ಹೈದರಾಬಾದ್: ದಲಿತ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸೋಮವಾರ ತಿಳಿದುಬಂದಿದೆ.
ರೋಹಿತ್ ಆತ್ಮಹತ್ಯೆ ಮಾಡಿಕೊಂಡ್ಡ ದಲಿತ ವಿದ್ಯಾರ್ಥಿಯಾಗಿದ್ದು, ಈತ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ತಾಂತ್ರಿಕ ವಿಜ್ಞಾನ ಮತ್ತು ಸಮಾಜ ಕುರಿತಂತೆ ಪಿಎಚ್ ಡಿ ಮಾಡುತ್ತಿದ್ದ. ಕೆಲವು ತಿಂಗಳ ಹಿಂದಷ್ಟೇ ಎಬಿವಿಪಿ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಸಮಿತಿ ತನಿಖೆ ನಡೆಸಿತ್ತು. ತನಿಖೆಯಲ್ಲಿ ರೋಹಿತ್ ಸೇರಿದಂತೆ ನಾಲ್ವರು ತಪ್ಪಿತಸ್ಥರು ಎಂದು ಸಾಬೀತಾದ ಹಿನ್ನೆಲೆಯಲ್ಲಿ ತಪ್ಪಿತಸ್ಥ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯದ ಒಳಗೆ ಬಾರದಂತೆ ನಿರ್ಬಂಧ ಹೇರಲಾಗಿತ್ತು.
ಹೀಗಾಗಿ ರೋಹಿತ್ ವಿವಿ ಕ್ಯಾಂಪಸ್ ಆವರಣದ ಹೊರಗೆ ಟೆಂಟ್ ಒಂದನ್ನು ಹಾಕಿ ಜೀವನ ನಡೆಸುತ್ತಿದ್ದ. ಹೀಗಾಗಿ ದಲಿತರು ಅಕ್ರೋಶ ವ್ಯಕ್ತಪಡಿಸಿದ್ದರು. ಆದರೆ ವಿಶ್ವವಿದ್ಯಾಲಯ ಮಾತ್ರ ವಿದ್ಯಾರ್ಥಿಗಳ ಕೂಗನ್ನು ಆಲಿಸಿರಲಿಲ್ಲ. ಮಾತುಕತೆಗಾಗಿ ವಿವಿ ಕುಲಪತಿಯವರ ಬಳಿ ಸಮಯ ಕೇಳಿದರೂ, ಅವಕಾಶ ನಿರಾಕರಿಸಿದ್ದರು ಈ ಹಿನ್ನೆಲೆಯಲ್ಲಿ ರೋಹಿತ್ ತೀವ್ರವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಆತನ ಸ್ನೇಹಿತ ವೆಂಕಟ್ ಹೇಳಿದ್ದನು.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮತ್ತಷ್ಟು ವಿದ್ಯಾರ್ಥಿಗಳು, ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗಸ್ಟ್ ತಿಂಗಳಿನಲ್ಲಿ ಬಂಡಾರು ದತ್ತಾತ್ರೇಯ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದರು ಎಂದು ಆರೋಪಿಸಿದ್ದರು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈದರಾಬಾದ್ ಪೊಲೀಸರು ಇದೀಗ ಪ್ರಕರಣ ಕುರಿತಂತೆ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ವಿವಿಯ ಕುಲಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.