ನವದೆಹಲಿ: ಇರಾಕ್ನಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಉಗ್ರರ ವಶದಲ್ಲಿರುವ 39 ಭಾರತೀಯರು ಜೀವಂತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಕಳೆದ ಒಂದುವರೆ ವರ್ಷದಿಂದ ಇರಾಕ್ನ ಮಸೂಲ್ ನಗರದಲ್ಲಿ ಇಸಿಸ್ ಒತ್ತೆಯಾಳುಗಳಾಗಿರುವ 39 ಭಾರತೀಯರು ಸುರಕ್ಷಿತವಾಗಿದ್ದಾರೆ. ಅರಬ್ ಮತ್ತು ಪ್ಯಾಲೆಸ್ತೀನ್ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ವಿಷಯ ತಿಳಿದು ಬಂದಿದೆ. ಇನ್ನು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಇರಾಕ್ನಲ್ಲಿ ಒತ್ತೆಯಾಳುಗಳಾಗಿರುವ ಭಾರತೀಯರ ಕುಟುಂಬ ಸದಸ್ಯರು ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುಷ್ಮಾ ಒತ್ತೆಯಾಳುಗಳು ಸುರಕ್ಷಿತವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.
ಭಾರತೀಯ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಲು ಅರಬ್ ರಾಷ್ಟ್ರಗಳ ಒಕ್ಕೂಟ ಸಹಕಾರ ನೀಡುವುದಾಗಿ ತಿಳಿಸಿದೆ. ಬಹರೈನ್ನಲ್ಲಿ ನಡೆದ ಮಾತುಕತೆಯಲ್ಲಿ ಅರಬ್ ರಾಷ್ಟ್ರಗಳ ಒಕ್ಕೂಟ ಈ ಭರವಸೆ ನೀಡಿದೆ ಎಂದು ಸುಷ್ಮಾ ತಿಳಿಸಿದರು.