ರಾಷ್ಟ್ರೀಯ

ಫ್ರೀಡಂ 251 ಸಹಸ್ರಮಾನದ ಅತಿ ದೊಡ್ಡ ಹಗರಣ: ಪ್ರಮೋದ್ ತಿವಾರಿ

Pinterest LinkedIn Tumblr

freedom-251

ನವದೆಹಲಿ: ಭಾರೀ ಸುದ್ದಿಯಾಗುತ್ತಿರುವ ಫ್ರೀಡಂ 251 ಸ್ಮಾರ್ಟ್‍ಫೋನ್ ಒಂದು ದೊಡ್ಡ ಹಗರಣವಾಗಿದ್ದು, ಇದರಲ್ಲಿ ಬಿಜೆಪಿಯ ನಾಯಕರುಗಳು ಭಾಗಿಯಾಗಿದ್ದಾರೆ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ರಾಜ್ಯಸಭೆಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸ್ಮಾರ್ಟ್‍ಫೋನನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಈ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಬಿಜೆಪಿಯವರು ‘ಮೇಕ್ ಇನ್ ಇಂಡಿಯಾ’ದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಿಜವಾಗಿ ಅವರು ‘ಮೇಕ್ ಇನ್ ಫ್ರಾಡ್’ ಮಾಡುತ್ತಿದ್ದಾರೆ. ಇದು ಬಿಜೆಪಿ ಅವಧಿಯಲ್ಲಿನ ಸಹ್ರಸಮಾನದ ಅತಿ ದೊಡ್ಡ ಹಗರಣವಾಗಲಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಅವರು, ಈ ಫೋನ್ ಖರೀದಿಗಾಗಿ 6 ಕೋಟಿ ಜನ ಬುಕ್ ಮಾಡಿದ್ದಾರೆ. ಕಂಪೆನಿಯ ನಿರ್ದೇಶಕರು ಈ ಸ್ಮಾರ್ಟ್‍ಫೋನಿಗೆ 1400 ರೂ. ವೆಚ್ಚ ತಗಲುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ 251 ರೂಪಾಯಿಗೆ ಸ್ಮಾರ್ಟ್‍ಫೋನ್ ಹೇಗೆ ನೀಡುತ್ತದೆ ಎಂದು ಪ್ರಶ್ನಿಸಿದರು.

ಒಂದು ವೇಳೆ ಈ ಕಂಪೆನಿ 251 ರೂಪಾಯಿಗೆ ಫೋನ್ ನೀಡುವುದಾದರೆ ಉಳಿದ ಕಂಪೆನಿಗಳು 20, 30 ಸಾವಿರ ರೂ. ಸ್ಮಾರ್ಟ್‍ಫೋನ್ ಹೇಗೆ ನೀಡುತ್ತದೆ? ಹೀಗಾಗಿ ಇದರಲ್ಲಿ ಅವರದ್ದು ತಪ್ಪೋ? ಇವರದ್ದು ತಪ್ಪೋ? ಸರ್ಕಾರ ಕೂಡಲೇ ಈ ಪ್ರಶ್ನೆಗೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಫೆಬ್ರವರಿ 17ರಂದು ದೆಹಲಿಯಲ್ಲಿ ನಡೆದ ಸ್ಮಾರ್ಟ್‍ಫೋನ್ ಬಿಡುಗಡೆ ಕಾರ್ಯಕ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಮತ್ತು ಮಧ್ಯಪ್ರದೇಶದ ಬಿಜೆಪಿ ಶಾಸಕ ಓಂ ಪ್ರಕಾಶ್ ಅತಿಥಿಗಳಾಗಿ ಭಾಗವಹಿಸಿದ್ದರು. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು. ಆದರೆ ಕ್ಯಾಬಿನೆಟ್ ಸಭೆಯಿಂದಾಗಿ ಮನೋಹರ್ ಪರಿಕ್ಕರ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಆಯೋಜಕರು ತಿಳಿಸಿದ್ದರು.

ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‍ಫೋನ್ ಮಾರಾಟವನ್ನು ತಡೆಯಬೇಕು ಎಂದು ಕೋರಿ ಭಾರತೀಯ ಮೊಬೈಲ್ ತಯಾರಕರ ಸಂಘ(ಐಸಿಎ) ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ದೂರು ಸಲ್ಲಿಸಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ತಯಾರಿಕೆ ಮತ್ತು ಮಾರಾಟ ಹೇಗೆ ಸಾಧ್ಯ ಎಂಬುದುರ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಸಚಿವಾಲಯಕ್ಕೆ ಆದೇಶ ನೀಡಿದೆ.

Write A Comment