ರಾಷ್ಟ್ರೀಯ

ರಾಜ್ಯದಲ್ಲಿ ಮಳೆ ಕೊರತೆ ಇಲ್ವಂತೆ, ನೀರು ಬಿಡಬೇಕಂತೆ: ಕಾವೇರಿ ಕ್ಯಾತೆ

Pinterest LinkedIn Tumblr

krs-1-(1)ಚೆನ್ನೈ: ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯಗಳು ಬರಿದಾಗಿವೆ, ಹೀಗಾಗಿ ಇನ್ನು ಮುಂದೆ ಕಾವೇರಿ ನೀರು ಬಿಡುಗಡೆ ಮಾಡಲು ಆಗದು ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರು ಬರೆದಿದ್ದ ಪತ್ರಕ್ಕೆ ತಮಿಳುನಾಡು ಪ್ರತ್ಯುತ್ತರ ನೀಡಿದೆ.

ಕರ್ನಾಟಕದಲ್ಲಿ ಮಳೆ ಕೊರತೆ ಆಗಿಯೇ ಇಲ್ಲ. ಸಾಮಾನ್ಯಕ್ಕಿಂತ ಕೇವಲ ಶೇ.1ರಷ್ಟು ಮಾತ್ರವೇ ಕಡಿಮೆ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಂಕಿ-ಸಂಖ್ಯೆಗಳು ಹೇಳುತ್ತವೆ. ಹೀಗಾಗಿ ಇದನ್ನು ಸಂಕಷ್ಟ ವರ್ಷ ಎಂದು ಪರಿಗಣಿಸದೇ ಬಾಕಿ ನೀರನ್ನು ಬಿಡುಗಡೆ ಮಾಡಿ ಎಂದು ಮೊಂಡು ವಾದ ಮಂಡಿಸಿದೆ.

ಈ ಸಂಬಂಧ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಕೆ. ಜ್ಞಾನದೇಶಿಕನ್‌ ಅವರು ಕರ್ನಾಟಕಕ್ಕೆ ಪತ್ರ ಬರೆದಿದ್ದಾರೆ. ಸೆ.13ರವರೆಗೆ ಬಿಳಿಗುಂಡ್ಲು ಮಾಪನ ಕೇಂದ್ರದ ಮೂಲಕ 111.333 ಟಿಎಂಸಿ ನೀರು ಬರಬೇಕಿತ್ತು. ಆದರೆ ಕೇವಲ 72.817 ಟಿಎಂಸಿ ನೀರನ್ನು ಮಾತ್ರವೇ ಕರ್ನಾಟಕ ಬಿಡುಗಡೆ ಮಾಡಿದೆ. ಸೆ.14ಕ್ಕೆ ಅನ್ವಯವಾಗುವಂತೆ ಕರ್ನಾಟಕದ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಒಟ್ಟು 70 ಟಿಎಂಸಿ ನೀರಿದೆ. ಆದರೆ ಅದೇ ಮೆಟ್ಟೂರು ಡ್ಯಾಂನಲ್ಲಿ 38.823 ಟಿಎಂಸಿಯಷ್ಟು ಮಾತ್ರವೇ ನೀರಿನ ಸಂಗ್ರಹವಿದೆ. ಒಳಹರಿವು ಕುಸಿಯುತ್ತಲೇ ಇದೆ ಎಂದು ಹೇಳಿದ್ದಾರೆ.

ಸೆ.13ರವರೆಗಿನ ಲೆಕ್ಕದ ಪ್ರಕಾರ ಕರ್ನಾಟಕದಿಂದ ತಮಿಳುನಾಡಿಗೆ ಇನ್ನೂ 38.516 ಟಿಎಂಸಿ ನೀರು ಬಾಕಿ ಬರಬೇಕಿದ್ದು, ಅದನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿ ಎಂದು ಜ್ಞಾನದೇಶಿಕನ್‌ ಅವರು ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಶಶಿ ಶೇಖರ್‌ ಅವರಿಗೂ ಪತ್ರ ಬರೆದಿದ್ದಾರೆ. ಅಲ್ಲದೆ ತಕ್ಷಣವೇ ಸಭೆ ಕರೆಯುವಂತೆಯೂ ಮನವಿ ಮಾಡಿದ್ದಾರೆ.
-ಉದಯವಾಣಿ

Write A Comment