ರಾಷ್ಟ್ರೀಯ

ಕತ್ರಾ ಹೆಲಿಕಾಪ್ಟರ್ ದುರಂತ: ತಾನು ಬದುಕಿದ್ದೇನೆ ಎಂದ ‘ಮೃತ ಪೈಲಟ್’

Pinterest LinkedIn Tumblr

sumiದುಬೈ, ನ.25: ಸೋಮವಾರ ವೈಷ್ಣೋದೇವಿ ಸಮೀಪ ಕತ್ರಾದಲ್ಲಿ ಹೆಲಿಕಾಪ್ಟರ್‌ವೊಂದು ಪತನಗೊಂಡು ಆರು ಯಾತ್ರಿಕರು ಮತ್ತು ಓರ್ವ ಮಹಿಳಾ ಪೈಲಟ್ ಸೇರಿದಂತೆ ಏಳು ಜನರು ಮೃತಪಟ್ಟಿದ್ದರು. ಮೃತ ಪೈಲಟ್ ಹೈದರಾಬಾದ್‌ನ ಸುಮಿತಾ ವಿಜಯನ್ ಎಂದು ಗುರುತಿಸಲಾಗಿತ್ತು.

ಆದರೆ ಇದೀಗ ಪ್ರಕಟಗೊಂಡಿರುವ ‘ಸುಮಿತಾ ವಿಜಯನ್’ ತಾನು ಬದುಕಿದ್ದು, ದುಬೈನಲ್ಲಿ ವಾಸವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಅರೆ! ಹೆಲಿಕಾಪ್ಟರ್‌ನಲ್ಲಿ ಮೃತಪಟ್ಟಿದ್ದ ಪೈಲಟ್ ದುಬೈ ತಲುಪಿದ್ದಾದರೂ ಹೇಗೆ…? ಅಂದ ಹಾಗೆ ಇದೆಲ್ಲ ಮಾಧ್ಯಮಗಳು ಮಾಡಿರುವ ಎಡವಟ್ಟು. ದುರಂತದ ಸುದ್ದಿಯನ್ನು ಪ್ರಕಟಿಸುವಾಗ ಸುಮಿತಾ ವಿಜಯನ್‌ರ ಭಾವಚಿತ್ರಕ್ಕಾಗಿ ಸಾಮಾಜಿಕ ಮಾಧ್ಯಮಗಳನ್ನು ತಡಕಾಡಿದಾಗ ಸಿಕ್ಕಿದ್ದು ಈ ಕೇರಳ ಮೂಲದ ದುಬೈ ಸುಮಿತಾರ ಭಾವಚಿತ್ರ. ಅವರೂ ವೃತ್ತಿಯಲ್ಲಿ ಪೈಲಟ್ ಆಗಿದ್ದರಿಂದ ದೃಢಪಡಿಸಿಕೊಳ್ಳುವ ಗೋಜಿಗೆ ಹೋಗದ ಅವು ಸುದ್ದಿಯೊಂದಿಗೆ ಆ ಚಿತ್ರವನ್ನೇ ಪ್ರಕಟಿಸಿದ್ದವು. ಇದು ಎಲ್ಲ ಗೊಂದಲಗಳಿಗೆ ಕಾರಣವಾಗಿತ್ತು.

ಮಂಗಳವಾರ ಬೆಳಗ್ಗೆ ವೃತ್ತಪತ್ರಿಕೆಗಳಲ್ಲಿ ಸುಮಿತಾರ ಚಿತ್ರವನ್ನು ಕಂಡ ಆಕೆಯ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ದೂರವಾಣಿ ಕರೆಗಳ ಮಹಾಪೂರವೇ ಹರಿದು ಬಂದಿತ್ತು. ಸುಮಿತಾ ಇತ್ತೀಚೆಗಷ್ಟೇ ದಿಲ್ಲಿಗೆ ಭೇಟಿ ನೀಡಿದ್ದರಿಂದ ಸಹಜವಾಗಿಯೇ ಅವರೆಲ್ಲ ಕಳವಳಗೊಂಡಿದ್ದರು.

ಮೇಲ್ ಟುಡೇ ಸುಮಿತಾರನ್ನು ಉಲ್ಲೇಖಿಸಿ ಈ ವಿಷಯವನ್ನು ವರದಿ ಮಾಡಿದೆ. ನನ್ನ ದುರದೃಷ್ಟವೆಂದರೆ ಇತ್ತೀಚೆಗಷ್ಟೇ ನಾನು ದಿಲ್ಲಿಗೆ ಭೇಟಿ ನೀಡಿದ್ದೆ. ನನ್ನವರೆಲ್ಲ ನನ್ನ ಚಿತ್ರವನ್ನು ಕಂಡಾಗ ಸತ್ತಿದ್ದು ನಾನೇ ಎಂದು ಹೆಚ್ಚುಕಡಿಮೆ ನಂಬಿಯೇಬಿಟ್ಟಿದ್ದರು ಎಂದು ಸುಮಿತಾ ಹೇಳಿದ್ದಾರೆ.

ಸುಮಿತಾ ತಾನು ಇನ್ನೂ ಬದುಕಿಯೇ ಇದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಸ್ಪಷ್ಟೀಕರಣ ನೀಡುವಂತಾಗಿತ್ತು ಎಂದೂ ಮೇಲ್ ಟುಡೇ ವರದಿ ಮಾಡಿದೆ.

Write A Comment