ರಾಷ್ಟ್ರೀಯ

ಹೆಲ್ಮೆಟ್ ಧರಿಸದಿದ್ರೆ ಇಂದಿನಿಂದ ದಂಡ

Pinterest LinkedIn Tumblr

helಬೆಂಗಳೂರು: ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ ಜ.12ರಿಂದಲೇ ಅನುಷ್ಠಾನಕ್ಕೆ ಬಂದಿದೆಯಾದರೂ ಸಾರ್ವಜನಿಕರು ನಿರಾಸಕ್ತಿ ತೋರುತ್ತಿದ್ದಾರೆ. ಆದರೆ, ಇದೇ ನಿರಾಸಕ್ತಿ ಬುಧವಾರದ (ಜ.20) ನಂತರವೂ ಮುಂದುವರಿದರೆ ಜೇಬಿಗೆ ಕತ್ತರಿ ಖಚಿತ ! ಏಕೆಂದರೆ ಹೆಲ್ಮೆಟ್ ಧರಿಸದ ವಾಹನ ಸವಾರರ ವಿರುದ್ಧ ಕೇಸ್ ದಾಖಲಿಸಿ ದಂಡ ಹಾಕಲು ಟ್ರಾಫಿಕ್ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

12 ವರ್ಷದ ಮೇಲಿನ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ. ಬೆಂಗಳೂರಿನಲ್ಲಿ ಶೇ.50 ಮಂದಿ ನಿಯಮವನ್ನು ಪಾಲಿಸುತ್ತಿದ್ದಾರೆ. ಹೊಸ ಕಾನೂನಿನ ಮಹತ್ವದ ಬಗ್ಗೆ ನಾಲ್ಕೈದು ದಿನಗಳಿಂದ ಖುದ್ದು ಪೊಲೀಸರೇ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ನಿಧಾನವಾಗಿ ಅರಿವಾಗುತ್ತಿದೆ.

ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ಜ.20ರಿಂದ ದಂಡ ಗ್ಯಾರಂಟಿ. ಪೊಲೀಸರು ಕೇಸ್ ಹಾಕುತ್ತಾರೆ ಎಂಬ ಭಯದಿಂದ ಜನ ನಿಯಮ ಪಾಲಿಸುತ್ತಾರೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಈಗಾಗಲೇ ಎಲ್ಲ ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ತಿಳಿಸಿದರು.

ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಹೊಸ ನಿಯಮ ಅನುಷ್ಠಾನಕ್ಕೆ ತಂದಾಗ ವಿರೋಧ ಸಹಜ. ಜನ ಕ್ರಮೇಣ ಎಲ್ಲವನ್ನೂ ಒಪ್ಪಿ ಪಾಲಿಸುತ್ತಾರೆ. ಬಲವಂತವಾಗಿ ಯಾವ ನಿಯಮವನ್ನೂ ಹೇರುತ್ತಿಲ್ಲ. ಜೀವ ರಕ್ಷಣೆ ನಮ್ಮ ಧ್ಯೇಯ ಎಂದರು.

ಮೊದಲಿಗೆ 100, ಆಮೇಲೆ 300 ರೂ. ದಂಡ

ಹೆಲ್ಮೆಟ್ ಧರಿಸದೆ ಮೊದಲ ಬಾರಿ ಸಿಕ್ಕಿಬೀಳುವ ಸವಾರರಿಗೆ 100 ರೂ. ದಂಡ. ನಂತರವೂ ನಿರ್ಲಕ್ಷ್ಯ ಮುಂದುವರಿದರೆ 300 ರೂ. ದಂಡ. ಪದೇಪದೆ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ಚಾಲನಾ ಪರವಾನಗಿ ಜಪ್ತಿ ಮಾಡಿ ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.

ಐಎಸ್​ಐ ಹೆಲ್ಮೆಟ್ ಕಡ್ಡಾಯ

ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವಂತಿಲ್ಲ. ಐಎಸ್​ಐ ಮುದ್ರೆಯಿರುವ ಹೆಲ್ಮೆಟ್ ಹಾಕಬೇಕು. ಐಎಸ್​ಐ ಮಾರ್ಕ್ ಇರದ ಹೆಲ್ಮೆಟ್ ಧರಿಸಿದರೂ ದಂಡ ಹಾಕಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Write A Comment