ಕರ್ನಾಟಕ

ಕೇಂದ್ರದಿಂದ ರಾಜ್ಯಕ್ಕೆ 1,504 ಕೋ.ರೂ. ಬರ ಪರಿಹಾರ

Pinterest LinkedIn Tumblr

Baraಬೆಂಗಳೂರು, ನ.9: ರಾಜ್ಯದಲ್ಲಿ ಆವರಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಪರಿಹಾರ ಕಾಮಗಾರಿಗಾಗಿ ಕೇಂದ್ರ ಸರಕಾರ 1,504 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ.

ಬೆಳೆ ನಷ್ಟಕ್ಕೆ ಪರಿಹಾರ ನೀಡುವ, ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ತುರ್ತಾಗಿ 3,800 ಕೋಟಿ ರೂ. ನೀಡುವಂತೆ ರಾಜ್ಯವು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿತ್ತು. ಇದರ ಪರಿಣಾಮ ರಾಜ್ಯಕ್ಕೆ ನೆರವು ಬಂದಿದೆ ಎಂದು ಅವರು ಹೇಳಿದರು. ರಾಜ್ಯಕ್ಕೆ ಪರಿಹಾರ ನೀಡುವ ಸಂಬಂಧ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್, ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಕೇಂದ್ರ ಕಂದಾಯ ಸಚಿವರಿರುವ ಸಮಿತಿ ಇಂದು ಸೇರಿ ಪರಿಹಾರ ನೀಡಲು ನಿರ್ಧರಿಸಿದೆ ಎಂದರು.

ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮತ್ತೆ ಸಭೆ ಸೇರಿದ ಕೇಂದ್ರದ ಉನ್ನತ ಮಟ್ಟದ ಸಮಿತಿ ರಾಜ್ಯಕ್ಕೆ 2,631 ಕೋಟಿ ರೂ. ಬರಪರಿಹಾರ ಕಾಮಗಾರಿಗಾಗಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸಿನ ಕುರಿತು ಇವತ್ತು ಪುನಃ ಚರ್ಚೆ ನಡೆಸಿದ ಕೇಂದ್ರ ಸರಕಾರ ಅಂತಿಮವಾಗಿ ತುರ್ತು ಪರಿಹಾರ ಕಾಮಗಾರಿಗಾಗಿ,ಆಗಿರುವ ನಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ 1,504 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು. ನವೆಂಬರ್ 16ರಿಂದ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೇಂದ್ರದ ಮೇಲೆ ಟೀಕಾ ಪ್ರಹಾರ ಮಾಡಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಒತ್ತಡದ ಮೇರೆಗೆ ಈ ತೀರ್ಮಾನ ಕೈಗೊಂಡಿದೆ.

ರಾಜ್ಯ ಸರಕಾರ ವಸ್ತುಸ್ಥಿತಿಯನ್ನು ಸಮರ್ಪಕವಾಗಿ ಮನದಟ್ಟು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ಪ್ರಮಾಣದ ನೆರವು ನೀಡಿದ್ದು, ಈ ಹಣದಿಂದ ಜನವರಿ, ಫೆಬ್ರವರಿ ತಿಂಗಳ ತನಕ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ಉನ್ನತ ಮೂಲಗಳು ವಿವರ ನೀಡಿವೆ.

Write A Comment