ಯ, ಮಹಿಳಾ ಸಬಲೀಕರಣ, ಗ್ರಾಮ ಪಂಚಾಯ್ತಿಗಳ ಸುಧಾರಣೆ, ಸರ್ವ ಶಿಕ್ಷ ಅಭಿಯಾನ, ಮಧ್ಯಾಹ್ನ ಬಿಸಿಯೂಟ, ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ಉದ್ಯಮಿಗಳಿಗೆ ಪ್ರೋತ್ಸಾಹ, ಪ್ರತಿ ಗ್ರಾಮಗಳಿಗೂ ವಿದ್ಯುತ್ ಸೇರಿದಂತೆ ಆದ್ಯತಾ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ.

ದೇಶದಲ್ಲಿ ಸತತ ಬರಗಾಲವಿದ್ದರೂ ವಿಶ್ವದಲ್ಲೇ ಅತ್ಯುತ್ತಮ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ದೇಶ ನಮ್ಮದು ಎಂದು ಹೆಮ್ಮೆ ವ್ಯಕ್ತಪಡಿಸಿದ ಜೇಟ್ಲಿ, ಪ್ರಸಕ್ತ ವರ್ಷ 7.6ರ ಜಿಡಿಪಿ ದರ ತಲುಪುವ ಗುರಿ ಹೊಂದಲಾಗಿದೆ ಎಂದು ಘೋಷಿಸಿದರು. ಪ್ರತಿ ಪಕ್ಷಗಳ ಗದ್ದಲ, ಆಡಳಿತ ಪಕ್ಷದ ಸದಸ್ಯರ ಸ್ವಾಗತದ ನಡುವೆ ಕೆಲವು ಸೂಕ್ತಿಗಳನ್ನು ಉಲ್ಲೇಖಿಸಿದ ಸಚಿವರು, ಹಣದುಬ್ಬರ ಹಾಗೂ ಮುಂಗಾರು ಮಳೆ ಕೊರತೆಯ ನಡುವೆಯೂ ದೇಶ ಸಮೃದ್ದಿಯತ್ತ ಮುನ್ನಡೆಯುತ್ತದೆ ಎಂದು ಪ್ರಶಂಸಿಸಿದರು.

ಆದ್ಯತಾ ಕ್ಷೇತ್ರಕ್ಕೆ ದುಪ್ಪಟ್ಟು: ಬಡತನರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲಕ್ಕೆ 2 ಸಾವಿರ ಕೋಟಿ, ಅಧಿಕಾರ ವಿಕೇಂದ್ರೀಕರಣವನ್ನು ಇನ್ನಷ್ಟು ಸಬಲೀಕರಣ ಮಾಡಲು ಗ್ರಾಮಪಂಚಾಯ್ತಿಗಳಿಗೆ 2.87 ಲಕ್ಷ ಕೋಟಿ, ಸ್ವಚ್ಛ ಭಾರತ್ ಯೋಜನೆಗೆ 90 ಸಾವಿರ ಕೋಟಿ, ಈ-ಮಾರ್ಕೆಟಿಂಗ್‌ಗೆ 20 ಸಾವಿರ ಕೋಟಿ, ಬೆಳೆವಿಮೆಗೆ 5.5 ಸಾವಿರ ಕೋಟಿ, ಕೃಷಿ ಸಾಲಕ್ಕಾಗಿ 9 ಲಕ್ಷ ಕೋಟಿ , ಗ್ರಾಮೀಣ ರಸ್ತೆಗಳ ಸುಧಾರಣೆಗೆ 19 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಒದಗಿಸುವ ನರೇಗಾ ಯೋಜನೆಗೆ 38,500 ಸಾವಿರ ಕೋಟಿ, ಪಶುಪಾಲನೆಗೆ 850 ಕೋಟಿ, ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಪೂರೈಕೆ ಮಾಡಲು 2 ಸಾವಿರ ಕೋಟಿ, ಎಸ್ಸಿ-ಎಸ್ಟಿ ಯುವಕರಿಗೆ ನ್ಯಾಷನಲ್ ಹಬ್ ಯೋಜನೆ ಮೂಲಕ ಉದ್ಯೋಗ ಸೃಷ್ಟಿ, ಬರ ನಿರ್ವಹಣಾ ವ್ಯವಸ್ಥೆಗೆ ದೀನ್ ದಯಾಳ್ ಉಪಾಧ್ಯಾಯ ಅಂತೋದ್ಯಯ ಮಿಷಿನ್ ಜಾರಿ ಮಾಡಲಾಗಿದೆ.

2018ರ ದೇಶದ 5 ಸಾವಿರಕ್ಕೂ ಹೆಚ್ಚು ಹಳ್ಳಿಗಳ್ಳಿಗೆ ಗ್ರಾಮಕ್ಕೂ ವಿದ್ಯುತ್ ಪೂರೈಕೆ ಮಾಡಲು ಗುರಿ ಹೊಂದಿರುವ ಕೇಂದ್ರ ಸರ್ಕಾರ ಇದಕ್ಕಾಗಿ ನೂತನ ಯೋಜನೆಯೊಂದನ್ನು ರೂಪಿಸಿದೆ. ಆರೋಗ್ಯ ಮಿಷನ್ ಯೋಜನೆಯಡಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಡಯಾಲಿಸ್ ಕೇಂದ್ರ ಸ್ಥಾಪನೆ, ಬಡವರಿಗಾಗಿ ಸ್ವಾಸ್ಥ್ಯ ಭೀಮಾ ಯೋಜನೆ, ಉನ್ನತ ಶಿಕ್ಷಣಕ್ಕೆ ಒಂದು ಸಾವಿರ ಕೋಟಿ, ಜನರಿಕ್ ಔಷಧಗಳ ಪೂರೈಕೆಗಾಗಿ ಮೂರು ಸಾವಿರ ಔಟ್‌ಲೆಟ್, 62 ನವೋದಯ ವಿವಿಗಳ ಸ್ಥಾಪನೆ, ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಕಟಿಸಲಾಗಿದೆ. ಏರಿಕೆ: ಈ ಬಾರಿಯ ಬಜೆಟ್‌ನಲ್ಲಿ ನಗರ ವಾಸಿಗಳಿಗೆ ಅರುಣ್ ಜೇಟ್ಲಿ ತೆರಿಗೆ ವಿಧಿಸುವ ಮೂಲಕ ಬಿಸಿ ತಟ್ಟಿಸಿದ್ದಾರೆ. ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲಾಗಿದೆ.

ಮಧ್ಯಮ ವರ್ಗದ ತೆರಿಗೆ ಪಾವತಿಯಲ್ಲಿ ವಿನಾಯ್ತಿ ನೀಡಲಾಗಿದ್ದು, 5 ಲಕ್ಷದೊಳಗಿನ ಆದಾಯ ತೆರಿಗೆದಾರರು ಪಾವತಿಸುವ 5 ಸಾವಿರ ರೂ. ಬದಲಿಗೆ 2 ಸಾವಿರ ರೂ.ಗಳಿಗೆ ಇಳಿಸಲಾಗಿದೆ. ಶ್ರೀಮಂತರ ವರ್ಗಕ್ಕೆ ಒಂದು ಕೋಟಿ ಮೇಲ್ಪಟ್ಟ ಆದಾಯಕ್ಕೆ ವಿಧಿಸಲಾಗುತ್ತಿದ್ದ ಸರ್ಚ್‌ಚಾರ್ಜ್‌ನ್ನು ಶೇ.12ರಿಂದ 15ಕ್ಕೆ ಹೆಚ್ಚಿಸಲಾಗಿದೆ. ಇನ್ನು ಸಿಗರೇಟ್, ಸಿಗಾರ್, ತಂಬಾಕು ಉತ್ಪನ್ನಗಳ ಮೇಲಿನ ಸುಂಕ, ಐಷರಾಮಿ ಕಾರುಗಳ ಮೇಲಿನ ತೆರಿಗೆ, ಬ್ರಾಂಡೆಡ್ ಬಟ್ಟೆ, ಪೆಟ್ರೋಲ್, ಡೀಸೆಲ್, ಕಾರುಗಳ ಮೇಲೆ ಶೇ.1ರಷ್ಟು ಸೆಸ್, ತಂಬಾಕು ಉತ್ಪನ್ನಗಳ ಸೆಸ್ ಶೇ.10ರಿಂದ 15ರಷ್ಟು ಹೆಚ್ಚಳ. 10 ಲಕ್ಷ ರೂ. ಮೇಲ್ಪಟ್ಟ ಕಾರುಗಳ ಮೇಲಿನ ಖರೀದಿ ತೆರಿಗೆ ಹೆಚ್ಚಳವಾಗಿದ್ದು, ಪೆಟ್ರೋಲ್, ಡೀಸೆಲ್ ಕಾರುಗಳ ಮೇಲೆ ಶೇ.1ರಷ್ಟು ಸೆಸ್ ವಿಧಿಸಲಾಗಿದೆ.

ಡೀಸೆಲ್ ವಾಹನಗಳ ಮೇಲೆ ಶೇ.2.5ರಷ್ಟು ಸೆಸ್ ಏರಿಕೆಯಾಗಿದ್ದರೆ, ಚಿನ್ನಾಭರಣ, ವಜ್ರ ದರ ಇನ್ನಷ್ಟು ದುಬಾರಿಯಾಗಲಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳು , ಬೆಳ್ಳಿ ಆಭರಣ, ಮದ್ಯ, ಪಾದರಕ್ಷೆಗಳ ಮೇಲಿನ ತೆರಿಗೆ ಯಥಾಸ್ಥಿತಿಯಲ್ಲೇ ಮುಂದುವರೆದಿದೆ. ಇದೇ ರೀತಿ ಮೊದಲ ಮನೆ ಖರೀದಿಸುವವರಗೆ ಬಡ್ಡಿ ವಿನಾಯ್ತಿ, ಡೈಯಾಲಿಸಿಸ್ ಯಂತ್ರೋಪಕರಣ ಖರೀದಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ.

Write A Comment