ರಾಷ್ಟ್ರೀಯ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್‌ಡಿಎಫ್ ಜಯಭೇರಿ, ಯುಡಿಎಫ್‌ಗೆ ಮುಖಭಂಗ

Pinterest LinkedIn Tumblr

kerala_ldf-fiತಿರುವನಂತಪುರಂ: ಕೇರಳದಾದ್ಯಂತ ನಡೆದ ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್, ಚುನಾವಣೆಗಳಲ್ಲಿ ಎಲ್‌ಡಿಎಫ್ ಜಯಭೇರಿ ಬಾರಿಸಿದರೆ, ನಗರಸಭೆ, ಜಿಲ್ಲಾ ಪಂಚಾಯತ್‌ಗಳಲ್ಲಿ ಎಲ್‌ಡಿ ಎಫ್ ಮತ್ತು ಯುಡಿಎಫ್ ಸಮಾನವಾಗಿ ಸೀಟುಗಳನ್ನು ಗೆದ್ದುಕೊಂಡಿದೆ. ಆರು ಕಾರ್ಪರೇಷನ್‌ಗಳಲ್ಲಿ  ಕೊಲ್ಲಂ ಮತ್ತು ಕೋಝಿಕ್ಕೋಜ್‌ನಲ್ಲಿ ಎಲ್‌ಡಿಎಫ್ ತನ್ನ ಸ್ಥಾನವನ್ನು ಉಳಿಸಿಕೊಂಡರೆ ಯುಡಿಎಫ್‌ಗೆ ಕೊಚ್ಚಿಯಲ್ಲಿ ಮಾತ್ರ ತನ್ನ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಯಿತು. ಕಣ್ಣೂರಿನಲ್ಲಿ ಯುಡಿಎಫ್ ಇತರರ ಬೆಂಬಲದೊಂದಿಗೆ ಅಧಿಕಾರಕ್ಕೇರಲಿದೆ.

ಕಳೆದ ಬಾರಿ 540 ಪಂಚಾಯತ್‌ಗಳಲ್ಲಿ ಅಧಿಕಾರ ಪಡೆದುಕೊಂಡಿದ್ದ ಯುಡಿಎಫ್‌ಗೆ ಈ ಬಾರಿ ಭಾರೀ ಮುಖಭಂಗವಾಗಿದೆ.  ಈ ಬಾರಿ 942 ಪಂಚಾಯತ್‌ಗಳಲ್ಲಿ 539 ಸ್ಥಾನಗಳನ್ನು ಎಲ್‌ಡಿಎಫ್ ಗೆದ್ದು ಬೀಗಿದೆ. ಕೊಟ್ಟಾಯಂ, ಮಲಪ್ಪುರಂ ಜಿಲ್ಲೆಗಳನ್ನು ಬಿಟ್ಟು ಇನ್ನುಳಿದ ಜಿಲ್ಲೆಗಳಲ್ಲಿ ಯುಡಿಎಫ್‌ಗೆ ಹಿನ್ನಡೆಯಾಗಿದೆ. ಈ ಬಾರಿ  366 ಪಂಚಾಯತ್‌ಗಳ ಅಧಿಕಾರವಷ್ಟೇ ಯುಡಿಎಫ್‌ಗೆ ದಕ್ಕಲಿದೆ.  ಆದರೆ ನಗರಸಭಾ ಚುನಾವಣೆ ಫಲಿತಾಂಶ ನೋಡಿದರೆ ಈ ಎರಡೂ ಪಕ್ಷಗಳು ಸಮಬಲ ಕಾಯ್ದುಕೊಂಡಿದ್ದರೂ, ಎಲ್‌ಡಿಎಫ್ ಹೆಚ್ಚಿನ ಬಹುಮತಗಳಿಸಿದೆ.

ಕಳೆದ ಬಾರಿ 60 ನಗರಸಭೆಗಳಿದ್ದುವು. ಅದರಲ್ಲಿ 21 ನಗರಸಭೆಗಳ ಅಧಿಕಾರ ಪಡೆದಿದ್ದ ಎಲ್‌ಡಿಎಫ್ ಈ ಬಾರಿ 45 ಸೀಟುಗಳನ್ನು ಗೆದ್ದುಕೊಂಡಿದೆ.  39 ಸೀಟುಗಳನ್ನು ಹೊಂದಿದ್ದ ಯುಡಿಎಫ್ ಗೆ ಈ ಬಾರಿ 40 ನಗರಸಭಾ ಸೀಟುಗಳು ದಕ್ಕಿವೆ. ಒಟ್ಟಾರೆ 86 ನಗರಸಭೆಗಳು ಕೇರಳದಲ್ಲಿವೆ.

ಬ್ಲಾಕ್ ಪಂಚಾಯತ್‌ನಲ್ಲಿಯೂ ಎಡಪಕ್ಷಗಳು ತಮ್ಮ ಸಾಮರ್ಥ್ಯ ತೋರಿಸಿವೆ. 152 ಬ್ಲಾಕ್‌ಗಳಲ್ಲಿ 2010ರಲ್ಲಿ ಯುಡಿಎಫ್ (92), ಎಲ್ ಡಿಎಫ್ (56) ಸೀಟುಗಳನ್ನು ಹೊಂದಿತ್ತು. ಆದರೆ ಈ ಚುನಾವಣೆಯಲ್ಲಿ ಎಲ್ ಡಿಎಫ್ (91),  ಯುಡಿಎಫ್  (60) ಸ್ಥಾನ ಗಳಿಸಿಕೊಂಡಿದೆ.

ಜಿಲ್ಲಾ ಪಂಚಾಯತ್‌ಗಳಲ್ಲಿ ಈ ಬಾರಿ ಎರಡೂ ಪಕ್ಷಗಳು ಸಮಬಲ ಹೊಂದಿವೆ. ಕಳೆದ ಬಾರಿ ಯುಡಿಎಫ್ ಗೆ 8,  ಎಲ್ ಡಿಎಫ್ ಗೆ 6 ಸ್ಥಾನಗಳು ದಕ್ಕಿತ್ತು. ಆದಾಗ್ಯೂ,  ಆರ್‌ಎಸ್‌ಪಿ ಜತೆಗಿದ್ದರೂ ಕೊಲ್ಲಂ ಜಿಲ್ಲೆಯಲ್ಲಿ ಯುಡಿಎಫ್‌ಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಅದೇ ವೇಳೆ ತ್ರಿಶ್ಶೂರ್ ನಲ್ಲಿ  ಯುಡಿಎಫ್ ಮತ್ತು ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ.

ಎಲ್‌ಡಿಎಫ್ ಅಧಿಪತ್ಯವಿದ್ದ ತಿರುವನಂತಪುರಂ ಕಾರ್ಪರೇಷನ್ ನಲ್ಲಿ ಈ ಬಾರಿ ಯಾರಿಗೂ ಬಹುಮತ ಸಿಕ್ಕಿಲ್ಲ. 100 ಸದಸ್ಯರಿರುವ ಸಭೆಯಲ್ಲಿ  42 ಸೀಟುಗಳನ್ನು ಎಲ್‌ಡಿಎಫ್ ಪಡೆದಿದ್ದರೂ, ಬಹುಮತ ಗಳಿಸಿಕೊಳ್ಳಲಾಗಲಿಲ್ಲ. ಯುಡಿಎಫ್‌ನ್ನು ಮೂರನೇ ಸ್ಥಾನಕ್ಕೆ ತಳ್ಳಿ 34 ಸೀಟು ಪಡೆದ ಬಿಜೆಪಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಇದೇ ಮೊದಲ ಬಾರಿ ಕಾರ್ಪರೇಷನ್ ಆಗಿ ಮಾರ್ಪಾಡಾಗಿರುವ ಕಣ್ಣೂರಿನಲ್ಲಿ 55 ಸೀಟುಗಳಲ್ಲಿ ತಲಾ 27 ಸೀಟುಗಳನ್ನು ಯುಡಿಎಫ್ ಮತ್ತು ಎಲ್‌ಡಿಎಫ್ ಗೆದ್ದುಕೊಂಡಿದೆ.

ಅಲ್ಲಲ್ಲಿ ಕಮಲ ಅರಳಿತು
ಈ ಬಾರಿಯ ಚುನಾವಣೆಯಲ್ಲಿ ವೇಳಾಪಳ್ಳಿ ನಟೇಶನ್‌ನ ಮೈತ್ರಿಯೊಂದಿಗೆ ಬಿಜೆಪಿ ಸ್ಪರ್ಧೆಗಿಳಿದ್ದರೂ ಹೇಳುವಷ್ಟು ಲಾಭವೇನೂ ಸಿಕ್ಕದಿದ್ದರೂ ಕೆಲವೆಡೆ ನಿರೀಕ್ಷೆಗಳನ್ನು ಮೀರಿ ಬಿಜೆಪಿ ಗೆಲವು ಸಾಧಿಸಿದೆ. ತಿರುವನಂತಪುರಂ ಕಾರ್ಪರೇಷನ್ ನಲ್ಲಿ 34 ಸೀಟುಗಳನ್ನು ಪಡೆದು ಬಿಜೆಪಿ ಗೆದ್ದು ಬೀಗಿದೆ.   52  ಸದಸ್ಯರಿರುವ ಪಾಲಕ್ಕಾಡ್ ನಗರಸಭೆಯಲ್ಲಿ ಏಕಾಂಗಿಯಾಗಿ ಬಹುಮತ ಪಡೆಯಲಾಗದಿದ್ದರೂ 24 ಸೀಟುಗಳನ್ನು ಗಿಟ್ಟಿಸುವಲ್ಲಿ ಬಿಜೆಪಿ ಸಫಲವಾಗಿದೆ.

ಕೊಡುಂಗಲ್ಲೂರ್, ಕಾಸರಗೋಡು, ಮಾವೇಲಿಕ್ಕರ, ತೃಪ್ಪೂಣಿತ್ತುರ, ಶೊರ್ನೂರ್, ತಾನೂರ್, ಪರಪ್ಪನಂಞಾಡಿ ಮೊದಲಾದೆಡೆ ಬಿಜೆಪಿ ವಿಪಕ್ಷ ಸ್ಥಾನವನ್ನೂ ಗಿಟ್ಟಿಸಿಕೊಂಡಿದೆ. ಇದೇ ಮೊತ್ತ ಮೊದಲ ಬಾರಿಗೆ  15 ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ತನ್ನ ಪ್ರಬಲ ಸಾನಿಧ್ಯವನ್ನು ತೋರಿಸಿದೆ.  ಕಳೆದ ಬಾರಿ ಕಾಸರಗೋಡು ಜಿಲ್ಲೆಯ ಮೂರು ಪಂಚಾಯತ್ ಗಳಲ್ಲಿ ಮಾತ್ರ ಅಧಿಕಾರ ಪಡೆದುಕೊಂಡಿದ್ದ ಬಿಜೆಪಿ, ಈ ಬಾರಿ ರಾಜ್ಯಾದ್ಯಂತ 15 ಪಂಚಾಯತ್‌ಗಳಲ್ಲಿ  ಕಮಲ ಅರಳಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪ್ರತಿಜ್ಞಾಸ್ವೀಕಾರ ಸಮಾರಂಭ ನವೆಂಬರ್  12ಕ್ಕೆ ನಡೆಯಲಿದೆ. ನಗರಸಭಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನವೆಂಬರ್ 18ಕ್ಕೂ, ಗ್ರಾಮ ಬ್ಲಾಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನವೆಂಬರ್ 19ಕ್ಕೆ ನಡೆಯಲಿದೆ.

Write A Comment