ರಾಷ್ಟ್ರೀಯ

ಮೋದಿಗೆ ಗಂಭೀರ ರಾಜಕೀಯ ಹಿನ್ನಡೆ: ಅಮೆರಿಕನ್ ಮಾಧ್ಯಮಗಳ ವಿಶ್ಲೇಷಣೆ

Pinterest LinkedIn Tumblr

modhiವಾಶಿಂಗ್ಟನ್,ನ.9: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕಳೆದ ಒಂದು ವರ್ಷದಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಕಾರ್ಯನಿರ್ವಹಣೆಯ ಕುರಿತಾದ ನೇರ ಹಾಗೂ ನಕಾರಾತ್ಮಕ ವೌಲ್ಯಮಾಪನ ಎಂದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ತಜ್ಞರೊಬ್ಬರು ಅಭಿಪ್ರಾಯಿಸಿದ್ದಾರೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿಯ ಆಘಾತಕಾರಿ ಸೋಲು ಪ್ರಧಾನಿ ನರೇಂದ್ರ ಮೋದಿಯವರಿಗಾದ ‘ಗಂಭೀರವಾದ ರಾಜಕೀಯ ಹಿನ್ನಡೆ’ಯೆಂದು ಅಮೆರಿಕದ ಮಾಧ್ಯಮ ವರದಿಯೊಂದು ಹೇಳಿದೆ.

ಕಳೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವು, ರಾಜಕಾರಣಿಗಳ ಬಗ್ಗೆ ಮತದಾರರಿಗಾಗಿರುವ ಭ್ರಮನಿರಸನದ ಪ್ರತಿಫಲನವಾಗಿದ್ದರೆ, ಬಿಹಾರದಲ್ಲಿ ಬಿಜೆಪಿಯ ಪರಾಭವವು ಕಳೆದೊಂದು ವರ್ಷದಲ್ಲಿ ಕೇಂದ್ರ ಸರಕಾರದ ಸಾಧನೆಯ ಕುರಿತಾದ ನೇರ ಹಾಗೂ ನಕಾರಾತ್ಮಕ ವೌಲ್ಯಮಾಪನವಾಗಿದೆ. ಭಾರತೀಯ ಮತದಾರರು ಕೇಂದ್ರದ ಆರ್ಥಿಕ ಹಾಗೂ ಸಾಮಾಜಿಕ ನೀತಿಗಳ ಬಗ್ಗೆ ತೀವ್ರ ಕಳವಳ ಹೊಂದಿರುವ ಹಾಗೆ ಭಾಸವಾಗುತ್ತಿದೆ’’ ಎಂದು ಮಿಶಿಗನ್ ವಿವಿಯ ಮಾರ್ಕೆಟಿಂಗ್ ಅಧ್ಯಯನ ವಿಭಾಗದ ಪ್ರೊಫೆಸರ್ ಪುನೀತ್ ಮಾನ್‌ಚಂದ್ ಹೇಳಿದ್ದಾರೆ.

ಬಿಹಾರದಂತಹ ಬೃಹತ್ ರಾಜ್ಯವನ್ನು ಕಳೆದುಕೊಂಡಿರುವುದು ಖಂಡಿತವಾಗಿಯೂ ಬಿಜೆಪಿಗಾದ ದೊಡ್ಡ ಹಿನ್ನಡೆಯೆಂದು ಅವರು ಹೇಳಿದ್ದಾರೆ.

ಕೇಂದ್ರದ ಆಡಳಿತ ಪಕ್ಷದ ವಿರುದ್ಧ ಸ್ಪರ್ಧಿಸುವ ಸಾಮರ್ಥ್ಯ ಯಾವುದೇ ಒಂದು ಪಕ್ಷಕ್ಕೆ ಇಲ್ಲದಿರುವ ಕಾರಣ ವಿವಿಧ ಪಕ್ಷಗಳನ್ನೊಳಗೊಂಡ ಮೈತ್ರಿಕೂಟ ರಚನೆಯು ಅತ್ಯುತ್ತಮ ಮಾರ್ಗವೆಂಬುದನ್ನು ಈ ಚುನಾವಣೆಯು ತೋರಿಸಿಕೊಟ್ಟಿದೆ ಎಂದು ಮಾನ್‌ಚಂದ್ ಹೇಳಿದ್ದಾರೆ.

243 ಸದಸ್ಯ ಬಲದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳ ಮಹಾಮೈತ್ರಿಕೂಟವು ಒಟ್ಟು ಶೇ.41.9 ಮತಗಳೊಂದಿಗೆ 178 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು34.1 ಶೇ.ಮತಗಳೊಂದಿಗೆ ಕೇವಲ 58 ಸೀಟುಗಳನ್ನು ಪಡೆದುಕೊಂಡಿದೆ. ಬಿಹಾರದಲ್ಲಿ ನಿತೀಶ್ ನೇತೃತ್ವದ ಮಹಾಮೈತ್ರಿಕೂಟವು ಬಿಜೆಪಿಯನ್ನು ಧೂಳೀಪಟಗೊಳಿಸಿರುವ ಬಗ್ಗೆ ಅಮೆರಿಕದ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿವೆ. ಭಾರತದ ಆಡಳಿತಾರೂಢ ಪಕ್ಷವು, ನಿರ್ಣಾಯಕ ಬಿಹಾರ ಚುನಾವಣೆಯಲ್ಲಿ ಸೋಲೊಪ್ಪಿಕೊಂಡಿದೆ’’ ಎಂದು ವಾಶಿಂಗ್ಟನ್ ಪೋಸ್ಟ್ ಪತ್ರಿಕೆಯ ವರದಿ ತಿಳಿಸಿದೆ.

ಬಿಹಾರ ಚುನಾವಣೆಯ ಸೋಲಿನಿಂದಾಗಿ ಬಿಜೆಪಿಗೆ ಪಶ್ಚಿಮಬಂಗಾಳ ಸೇರಿದಂತೆ ಈಶಾನ್ಯ ಭಾರತದಲ್ಲಿ ತನ್ನ ರಾಜಕೀಯ ಪ್ರಾಬಲ್ಯವನ್ನು ಹರಡಲು ಆಯಕಟ್ಟಿನ ಸ್ಥಾನವೊಂದು ತಪ್ಪಿಹೋಗಿದೆಯೆಂದು ನ್ಯೂಯಾರ್ಕ್ ಟೈಮ್ಸ್‌ನ ವರದಿಯೊಂದು ತಿಳಿಸಿದೆ. ಬಿಜೆಪಿಯ ಪರಾಭವವು ಮೋದಿಯ ಆರ್ಥಿಕ ಸೂಚಿಯನ್ನು ಬದಿಗೊತ್ತಲಿದೆಯೆಂದು ಅಮೆರಿಕದ ವಾಣಿಜ್ಯ ಪತ್ರಿಕೆ ವಾಲ್‌ಸ್ಟ್ರೀಲ್ ಜರ್ನಲ್‌ನ ವರದಿ ಹೇಳಿದೆ. ಸಂಪುಟ ಪುನಾರಚನೆಯ ಜೊತೆಗೆ, ಮೋದಿ ತನ್ನ ಆಡಳಿತದ ಗತಿಯನ್ನು ಬದಲಾಯಿಸಲಿದ್ದಾರೆಯೇ ಎಂಬ ಬಗ್ಗೆ ಭಾರತದಲ್ಲಿ ಬಿಸಿಬಿಸಿ ಚರ್ಚೆಯಾಗಲಿದೆಯೆಂದು ನ್ಯಾಶನಲ್ ಪಬ್ಲಿಕ್ ರೇಡಿಯೊ ಹೇಳಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಿದಾಗಿನಿಂದ ಬಿಜೆಪಿ ನಡೆಸುತ್ತಾ ಬಂದಿರುವ ಅಸಹಿಷ್ಣುತೆಯ ರಾಜಕೀಯ ಹಾಗೂ ಸಾಮಾಜಿಕ ಧ್ರುವೀಕರಣವನ್ನು ತಾವು ತಿರಸ್ಕರಿಸಿದ್ದೇವೆಂಬುದನ್ನು ಬಿಹಾರದ ಜನತೆ ಈ ಚುನಾವಣೆಯಲ್ಲಿ ಗಟ್ಟಿಯಾಗಿ ಸಾರಿದ್ದಾರೆಂದು ಅಮೆರಿಕದ ಇಂಡಿಯನ್ ನ್ಯಾಶನಲ್ ಓವರ್‌ಸೀಸ್ ಕಾಂಗ್ರೆಸ್‌ನ ಜಾನ್ ಅಬ್ರಹಾಂ ಹೇಳಿದ್ದಾರೆ. ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಹಾಗೂ ಎಲ್ಲಾ ಪೌರರಿಗೂ ಸಮಾನ ಅವಕಾಶಗಳನ್ನು ಒದಗಿಸುವ, ಕಾನೂನಿನ ಪ್ರಭುತ್ವವನ್ನು ಆಧರಿಸಿದ ದೇಶವೊಂದನ್ನು ನಿರ್ಮಿಸಲು ಪ್ರಜಾತಾಂತ್ರಿಕ ಮತ್ತು ಜಾತ್ಯತೀತ ಶಕ್ತಿಗಳು ಹೇಗೆ ಜೊತೆಯಾಗಿ ಕೆಲಸಮಾಡಬಹುದೆಂಬುದನ್ನು ಬಿಹಾರವು ತೋರಿಸಿಕೊಟ್ಟಿದೆಯೆಂದು ಅಬ್ರಹಾಂ ಹೇಳಿದ್ದಾರೆ.

Write A Comment