ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಹೇರಲಾಗಿರುವ ನಿರ್ಬಂಧವನ್ನು ಕೇರಳ ಸರ್ಕಾರ ಸಮರ್ಥಿಸಿಕೊಂಡಿದೆ.
ನ್ಯಾಯಾಂಗ ಪ್ರಕ್ರಿಯೆಯಿಂದ ಭಕ್ತಾದಿಗಳ ನಂಬಿಕೆ ಮತ್ತು ಪದ್ಥತಿಗಳನ್ನು ಬದಲಿಸಲು ಸಾಧ್ಯವಿಲ್ಲ. ಅಲ್ಲದೇ, ದೇವಾಲಯದ ಅರ್ಚಕರ ತೀರ್ಮಾನವೇ ಅಂತಿಮ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ.
ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆ ನಿಷೇಧ ಯಾಕೆ ಎಂದು ಸುಪ್ರೀಂ ಕೋರ್ಟ್ ಕೇರಳ ಸರ್ಕಾರವನ್ನು ಪ್ರಶ್ನಿಸಿತ್ತು. ದೇವಾಲಯ ಪ್ರವೇಶಕ್ಕೆ ನಿಷೇಧಿಸುವ ಕ್ರಮ ಸಂವಿಧಾನ ರೀತಿಯಲ್ಲಿ ಸರಿಯಲ್ಲ. ಧರ್ಮದ ಕಾರಣವನ್ನು ನೀಡಿ ಮಹಿಳೆಯರು ದೇವಾಲಯವನ್ನು ಪ್ರವೇಶಿಸದೇ ಇರುವುದು ಸರಿಯೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು.
ಇಂಡಿಯನ್ ಯಂಗ್ ಲಾಯರ್ಸ್ ಸಂಘಟನೆಯ ಸದಸ್ಯರು ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್ ಈ ವಿಚಾರದ ಬಗ್ಗೆ ಅಫಿಡವಿಟ್ ಸಲ್ಲಿಸುಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಅಫಿಡವಿಟ್ ಸಲ್ಲಿಸಿದ ಕೇರಳ ಸರ್ಕಾರ ಮಹಿಳೆಯರಿಗೆ ಹೇರಲಾಗಿರುವ ನಿರ್ಬಂಧವನ್ನು ಸಮರ್ಥಿಸಿಕೊಂಡಿದೆ.