ರಾಷ್ಟ್ರೀಯ

ಮೋದಿ ‘ದಗಾಬಾಜ್‌’, ಕಾಂಗ್ರೆಸ್‌ ‘ಹವಾಲಾಬಾಜ್‌’; ಕುತೂಹಲ ಮೂಡಿಸಿರುವ ಸೋನಿಯಾ ಗಾಂಧಿ, ಪ್ರಧಾನಿ ಶಬ್ದ ಸಮರ

Pinterest LinkedIn Tumblr

sonia-moodi10ನವದೆಹಲಿ/ಭೋಪಾಲ್/ಬರ್‌ಗಡ (ಒಡಿಶಾ) (ಪಿಟಿಐ): ದೇಶದ ರಾಜಕೀಯದಲ್ಲೀಗ ಪ್ರಾಸಬದ್ಧ ಶಬ್ದಗಳ ಸಮರದ ಹೊಸ ಪರಿಪಾಠ  ಆರಂಭವಾಗಿದೆ.
ಕಾಂಗ್ರೆಸ್‌ ಹಾಗೂ ಬಿಜೆಪಿ ಪರಸ್ಪರ ‘ಹವಾಬಾಜ್‌’, ‘ಹವಾಲಾಬಾಜ್‌’ ಹಾಗೂ ‘ದಗಾಬಾಜ್‌’ಗಳಂಥ ಶಬ್ದಗಳನ್ನು ಆರೋಪ–ಪ್ರತ್ಯಾರೋಪಕ್ಕೆ ಬಳಸಿದ್ದು ಕುತೂಹಲ ಮೂಡಿಸಿದೆ.

ಮೋದಿ ಅವರನ್ನು ಸದ್ದು ಮಾಡುವ ಖಾಲಿ ಬಾಟಲಿಗೆ ಹೋಲಿಕೆ ಮಾಡಲು   ಸೋನಿಯಾ ಇತ್ತೀಚೆಗೆ ‘ಹವಾಬಾಜ್‌’ ಎಂದು   ಗೇಲಿ ಮಾಡಿದ್ದರು.
ಭೋಪಾಲ್‌ನಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಸೋನಿಯಾಗೆ ತಿರುಗೇಟು ನೀಡಲು   ಬಳಸಿಕೊಂಡ ಮೋದಿ ಅವರು, ಕಾಂಗ್ರೆಸ್ಸಿಗರನ್ನು ‘ಹವಾಲಾಬಾಜ್‌’ ಎಂದು ಮೂದಲಿಸಿದರು. ಸೋನಿಯಾ ಅವರ ‘ಹವಾಬಾಜ್‌’ ಬಾಣವನ್ನು ಸ್ವಲ್ಪ ಬದಲಾವಣೆಯೊಂದಿಗೆ ಮೋದಿ ತಿರುಗಿ ಬಿಟ್ಟಿದ್ದಾರೆ.

ಎನ್‌ಡಿಎ ಸರ್ಕಾರ  ಕಪ್ಪುಹಣಕ್ಕೆ ಲಗಾಮು ಹಾಕಿದ ನಂತರ ‘ಹವಾಲಾಬಾಜ್‌’ಗಳ  ಜಂಘಾಬಲವೇ ಉಡುಗಿ ಹೋಗಿದೆ  ಎಂದು ಅವರು ಸೋನಿಯಾ ಹಾಗೂ ಅವರ ಪಕ್ಷವನ್ನು ಕುಟುಕಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಕಾಂಗ್ರೆಸ್‌ ‘ವಿಚ್ಛಿದ್ರಕಾರಿ ತಂತ್ರ’ಗಳನ್ನು ಅನುಸರಿಸುತ್ತಿದೆ. ಬದಲಾವಣೆ ತರುವ ಸರ್ಕಾರದ ಯತ್ನಗಳಿಗೆ ಕಾಂಗ್ರೆಸ್‌ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದರು.

ಸಂಸತ್ತಿನ ಮುಂಗಾರು ಅಧಿವೇಶನ ಸಂಪೂರ್ಣವಾಗಿ ವ್ಯರ್ಥಗೊಳ್ಳಲು ಕಾಂಗ್ರೆಸ್‌ ಕಾರಣವಾಗಿದೆ. ಸರಕು ಮತ್ತು ಸೇವಾ ತೆರಿಗೆ ಮಸೂದೆ ಅಂಗೀಕಾರಕ್ಕೂ ಕಾಂಗ್ರೆಸ್‌ ಅಡ್ಡಗಾಲು ಹಾಕುತ್ತಿದೆ ಎಂದು ಅವರು ದೂರಿದರು. ಎಲ್ಲ ರೀತಿಯ ಸಂಪತ್ತಿನ ಸೋರಿಕೆಗಳಿಗೆ ತಡೆ ಹಾಕಿ ದೇಶದ  ಲೂಟಿಯನ್ನು ತಡೆದಿರುವ ತಮ್ಮನ್ನೇ ‘ಹವಾಲಾಬಾಜಿ’ಗಳು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹರಿಹಾಯ್ದರು.

‘ಮೋದಿ ದಗಾಬಾಜ್‌’: ತಮ್ಮ ನಾಯಕಿಯ ವಿರುದ್ಧದ ಈ ಟೀಕೆಯ ಬೆನ್ನಲ್ಲೇ ಕೆಂಡಾಮಂಡಲವಾಗಿರುವ ಕಾಂಗ್ರೆಸ್‌, ಮೋದಿ ಅವರನ್ನು ‘ಅಸ್ಲಿ ದಗಾಬಾಜ್‌’ ಎಂದು  (ಮಹಾ ಸುಳ್ಳುಗಾರ,  ಮೋಸಗಾರ)  ಜರೆದಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು  ಈಡೇರಿಸದ ‘ಹವಾಬಾಜ್’ ಹಾಗೂ ‘ಅಸಲಿ ದಗಾಬಾಜ್‌’    ಯಾರು ಎಂದು ಜನರೇ ನಿರ್ಧರಿಸುತ್ತಾರೆ ಎಂದಿದೆ.

ವಿದೇಶಿ ಬ್ಯಾಂಕ್‌ನಲ್ಲಿರುವ ಕಪ್ಪುಹಣ ಮರಳಿ ತಂದು ದೇಶದ ಪ್ರತಿ ಪ್ರಜೆಯ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡುವುದಾಗಿ ಹೇಳಿದ ಮಾತು ಏನಾಯಿತು? ಮೋದಿ ನೀಡಿದ ಇಂಥ ನೂರಾರು ಭರವಸೆಗಳ ಕಥೆ ಇಂದು ಏನಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ್ ಪ್ರಶ್ನಿಸಿದ್ದಾರೆ.

ರಾಯ್‌ಬರೇಲಿ ಪ್ರವಾಸದಲ್ಲಿರುವ ಸೋನಿಯಾ ಗಾಂಧಿ ಸಹ ಮೋದಿ ಅವರಿಗೆ ತಿರುಗೇಟು ನೀಡಿದ್ದು, ಆರೋಪ ಎದುರಿಸುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಾಜಸ್ತಾನ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿಗಳ ಬಗ್ಗೆ ಮೋದಿ ಅವರು ಏಕೆ ಚಕಾರ ಎತ್ತಿಲ್ಲ ಎಂದರು.

Write A Comment