ಮನೋರಂಜನೆ

ಆಮೀರ್ ಖಾನ್ ನಿಮ್ಮನ್ನು ಸೃಷ್ಟಿಸಿದ್ದು ಇದೇ ದೇಶ ಎಂಬುದನ್ನು ಮರೆಯಬಾರದು: ತಿರುಗೇಟು ನೀಡಿದ ಅನುಪಮ್ ಖೇರ್

Pinterest LinkedIn Tumblr

anupam_aamir

ನವದೆಹಲಿ: ದೇಶದಲ್ಲಿ ಅಸುರಕ್ಷತೆ ಮನೋಭಾವವಿದೆ ಎಂಬ ಬಾಲಿವುಡ್ ನಟ ಆಮೀರ್ ಖಾನ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಟ ಅನುಪಮ್ ಖೇರ್ ಅವರು, ಆಮೀರ್ ಖಾನ್ ರನ್ನು ಸೃಷ್ಟಿಸಿದ್ದೇ ಈ ಭಾರತ ದೇಶ ಎಂಬುದನ್ನು ಆಮೀರ್ ಖಾನ್ ಕುಟುಂಬ ಮರೆಯಬಾರದು ಎಂದು ಹೇಳಿದ್ದಾರೆ.

ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆಮೀರ್ ಖಾನ್ ನೀಡಿದ್ದ ಅಸಹಿಷ್ಣುತೆ ಕುರಿತ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಇದೀಗ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡ ಆಮೀರ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಿರಣ್ ರಾವ್ ಅವರು ಯಾವ ದೇಶಕ್ಕೆ ಹೋಗಬೇಕು ಎಂದು ಯೋಚಿಸಿದ್ದಾರೆಯೇ ಎಂದು ನೀವು ಕೇಳಿದ್ದೀರಾ. ಆಮೀರ್ ಖಾನ್ ರನ್ನು ಸೃಷ್ಟಿ ಮಾಡಿದ ದೇಶ ಯಾವುದು ಎಂದು ಕಿರಣ್ ಅವರಿಗೆ ನೀವು ತಿಳಿಸಿದ್ದೀರಾ ಎಂದು ಹೇಳುವ ಮೂಲಕ ಆಮೀರ್ ಖಾನ್ ಅವರ ಹೇಳಿಕೆಯನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ.

ಈ ಹಿಂದೆ ಇದೇ ರೀತಿ ಅಸಹಿಷ್ಣುತೆ ವಿರುದ್ಧ ಸಾಹಿತಿಗಳು ನಡೆಸಿದ್ದ ಪ್ರತಿಭಟನೆಯನ್ನು ವಿರೋಧಿಸಿದ್ದ ಅನುಪಮ್ ಖೇರ್ ಅವರು “ಮಾರ್ಚ್ ಫಾರ್ ಇಂಡಿಯಾ” ಎಂಬ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದರು.

ನಿನ್ನೆ ನವದೆಹಲಿಯಲ್ಲಿ ನಡೆದ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಾಲಿವುಡ್ ನಟ ಆಮೀರ್ ಖಾನ್ ಅವರು, ತಾವು ಪತ್ನಿ ಕಿರಣ್ ರಾವ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ತಾವು ಭಾರತ ದೇಶವನ್ನು ತೊರೆಯಬಾರದೇಕೆ ಎಂದು ಪ್ರಶ್ನಿಸಿದ್ದರು. ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಅಸುರಕ್ಷತೆಯ ಆತಂಕ ಕಾಡುತ್ತಿದೆ ಎಂದು ಕಿರಣ್ ತಮ್ಮ ಆತಂಕ ವ್ಯಕ್ತಪಡಿಸಿದ್ದರು. ತಮ್ಮ ಮಕ್ಕಳ ಭದ್ರತೆಯ ದೃಷ್ಟಿಯಿಂದ ತಾವು ವಿದೇಶದಲ್ಲಿ ನೆಲೆಸಬಾರದೇಕೆ ಎಂದು ಕಿರಣ್ ಪ್ರಶ್ನಿಸಿದ್ದರು ಎಂದು ಆಮೀರ್ ಹೇಳಿದ್ದರು.

ಪ್ರತಿನಿತ್ಯ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಅಸಹಿಷ್ಣುತೆ ಕುರಿತ ಸುದ್ದಿಗಳು ಕಿರಣ್ ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನು ಉಂಟು ಮಾಡಿದ್ದು, ಅವರು ತೀವ್ರ ಆತಂಕಕ್ಕೊಳಗಾಗಿದ್ದಾರೆ ಎಂದು ಆಮೀರ್ ಖಾನ್ ಹೇಳಿದ್ದರು. ಅಲ್ಲದೆ ಅಸಹಿಷ್ಣುತೆ ವಿರುದ್ಧ ಸಾಹಿತಿಗಳು ನಡೆಸುತ್ತಿರುವ ಪ್ರತಿಭಟನೆಗೂ ಆಮೀರ್ ಖಾನ್ ಅವರು ತಮ್ಮ ಬೆಂಬಲ ಸೂಚಿಸಿದ್ದರು.

Write A Comment