ಮನೋರಂಜನೆ

ಐಸಿಸಿ ಅಧ್ಯಕ್ಷತೆಯಿಂದ ಶ್ರೀನಿವಾಸನ್ ವಜಾ: ರವಿಶಾಸ್ತ್ರಿ, ರೋಜರ್ ಬಿನ್ನಿಗೂ ಗೇಟ್‌ಪಾಸ್; ಶಶಾಂಕ್ ಮನೋಹರ್ ಐಸಿಸಿ ನೂತನ ಅಧ್ಯಕ್ಷ

Pinterest LinkedIn Tumblr

SSS_ಮುಂಬೈ, ನ.9: ಎನ್. ಶ್ರೀನಿವಾಸನ್‌ರನ್ನು ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅವರನ್ನು ಹಿಂದಕ್ಕೆ ಕರೆಸಿ, ಇತ್ತೀಚೆಗೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಶಶಾಂಕ್ ಮನೋಹರ್‌ರನ್ನು ಐಸಿಸಿ ಮುಖ್ಯಸ್ಥರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ.
ಇಂದಿಲ್ಲಿ ನಡೆದ ಬಿಸಿಸಿಐನ 86ನೆ ವಾರ್ಷಿಕ ಅಧಿವೇಶನದಲ್ಲಿ ಶ್ರೀನಿವಾಸನ್‌ರನ್ನು ಐಸಿಸಿ ಅಧ್ಯಕ್ಷತೆಯಿಂದ ತೆರವುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಮೂಲಕ ಭಾರತೀಯ ಕ್ರಿಕೆಟ್‌ನ ಮೇಲೆ ಶ್ರೀನಿವಾಸನ್‌ಗಿರುವ ಹಿಡಿತ ಕೊನೆ ಯಾಗಲಿದೆ. ಇದೇ ವೇಳೆ, ನಿರೀಕ್ಷಿಸಿದಂತೆಯೇ ಹಿತಾಸಕ್ತಿ ಸಂಘರ್ಷದ ವಿಷಯದಲ್ಲೂ ಸಭೆ ಚಾಟಿ ಬೀಸಿದೆ. ಭಾರತೀಯ ಕ್ರಿಕೆಟ್ ತಂಡದ ನಿರ್ದೇಶಕ ರವಿ ಶಾಸ್ತ್ರಿಯನ್ನು ಐಪಿಎಲ್ ಆಡಳಿತ ಮಂಡಳಿಯಿಂದ ಹೊರಹಾಕಿದೆ.
ಹಾಗೂ ರಾಷ್ಟ್ರೀಯ ಆಯ್ಕೆಗಾರರ ಮಂಡಳಿಯಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿದ್ದ ರೋಜರ್ ಬಿನ್ನಿಯ ಸ್ಥಾನದಲ್ಲಿ ಎಂ.ಎಸ್.ಕೆ. ಪ್ರಸಾದ್‌ರನ್ನು ನೇಮಿಸಲಾಗಿದೆ. ರೋಜರ್‌ರ ಮಗ ಸ್ಟುವರ್ಟ್ ಬಿನ್ನಿ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ. ಹಿರಿಯರ ಆಯ್ಕೆ ಮಂಡಳಿಯಲ್ಲಿ ರಾಜೀಂದರ್ ಹನ್ಸ್‌ರ ಜಾಗಕ್ಕೆ ಗಗನ್ ಕೋಡರನ್ನು ತರಲಾಗಿದೆ.
ಐಸಿಸಿ ಅಧ್ಯಕ್ಷರಾಗಿ ಶ್ರೀನಿವಾಸನ್‌ರ ಸ್ಥಾನದಲ್ಲಿ ಮನೋಹರ್‌ರನ್ನು ನೇಮಿಸುವ ನಿರ್ಣಯವನ್ನು ವಾರ್ಷಿಕ ಮಹಾಸಭೆಯಲ್ಲಿ ಅಂಗೀಕರಿಸಲಾಯಿತು ಎಂದು ತಿಳಿದುಬಂದಿದೆ. ಐಸಿಸಿ ಸಭೆಗಳಿಗೆ ಹಾಜರಾಗಲು ಮನೋಹರ್‌ಗೆ ಸಾಧ್ಯವಾಗದಿದ್ದರೆ ಶರದ್ ಪವಾರ್ ಭಾರತದ ಪ್ರತಿನಿಧಿಯಾಗಲಿದ್ದಾರೆ. ಮಾಜಿ ಆಟಗಾರ ಹಾಗೂ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್‌ರನ್ನು ಕಿರಿಯರ ಆಯ್ಕೆ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿ ಶ್ರೀನಿವಾಸನ್‌ರನ್ನು ಈಗಾಗಲೇ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಹೊರದಬ್ಬಲಾಗಿದೆ. ಅವರ ಅಳಿಯ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್‌ನಲ್ಲಿ ತೊಡಗಿರುವುದು ಸುಪ್ರೀಂ ಕೋರ್ಟ್‌ನಲ್ಲಿ ಸಾಬೀತಾಗಿದೆ.
ಹಗರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೇಮಿತ ಆರ್.ಎಂ. ಲೋಧಾ ಸಮಿತಿ ಶ್ರೀನಿವಾಸನ್ ವಿರುದ್ಧ ನೇರವಾಗಿ ದೋಷಾರೋಪಣೆ ಮಾಡದಿದ್ದರೂ, ಐಪಿಎಲ್‌ನ್ನು ಕುಲಗೆಡಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಛೀಮಾರಿ ಹಾಕಿದೆ.
ಐಸಿಸಿ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿರುವ ಶ್ರೀನಿವಾಸನ್ ಇನ್ನು ಮುಂದೆ ತಮಿಳುನಾಡು ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಮಾತ್ರ ಉಳಿಯಲಿದ್ದಾರೆ. ಅವರ ಕಂಪೆನಿ ಇಂಡಿಯ ಸಿಮೆಂಟ್ಸ್ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಲಕತ್ವ ಹೊಂದಿತ್ತು. ತಂಡದ ಅಧಿಕಾರಿಗಳು ಬೆಟ್ಟಿಂಗ್‌ನಲ್ಲಿ ಶಾಮೀಲಾದ ಆರೋಪಗಳ ಹಿನ್ನೆಲೆಯಲ್ಲಿ ಆ ತಂಡವನ್ನು ಎರಡು ವರ್ಷಗಳ ವರೆಗೆ ಸುಪ್ರೀಂ ಕೋರ್ಟ್ ಅಮಾನತಿನಲ್ಲಿಟ್ಟಿದೆ.

Write A Comment