ಅಂತರಾಷ್ಟ್ರೀಯ

ಅಸಹಿಷ್ಣುತೆ ಬಗ್ಗೆ ಮೋದಿಯೊಂದಿಗೆ ಚರ್ಚಿಸಿ: ಬ್ರಿಟನ್ ಸಾಹಿತಿಗಳಿಂದ ಬ್ರಿಟಿಷ್ ಪ್ರಧಾನಿಗೆ ಬಹಿರಂಗ ಪತ್ರ

Pinterest LinkedIn Tumblr

David_ಲಂಡನ್, ನ. 12: ಭಾರತದಲ್ಲಿ ‘‘ಹೆಚ್ಚುತ್ತಿರುವ ಭೀತಿಯ ವಾತಾವರಣ’’ ಮತ್ತು ‘‘ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಹಿಂಸೆ’’ ಬಗ್ಗೆ ಬ್ರಿಟನ್‌ಗೆ ಈ ವಾರ ಮೂರು ದಿನಗಳ ಪ್ರವಾಸಕ್ಕಾಗಿ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಚರ್ಚಿಸುವಂತೆ ಇಯಾನ್ ಮೆಕ್‌ಇವಾನ್, ಹರಿ ಕುಂಝ್ರು ಮತ್ತು ಸಲ್ಮಾನ್ ರಶ್ದಿ ಸೇರಿದಂತೆ 100ಕ್ಕೂ ಅಧಿಕ ಸಾಹಿತಿಗಳು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್‌ಗೆ ಬುಧವಾರ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ವಾಕ್ ಸ್ವಾತಂತ್ರ ಸಂಘಟನೆ ‘ಪೆನ್ ಇಂಟರ್‌ನ್ಯಾಶನಲ್’ ಪತ್ರವನ್ನು ಬಿಡುಗಡೆ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ ನಡೆದ ಮೂವರು ಭಾರತೀಯ ಸಾಹಿತಿಗಳ ಹತ್ಯೆಯ ಬಗ್ಗೆ ಪತ್ರವು ಬ್ರಿಟನ್ ಪ್ರಧಾನಿಗೆ ವಿವರಿಸುತ್ತದೆ ಹಾಗೂ ದೇಶದಲ್ಲಿ ವಾಕ್ ಸ್ವಾತಂತ್ರಕ್ಕೆ ರಕ್ಷಣೆ ನೀಡುವಂತೆ ಮೋದಿಯನ್ನು ಉತ್ತೇಜಿಸುವಂತೆ ಕ್ಯಾಮರೂನ್‌ಗೆ ಮನವಿ ಮಾಡಿದೆ. ಮೋದಿ ನವೆಂಬರ್ 12ರಿಂದ 14ರವರೆಗೆ ಬ್ರಿಟನ್ ಪ್ರವಾಸದಲ್ಲಿರುತ್ತಾರೆ.
ಭಾರತೀಯ ಸಂವಿಧಾನದಲ್ಲಿ ಅಡಕವಾಗಿರುವ ಪ್ರಜಾಸತ್ತಾತ್ಮಕ ಸ್ವಾತಂತ್ರಗಳ ಆಶಯಕ್ಕೆ ಬದ್ಧರಾಗುವಂತೆ ಭಾರತೀಯ ಪ್ರಧಾನಿಯನ್ನು ಒತ್ತಾಯಿಸುವಂತೆ ಲೇಖಕರು ಬ್ರಿಟನ್ ಪ್ರಧಾನಿಗೆ ಮನವಿ ಮಾಡಿದ್ದಾರೆ.
‘‘ಕಳೆದ ಎರಡು ವರ್ಷಗಳಲ್ಲಿ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ, ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಭೋಲ್ಕರ್ ಮುಂತಾದ ಮೂವರು ಪ್ರಗತಿಪರ ಚಿಂತಕರನ್ನು ಅಜ್ಞಾತ ಬಂದೂಕುಧಾರಿಗಳು ಹತ್ಯೆ ಮಾಡಿರುವ ವಿಷಯ ನಿಮಗೆ ತಿಳಿದಿರಬಹುದು. 1992ರ ಬಳಿಕ ದೇಶದಲ್ಲಿ ಕನಿಷ್ಠ 37 ಪತ್ರಕರ್ತರನ್ನು ಕೊಲ್ಲಲಾಗಿದೆ. ಇತರ ಸಾಹಿತಿಗಳಿಗೆ ಬೆದರಿಕೆ ಹಾಕಲಾಗಿದೆ’’ ಎಂದು ಪತ್ರವು ಹೇಳಿದೆ.
‘‘ಸಾಹಿತಿಗಳ ಮೇಲಿನ ದಾಳಿಯನ್ನು ಪ್ರಶ್ನಿಸಿ ಕಳೆದ ತಿಂಗಳು ಕನಿಷ್ಠ 40 ಭಾರತೀಯ ಕಾದಂಬರಿಕಾರರು, ಕವಿಗಳು ಮತ್ತು ನಾಟಕಕಾರರು ತಮ್ಮ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದಾರೆ’’ ಎಂಬುದನ್ನು ಸಾಹಿತಿಗಳು ಕ್ಯಾಮರೂನ್ ಗಮನಕ್ಕೆ ತಂದಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವುದು ಸಾಹಿತಿಗಳು ಮಾತ್ರವಲ್ಲ ಎಂದು ಹೇಳಿರುವ ಬಹಿರಂಗ ಪತ್ರ, ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ಧ ವಿಜ್ಞಾನಿಗಳು, ಕಲಾವಿದರು, ಚಿತ್ರನಿರ್ಮಾಪಕರು, ಶಿಕ್ಷಣ ತಜ್ಞರು, ವಿದ್ವಾಂಸರು ಮತ್ತು ನಟರೂ ತಮ್ಮ ಧ್ವನಿಯೆತ್ತಿದ್ದಾರೆ ಎಂದಿದ್ದಾರೆ.

Write A Comment