ರಾಷ್ಟ್ರೀಯ

ತಮಿಳುನಾಡಿನಲ್ಲಿ ಮಳೆಯ ಆರ್ಭಟ: ಸಾವಿನ ಸಂಖ್ಯೆ 71ಕ್ಕೆ: ದಕ್ಷಿಣ ಭಾರತದಲ್ಲಿ ಜನಜೀವನ ಅಸ್ತವ್ಯಸ್ತ

Pinterest LinkedIn Tumblr

Rain__ಚೆನ್ನೈ, ನ.16: ತಮಿಳುನಾಡಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ದುರಂತಗಳಿಂದ ಸಾವನ್ನಪ್ಪಿದವರ ಸಂಖ್ಯೆ 71ಕ್ಕೇರಿದೆ. ಕರ್ನಾಟಕದಿಂದ ಪುದುಚೇರಿಯವರೆಗಿನ ದಕ್ಷಿಣ ಭಾರತದ ಇತರ ಹಲವು ಭಾಗಗಳಲ್ಲೂ ಮಳೆಯ ಬಿರುಸು ಮುಂದುವರಿದಿದೆ. ಸಂತ್ರಸ್ತರಿಗೆ ಪರಿಹಾರರೂಪವಾಗಿ ಮುಖ್ಯಮಂತ್ರಿ ಜಯಲಲಿತಾ 500 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ.
ಕುಂಭದ್ರೋಣ ಮಳೆಯಿಂದಾಗಿ ಮರಿನಾ ಬೀಚ್ ಸಹಿತ ಚೆನ್ನೈಯ ಜನಪ್ರಿಯ ಸ್ಥಳಗಳು ನೆರೆಯಿಂದಾವೃತವಾಗಿವೆ. ಸೋಮವಾರ ಮುಂಜಾನೆ 5:30ರ ತನಕ ಚೆನ್ನೈಯಲ್ಲಿ 24 ಸೆ.ಮೀ. ಮಳೆ ದಾಖಲಾಗಿದೆ. ಮಳೆ ಹಾಗೂ ಬಿರುಗಾಳಿಯ ಕಾರಣ ತರಕಾರಿಯ ಬೆಲೆಯೂ ಏರಿಕೆಯಾಗಿದೆ. ಚೆನ್ನೈ ಹಾಗೂ ಕರಾವಳಿ ಪ್ರದೇಶಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ಸೋಮವಾರ ಮುನ್ನೆಚ್ಚರಿಕೆ ನೀಡಿದ್ದು, ರಾಜ್ಯದ ಜನರ ಬವಣೆ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ.

ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದ್ದು, ಉಪನಗರ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಜ್ಯ ಸರಕಾರವು ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಿದೆ.
ಬಂಗಾಳ ಕೊಲ್ಲಿಯ ಆಗ್ನೇಯದಲ್ಲಿ ಒತ್ತಡ ಕಡಿಮೆಯಾಗಿದ್ದು ಅದು ವಾಯುಭಾರ ಕುಸಿತವಾಗಿ ತೀವ್ರಗೊಳ್ಳಬಹುದೆಂದು ಹವಾಮಾನ ಇಲಾಖೆಯ ಅಧಿಕಾರಿಗಳು ಈ ಮೊದಲು ತಿಳಿಸಿದ್ದರು.
ಮಳೆ-ಗಾಳಿಯಿಂದಾಗಿ ತರಕಾರಿಯ ಬೆಲೆಯೇರಿಕೆಯಾಗಿದ್ದು, ಟೊಮೆಟೊದ ಬೆಲೆ ಕಿ.ಗ್ರಾಂ.ಗೆ ರೂ.100ಕ್ಕೆ ತಲುಪಿದೆ. ಬೆಂಡೆಕಾಯಿಯ ಬೆಲೆ ಶೇ.50ರಷ್ಟು ಏರಿಕೆಯಾಗಿದೆ.

ರಾಜ್ಯದ ಇತರ ಭಾಗಗಳಲ್ಲೂ ಪರಿಸ್ಥಿತಿ ಹದಗೆಟ್ಟಿದೆ. ವೆಲ್ಲೂರಿನಲ್ಲಿ ಕೆರೆಯೊಂದು ನಾದುರಸ್ತಿಯಲ್ಲಿರುವುದರಿಂದ ಅದರ ಸಮೀಪದ ಗ್ರಾಮಸ್ಥರು ಭಯದಿಂದಲೇ ದಿನ ಕಳೆಯುತ್ತಿದ್ದಾರೆ. ಅಕ್ಟೋಬರ್‌ನಿಂದ ಈಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಮ್ಮ ಗ್ರಾಮವನ್ನು ಕೆರೆಯು ಆಪೋಷನ ತೆಗೆದುಕೊಳ್ಳಬಹುದೆಂಬ ಭೀತಿ ಸುಮಾರು 4 ಸಾವಿರ ಜನಸಂಖ್ಯೆಯ ಜವತಿರಾಮ ಸಮುತಿರಂ ಪ್ರದೇಶದವರಲ್ಲಿ ತುಂಬಿದೆ. ಕಳೆದ ಕೆಲವು ವಾರಗಳಲ್ಲಿ ಕೆರೆ ಹಾಗೂ ಪಂಚಾಯತ್‌ಗಳ ನಡುವಿನ ಭೂಮಿ ಕೆಲವು ಇಂಚುಗಳಷ್ಟು ಕುಸಿದಿದೆ.

ನೀರಿನ ಮಟ್ಟ ಸತತವಾಗಿ ಏರುತ್ತಿರುವುದರಿಂದ ಕೆರೆಯ ಸುತ್ತಲ ಗೋಡೆ ದುರ್ಬಲಗೊಂಡಿದೆ. ಇದರಿಂದ 130 ಎಕ್ರೆ ಭತ್ತ ಬೆಳೆಯುವ ಪ್ರದೇಶ ಹೊಂದಿರುವ ನಾರಾಯಣ ಪುರಂ ಪಂಚಾಯತ್ ಪ್ರದೇಶ ಸಂಪೂರ್ಣ ಕೊಚ್ಚಿಹೋಗುವ ಭೀತಿ ಎದುರಾಗಿದೆ.

ಇದೇ ವೇಳೆ, ಬೆಂಗಳೂರಿನಲ್ಲಿ ಸೋಮವಾರ ಸುರಿಯುತ್ತಿದ್ದ ಸತತ ಮಳೆಯ ಕಾರಣ ಭಾರತ ಹಾಗೂ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡಗಳ ನಡುವಣ ಟೆಸ್ಟ್ ಪಂದ್ಯವನ್ನು ಸತತ 2ನೆ ದಿನವೂ ರದ್ದುಪಡಿಸಲಾಯಿತು.

ಪುದುಚೇರಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಸೋಮವಾರ ಮುಂಜಾನೆ 8:30ಕ್ಕೆ ಅಂತ್ಯಗೊಂಡ 24 ತಾಸುಗಳಲ್ಲಿ 11ಸೆ.ಮೀ.ಗೂ ಹೆಚ್ಚು ಮಳೆಯಾಗಿದೆ. ಮಳೆಯ ಕಾರಣ ಪುದುಚೇರಿ ಹಾಗೂ ಕಾರೈಕಲ್ ಪ್ರದೇಶಗಳ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ.

ಆಂಧ್ರದಲ್ಲೂ ಭಾರೀ ಮಳೆ
ಆಂಧ್ರ ಪ್ರದೇಶದಲ್ಲೂ ಮುಸಲಧಾರೆಯು ಪ್ರಳಯ ವನ್ನು ಸೃಷ್ಟಿಸಿದೆ. ಕರಾವಳಿ ಆಂಧ್ರದಲ್ಲಿ ಮಳೆ ಸಂಬಂಧಿ ದುರಂತಗಳಿಂದ ಕಳೆದ ವಾರ 12ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಅಭೂತಪೂರ್ವ ಮಳೆಯು ಸೋಮವಾರವೂ ಕರಾವಳಿ ಆಂಧ್ರದ ಸಾಮಾನ್ಯ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮಳೆ ಪೀಡಿತ ಜಿಲ್ಲೆಗಳ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಯಾವುದೇ ಜೀವ ಹಾನಿಯಾಗದಂತೆ ಖಚಿತಪಡಿಸಲು ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಚಿತ್ತೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರದಿಂದ 2 ದಿನಗಳ ಕಾಲ ಶಾಲೆಗಳಿಗೆ ರಜೆ ಸಾರಲಾಗಿದೆ. ಜಲ ಮೂಲಗಳ ಬಳಿ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜನರ ಸುರಕ್ಷೆಯನ್ನು ಖಚಿತಪಡಿಸಲು 12ಕ್ಕೂ ಹೆಚ್ಚು ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ.
ರಾಯಲಸೀಮಾದ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಆಂಧ್ರಪ್ರದೇಶವು ಈ ವರ್ಷ ಬರಗಾಲವನ್ನು ಘೋಷಿಸಿತ್ತು. ಪ್ರಾಣ ಹಾಗೂ ಬೆಳೆ ಹಾನಿಯಾಗದೆ ಮಳೆ ಸುರಿಯುವುದಕ್ಕೆ ಆಡಳಿತದ ಸ್ವಾಗತವೇ ಇದೆ. ಮಳೆ ನೀರನ್ನು ವಿವೇಚನೆಯಿಂದ ಉಪಯೋಗಿಸುವಂತೆ ನಾಯ್ಡು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಾಜ್ಯದ 8 ಸಾವಿರ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಲಾಗುತ್ತಿದೆ.

ರಾಜ್ಯದಲ್ಲೂ ಇನ್ನೆರಡು ದಿನ ಮಳೆ
ಬೆಂಗಳೂರು, ನ.16: ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮೋಡ ಕವಿದ ವಾತಾವರಣ, ಮೈ ನಡುಗಿಸುವ ಚಳಿ, ಜಿಟಿಜಿಟಿ ಮಳೆ, ಸಂಚಾರ ದಟ್ಟಣೆಯಿಂದ ಕಂಗೆಟ್ಟಿರುವ ರಾಜ್ಯದ ದಕ್ಷಿಣ ಒಳನಾಡಿನ ಜನತೆಗೆ ಮತ್ತೊಂದು ಅಹಿತಕರ ಸುದ್ದಿಯನ್ನು ಹವಾಮಾನ ಇಲಾಖೆ ನೀಡಿದೆ.
ತೀವ್ರ ಸ್ವರೂಪದ ಚಂಡಮಾರುತದ ಹಿನ್ನೆಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ ಆಗುವ ಸಾಧ್ಯತೆಯಿದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಹಾವಳಿಯೆಬ್ಬಿಸಿರುವ ಚಂಡಮಾರುತ ರಾಜ್ಯದ ಕರಾವಳಿಗೆ ಅಪ್ಪಳಿಸಲಿದೆ ಎಂದು ತಿಳಿದು ಬಂದಿದೆ.

Write A Comment