ಕರ್ನಾಟಕ

ಬೆಳ್ಳಂದೂರು ಕೆರೆಯಲ್ಲಿ ಮರುಕಳಿಸಿದ ನೊರೆ ಹಾವಳಿ

Pinterest LinkedIn Tumblr

bellandurಬೆಂಗಳೂರು, ನ.12:ನಗರದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಬೆಳ್ಳಂದೂರು ಮತ್ತು ವರ್ತೂರು ಕೆರೆ ಕೋಡಿಗಳಲ್ಲಿ ನೊರೆಯ ಪ್ರಮಾಣ ಹೆಚ್ಚಾಗಿ ವಾಹನ ಸವಾರರರು ರಸ್ತೆಯನ್ನು ದಾಟಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳ್ಳಂದೂರಿನ ಅಮಾನಿಕೆರೆಗೆ ನಗರದ ಬಹುತೇಕ ಎಲ್ಲ ಪ್ರದೇಶಗಳಿಂದ ಕಲುಷಿತ, ರಾಸಾಯನಿಕ ಮಿಶ್ರಿತ, ತ್ಯಾಜ್ಯ ನೀರು ಸೇರುತ್ತಿರುವುದರಿಂದ ಕೆರೆ ಕೋಡಿಗಳಲ್ಲಿ ನೀರು ಹರಿಯುವ ರಭಸಕ್ಕೆ ನೊರೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದೆ. ಅಲ್ಲದೆ, ಕೆರೆ ಕೋಡಿ ಮೇಲೆ ನೊರೆ ಹರಡಿದ್ದು, ಗಾಳಿ ಬೀಸಿದಾಗ ಸುತ್ತಮುತ್ತಲಿನ ಮನೆಗಳು, ವಾಹನ ಸವಾರರ ಮೇಲೆ ಬೀಳುತ್ತಿದೆ.

ವಾಹನ ಸವಾರರು ನೊರೆಯಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಕ್ಕೆ ಒಳಗಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಕೆರೆಯಲ್ಲಿನ ನೊರೆಯನ್ನು ನಿಯಂತ್ರಿಸಲು ಬಿಬಿಎಂಪಿ ವತಿಯಿಂದ ಕೋಡಿಯಲ್ಲಿ ಐದಾರು ಕಡೆ ಪಂಪ್‌ಸೆಟ್ ಗಳನ್ನು ಅಳವಡಿಸಿ ನೊರೆ ಮೇಲೆ ನೀರು ಹಾಯಿಸುತ್ತಿದ್ದರೂ ಯಾವುದೇ ಪ್ರಯೋಜನ ವಾಗುತ್ತಿಲ್ಲ.

ನೊರೆಯ ಹಾವಳಿಯಿಂದ ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಡತೊಡಗಿವೆ. ಈ ಪ್ರದೇಶದಲ್ಲಿ ಬಾಡಿಗೆಗೆ ಮನೆ ಪಡೆಯಲು ಯಾರೂ ಮುಂದೆ ಬರುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗಷ್ಟೆ ಈ ಎರಡು ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡಿಎ, ಬಿಬಿಎಂಪಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ 350 ಕೋಟಿ ರೂ.ವೆಚ್ಚದಲ್ಲಿ ಶಾಶ್ವತ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದ್ದರು. ಆದರೆ, ಈವರೆಗೆ ಪಾಲಿಕೆ ಅಧಿಕಾರಿಗಳು ಯಾವುದೇ ಬಗೆಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Write A Comment