ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಭಾರತದ ಯುವಕರ ಉತ್ಸಾಹವನ್ನು ಕುಗ್ಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರೋಹಿತ್ ವೇಮುಲಾ ಆತ್ಮಹತ್ಯೆ ಖಂಡಿಸಿ ಹೈದರಾಬಾದ್ ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಒಂದೇ ರೀತಿಯ ಆಲೋಚನೆಗಳನ್ನು ಹೇರುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಯುವ ವಿದ್ಯಾರ್ಥಿಗಳಲ್ಲಿರುವ ಉತ್ಸಾಹವನ್ನು ಕುಗ್ಗಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಹಾಗೂ ಆರ್.ಎಸ್ ಎಸ್ ವಿದ್ಯಾರ್ಥಿಗಳ ಮೇಲೆ ಒಂದೇ ರೀತಿಯ ವಿಚಾರಧಾರೆಗಳನ್ನು ಹೇರಲು ಹೊರಟಿರುವುದಕ್ಕೆ ತಮ್ಮ ವಿರೋಧವಿದೆ. ಪ್ರಧಾನಿ ಮೋದಿ, ಆರ್ ಎಸ್ಎಸ್ ತಮ್ಮ ವಿಚಾರಧಾರೆಗಳನ್ನು ಹೇಳಲಿ, ಅದನ್ನು ವಿದ್ಯಾರ್ಥಿಗಳು ಒಪ್ಪಿದರೆ ತಮ್ಮ ವಿರೋಧ ಇಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ನಿಮ್ಮ ವಿಚಾರಧಾರೆಗಳನ್ನು ಒಪ್ಪಿಕೊಳ್ಳಲು ವಿದ್ಯಾರ್ಥಿಗಳನ್ನು ಒತ್ತಾಯಿಸಬೇಡಿ, ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ದಡ್ಡರಲ್ಲ, ಇಲ್ಲಿರುವವರಿಗೆ ಪ್ರಾಪಂಚಿಕ ಜ್ಞಾನದ ಅರಿವಿದೆ, ವಿಚಾರಧಾರೆಗಳನ್ನು ಹೇರುವ ಬದಲು ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಗೌರವಿಸಿ ಎಂದು ರಾಹುಲ್ ಗಾಂಧಿ ಮೋದಿಗೆ ಮನವಿ ಮಾಡಿದ್ದಾರೆ. ದೇಶ ಅಭಿವೃದ್ಧಿಯಾಗಬೇಕಾದರೆ ಪ್ರಧಾನಿ ಮೋದಿ ವಿದ್ಯಾರ್ಥಿಗಳು ಹೇಳುವುದನ್ನು ಪರಿಗಣಿಸಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.