ರಾಷ್ಟ್ರೀಯ

ಸುನಂದಾ ಪುಷ್ಕರ್ ಸಾವು: ನ್ಯಾಯಾಲಯಕ್ಕೆ ಸಲ್ಲಿಸುವವರೆಗೆ ಎಫ್‌ಬಿಐ ವರದಿಯ ವಿವರ ಬಹಿರಂಗವಿಲ್ಲ: ದಿಲ್ಲಿ ಪೊಲೀಸ್

Pinterest LinkedIn Tumblr

sunandaಹೊಸದಿಲ್ಲಿ,ನ.12: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಪೊಲೋನಿಯಂ ವಿಷಪ್ರಾಷನ ಕಾರಣವೆನ್ನುವುದನ್ನು ತಳ್ಳಿ ಹಾಕಿರುವ ಎಫ್‌ಬಿಐ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವವರೆಗೆ ಅದರಲ್ಲಿನ ವಿವರಗಳನ್ನು ಬಹಿರಂಗಗೊಳಿಸುವುದು ಸಾಧ್ಯವಿಲ್ಲ ಎಂದು ದಿಲ್ಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು ಗುರುವಾರ ಇಲ್ಲಿ ತಿಳಿಸಿದರು.
ಅತ್ಯಂತ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವೊಂದು ವರದಿಯನ್ನು ಪರಿಶೀಲಿಸುತ್ತಿದ್ದು, ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೂ ವರದಿಯನ್ನು ವಿಶ್ಲೇಷಣೆಗಾಗಿ ಇನ್ನೂ ಹಸ್ತಾಂತರಿಸಿಲ್ಲ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ವರದಿಯ ವಿಶ್ಲೇಷಣೆಗೆ ಕಾಲಾವಕಾಶದ ಅಗತ್ಯವಿದೆ.ವರದಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ ಬಳಿಕವೂ ಅದಕ್ಕೆ ಸಂಬಂಧಿಸಿದ ಎಲ್ಲ ಕಾನೂನು ವಿಷಯಗಳ ಅಧ್ಯಯನದ ನಂತರವೇ ಅದರಲ್ಲಿಯ ವಿವರಗಳನ್ನು ಬಹಿರಂಗಗೊಳಿಸಲು ಸಾಧ್ಯ ಎಂದರು.
ಸುನಂದಾರ ವಿಸೆರಾ ಸ್ಯಾಂಪಲ್‌ಗಳಲ್ಲಿ ವಿಕಿರಣ ಪ್ರಮಾಣವು ನಿಗದಿತ ಸುರಕ್ಷತಾ ಮಟ್ಟದಲ್ಲಿಯೇ ಇದೆ ಎಂದು ಬಸ್ಸಿ ನಿನ್ನೆ ತಿಳಿಸಿದ್ದರು.
ಎರಡು ವರ್ಷಗಳ ಹಿಂದೆ ಸುನಂದಾ ಸಾವಿಗೆ ಕಾರಣವಾಗಿದ್ದ ವಿಷವನ್ನು ಎಫ್‌ಬಿಐ ವರದಿಯು ಹೆಸರಿಸಿದೆ ಎಂದು ಮೂಲಗಳು ತಿಳಿಸಿವೆ. ಸುನಂದಾ ಸಾವಿಗೆ ವಿಷಪ್ರಾಷನವೇ ಕಾರಣವೆಂದು ಏಮ್ಸ್ ವೈದ್ಯಕೀಯ ಮಂಡಳಿಯು ಹೇಳಿತ್ತಾದರೂ ಆ ವಿಷವನ್ನು ಅದು ಗುರುತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಕಳೆದ ಫೆಬ್ರವರಿಯಲ್ಲಿ ವಿಸೆರಾ ಮಾದರಿಗಳನ್ನು ವಾಷಿಂಗ್ಟನ್‌ನಲ್ಲಿರುವ ಎಫ್‌ಬಿಐ ಪ್ರಯೋಗ ಶಾಲೆಗೆ ಕಳುಹಿಸಲಾಗಿತ್ತು.

Write A Comment