ನವದೆಹಲಿ : ದೆಹಲಿಯ ಬಸ್ಗಳಲ್ಲಿ ಇನ್ಮುಂದೆ ವೈ-ಫೈ ಸೌಲಭ್ಯ ಸಿಗಲಿದೆ. ಅಷ್ಟೇ ಅಲ್ಲ ಜಿಪಿಎಸ್ ಸೇವೆ ಕೂಡ ಲಭ್ಯ. ಹಾಗಂತ, ಬಸ್ನಲ್ಲಿ ಅಪ್ಪಿ ತಪ್ಪಿ ನೋಡಬಾರದ್ದನ್ನೆಲ್ಲ ನೋಡಲು ಮುಂದಾದರೆ ಪೊಲೀಸರ ಅತಿಥಿಯಾದೀರಾ ಜೋಕೆ. ಯಾಕೆಂದರೆ ಬಸ್ಗಳಿಗೆಲ್ಲ ಸಿಸಿಟಿವಿಗಳನ್ನೂ ಅಳವಡಿಸಲಾಗುತ್ತಿದೆ.
ಹೌದು, ಈಗಾಗಲೇ ಪ್ರಾಯೋಗಿಕವಾಗಿ ಈ ವ್ಯವಸ್ಥೆಗೆ ಚಾಲನೆ ಸಿಕ್ಕಿದೆ. ಗುರುವಾರ ಬೆಳಗ್ಗೆ ಸಾರಿಗೆ ಸಚಿವ ಗೋಪಾಲ್ ರೈ ಯೋಜನೆಗೆ ಚಾಲನೆ ನೀಡಿದ್ದಾರೆ. ಮೊದಲ ಹಂತದಲ್ಲಿ ಸಾಮಾನ್ಯ ಸಾರಿಗೆಯ ಆರು ಬಸ್ಗಳಲ್ಲಿ ಈ ಸೌಲಭ್ಯ ಅಳವಡಿಸಲಾಗಿದೆ. ದೆಹಲಿಯಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ.
ಸದ್ಯಕ್ಕೆ ಆರಂಭದ 10 ನಿಮಿಷ ಮಾತ್ರ ಉಚಿತ ವೈ ಫೈ ಸೇವೆ ನೀಡಲಾಗುತ್ತಿದೆ. ಇದರ ನಿರ್ವಹಣೆ ಜವಾಬ್ದಾರಿಯನ್ನು ಏರ್ಟೆಲ್, ರಿಲಯನ್ಸ್ ಮತ್ತು ಭೂಮಿ ಇನ್ಪೋಟೆಕ್ ಕಂಪನಿಗಳಿಗೆ ಮಾತ್ರ ನೀಡಲಾಗಿದೆ. ಈ ಕಂಪನಿಗಳು ತಲಾ 2 ಬಸ್ಗಳನ್ನು ನಿರ್ವಹಿಸಲಿದೆ. ಫೆಬ್ರವರಿ 15ರೊಳಗೆ ಎಲ್ಲಾ ಬಸ್ಗಳಿಗೂ ಅಳವಡಿಸಲಾಗುವುದು ಎಂದ ರೈ ತಿಳಿಸಿದ್ದಾರೆ.