ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಪ್ರಶಸ್ತಿ ವಾಪಸ್ ಮಾಡುತ್ತಿರುವವರ ವಿರುದ್ಧ ಪರ್ಯಾಯ ಪ್ರತಿಭಟನೆ ಕೈಗೊಂಡಿರುವ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ನಮ್ಮ ದೇಶವನ್ನು ಅಸಹಿಷ್ಣು ದೇಶ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ, ಸಮಾಜದ ಕೆಲವು ಘಾತಕ ಶಕ್ತಿಗಳು ಮೋದಿ ನೇತೃತ್ವದ ಸರ್ಕಾರದ ವರ್ಚಸ್ಸನ್ನು ಹಾಳುಗೆಡವಲು ಈ ಚರ್ಚೆಯನ್ನು ಹುಟ್ಟು ಹಾಕಿವೆ ಎಂದು ಗುಡುಗಿದ್ದಾರೆ.
ನ್ಯಾಷನಲ್ ಮ್ಯೂಸಿಯಂನಿಂದ ರಾಷ್ಟ್ರಪತಿ ಭವನದವರೆಗೆ ‘ಮಾರ್ಚ್ ಫಾರ್ ಇಂಡಿಯಾ’ ಮೆರವಣಿಗೆ ಕೈಗೊಂಡಿರುವ ಅನುಪಮ್ ಖೇರ್, ನಮ್ಮ ದೇಶವನ್ನು ಅಸಹಿಷ್ಣು ದೇಶ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ. ನಾವು ಜಾತ್ಯಾತೀತರು. ನಾವು ರಾಷ್ಟ್ರಪತಿಯವರಲ್ಲಿಗೆ ಹೋಗಿ ಭಾರತ ಅಸಹಿಷ್ಣು ದೇಶ ಎಂದು ನಮಗನ್ನಿಸುತ್ತಿಲ್ಲ ಎಂದು ಹೇಳುತ್ತೇವೆ ಎಂದು ಹೇಳಿದ್ದಾರೆ.
ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಖೇರ್ ಪತ್ನಿ, ಚಂದೀಘಡದ ಬಿಜೆಪಿ ಸಂಸದೆ ಕಿರಣ್ ಖೇರ್, ಪ್ರಶಸ್ತಿ ಹಿಂತಿರುಗಿಸುವುದರ ಬದಲು ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಿ. ಇದು ದೇಶಕ್ಕಾಗಿ ನಮ್ಮ ನಡಿಗೆ, ಯಾರ ವಿರುದ್ಧವೂ ಅಲ್ಲ. ನಾವು ಯಾವ ರಾಜಕೀಯ ಪಕ್ಷವನ್ನು ಬೆಂಬಲಿಸಿ ಇದನ್ನು ಮಾಡುತ್ತಿಲ್ಲ ಎಂದಿದ್ದಾರೆ.
ಬಾಲಿವುಡ್ ದಿಗ್ಗಜರಾದ ಮಧುರ್ ಭಂಡಾರ್ಕರ್, ಅಷೋಕೆ ಪಂಡಿತ, ಪ್ರಿಯದರ್ಸನ, ಚಂದ್ರ ಪ್ರಕಾಶ್ ದಿವೇದಿ, ಮಾಲಿನಿ ಅವಸ್ಥಿ, ಗಜೇಂದ್ರ ಸೋಳಂಕಿ ಸೇರಿದಂತೆ ಅಪಾರ ಸಂಖ್ಯೆಯ ಜನರು ಖೇರ್ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.