ರಾಷ್ಟ್ರೀಯ

ಪ್ರತಿಭಟನೆ ವೇಳೆ ಹಾನಿ,ದಾಳಿ ಮಾಡಿದವರಿಗೆ ದಂಡ, ಶಿಕ್ಷೆ

Pinterest LinkedIn Tumblr

Rajnath-Singhfff

ನವದೆಹಲಿ: ಪ್ರತಿಭಟನೆ ಸಂದರ್ಭಗಳಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನುಂಟುಮಾಡುವ ಮತ್ತು ಇತರರ ಮೇಲೆ ದಾಳಿ ಮಾಡುವವರಿಗೆ ಅತಿ ಹೆಚ್ಚಿನ ದಂಡ ಹಾಗೂ ದೀರ್ಘಾವಧಿಯವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ.

ಈ ಸಂಬಂಧ ಅದು ಹೊಸ ಶಾಸನವೊಂದನ್ನು ತರಲು ಮುಂದಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳ ನಷ್ಟವನ್ನು ತಡೆಯುವ ಕಾಯ್ದೆಗೆ ತಿದ್ದುಪಡಿ ತರಲು ಇಲಾಖೆ ಚಿಂತಿಸುತ್ತಿದ್ದು, ಹಾನಿಯನ್ನುಂಟುಮಾಡಿದವರ ವಿರುದ್ಧ ಮತ್ತು ಪ್ರತಿಭಟನೆಯನ್ನು ಸಂಘಟಿಸಿದವರ ವಿರುದ್ಧ ಕೂಡ ಅಪರಾಧ ಪ್ರಕರಣ ದಾಖಲಿಸುವ ಪರಿಣಾಮಕಾರಿ ಕಾನೂನನ್ನು ಇದು ಒಳಗೊಂಡಿರುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಹರ್ಯಾಣದಲ್ಲಿ ಮೊನ್ನೆ ಜಾಟ್ ಸಮುದಾಯದ ಪ್ರತಿಭಟನೆಯಿಂದ ಸುಮಾರು 20 ಸಾವಿರ ಕೋಟಿ ರೂಪಾಯಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಹಾನಿಗೀಡಾದ ಆಸ್ತಿಗೆ ಮಾರುಕಟ್ಟೆ ಮೌಲ್ಯದ ಮೊತ್ತವನ್ನೇ ನೀಡಬೇಕು ಎಂದು ಉದ್ದೇಶಿತ ಕಾನೂನಿನಲ್ಲಿ ಹೇಳಲಾಗಿದೆ.

ಸಾರ್ವಜನಿಕರು ಮತ್ತು ಮಧ್ಯಸ್ಥಿಕೆದಾರರಿಂದ ಪಡೆದ ಸಲಹೆ, ಅಭಿಪ್ರಾಯಗಳನ್ನು ಒಪ್ಪಿಕೊಂಡು ಅದನ್ನು ಆಧರಿಸಿ ಗೃಹ ಸಚಿವಾಲಯ ವರದಿಯೊಂದನ್ನು ತಯಾರಿಸಿದೆ.

Write A Comment