ಕರ್ನಾಟಕ

ಘನತ್ಯಾಜ್ಯ ವಿಲೇವಾರಿ: ನೆದರ್‌ಲ್ಯಾಂಡ್ ಸರಕಾರದೊಂದಿಗೆ ಒಪ್ಪಂದ

Pinterest LinkedIn Tumblr

kasa___fiಬೆಂಗಳೂರು, ನ. 9: ರಾಜಧಾನಿ ಬೆಂಗಳೂರಿನ 600 ಮೆಟ್ರಿಕ್‌ಟನ್ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ನೆದರ್‌ಲ್ಯಾಂಡ್ ಸರಕಾರದ ನಡುವೆ ಒಪ್ಪಂದ ಏರ್ಪಟ್ಟಿದೆ.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾರತದಲ್ಲಿನ ನೆದರ್‌ಲ್ಯಾಂಡ್ ರಾಯಭಾರಿ ಆಲ್ಫೋನ್ಸಸ್ ಸ್ಟೋಯ್ಲಿಂಗ ಸಮ್ಮುಖದಲ್ಲಿ ಒಪ್ಪಂದಕ್ಕೆ ಉಭಯ ಸರಕಾರಗಳು ಸಹಿ ಮಾಡಿದವು. ಸುಮಾರು 25 ಎಕರೆ ಪ್ರದೇಶದಲ್ಲಿ 600 ಮೆಟ್ರಿಕ್‌ಟನ್ ತ್ಯಾಜ್ಯವಿಲೇವಾರಿ ಸಾಮರ್ಥ್ಯದ ಘಟಕವನ್ನು ನೆದರ್‌ಲ್ಯಾಂಡ್ ಸರಕಾರ ಸ್ಥಾಪಿಸಿ, ಪ್ರತಿದಿನ 7 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಿದೆ. ಕೆಇಆರ್‌ಸಿ ನಿಗದಿ ಮಾಡುವ ದರದ ಅನ್ವಯ ಸರಕಾರ ಈ ಘಟಕದಿಂದ ವಿದ್ಯುತ್ ಖರೀದಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ತ್ಯಾಜ್ಯವಿಲೇವಾರಿ ಘಟಕ ಸ್ಥಾಪನೆ ಮಾಡಲು ಈಗಾಗಲೇ ನೆದರ್‌ಲ್ಯಾಂಡ್ ನಿಯೋಗ ನಾಲ್ಕೈದು ಕಡೆ ಪರಿಶೀಲನೆ ನಡೆಸಿದೆ. ನೆದರ್‌ಲ್ಯಾಂಡ್ ಹಾಗೂ ಭಾರತ ಸರಕಾರದೊಂದಿಗೆ ಒಪ್ಪಂದ ಏರ್ಪಟ್ಟಿದ್ದು, ಸಾರ್ವಜನಿಕ ಸಹಭಾಗಿತ್ವದಲ್ಲಿ ತ್ಯಾಜ್ಯವಿಲೇವಾರಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಈಗಾಗಲೇ ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಗೋವಾದಲ್ಲಿ 150 ಮೆಟ್ರಿಕ್‌ಟನ್ ಸಾಮರ್ಥ್ಯದ ಘಟಕ ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅವರು ಹೇಳಿದರು. ಯೂರೋಪ್ ದೇಶಗಳಲ್ಲಿ ಈಗಾಗಲೇ ಸಾಕಷ್ಟು ತ್ಯಾಜ್ಯ ವಿಲೇವಾರಿ ಘಟಕಗಳನ್ನು ನೆದರ್‌ಲ್ಯಾಂಡ್ ತೆರೆದಿದೆ. ಹಸಿ-ಒಣ ಕಸ ಎಂದು ವಿಂಗಡಣೆ ಮಾಡದೆ ಎಲ್ಲವನ್ನೂ ಬಳಸಿಕೊಂಡು ಅದನ್ನು ಸಂಪೂರ್ಣವಾಗಿ ವಿದ್ಯುತ್ ಆಗಿ ಪರಿವರ್ತನೆ ಮಾಡುವ ತಂತ್ರಜ್ಞಾನವನ್ನು ಅವರು ಹೊಂದಿದ್ದಾರೆ ಎಂದು ಜಾರ್ಜ್ ವಿವರಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment