ರಾಯಚೂರು: ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ರಾಯಚೂರಿಗೆ ಕೈ ತಪ್ಪಿರುವುದನ್ನು ಖಂಡಿಸಿ ಗುರುವಾರ ನಡೆಸಿದ ಜಿಲ್ಲಾ ಬಂದ್ ಯಶಸ್ವಿ ಆಯಿತು. ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಇಲ್ಲಿಯ ಕೇಂದ್ರ ಪವರ್ ಗ್ರಿಡ್‌ಗೆ ಸಂಸದ ಬಿ.ವಿ.ನಾಯಕ, ಶಾಸಕ ಡಾ.ಎಸ್.ಶಿವರಾಜಪಾಟೀಲ್ ನೇತೃತ್ವದಲ್ಲಿ 400 ಜನರು ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ಪೊಲೀಸರು ಇದನ್ನು ವಿಫಲಗೊಳಿಸಿದರು.
ಪ್ರತಿಭಟನಾಕಾರರು ಪವರ್ ಗ್ರಿಡ್ ಮುಂದೆ ಧರಣಿ ನಡೆಸಿ, ಸುಮಾರು ಒಂದು ತಾಸು ರಸ್ತೆತಡೆ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಸಂಸದ, ಶಾಸಕ ಸೇರಿದಂತೆ 21 ಜನರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.
ಜಿಲ್ಲಾ ಕೇಂದ್ರವಾದ ರಾಯಚೂರಿನಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಔಷಧ ಅಂಗಡಿಗಳು ಹೊರತು ಪಡಿಸಿ ಇನ್ನಿತರ ಅಂಗಡಿ– ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪೆಟ್ರೋಲ್ ಬಂಕ್, ಸಿನಿಮಾ ಮಂದಿರ, ಹೋಟೆಲ್‌ಗಳು ಮುಚ್ಚಿದ್ದವು. ಸರ್ಕಾರಿ ಕಚೇರಿ ಮತ್ತು ಬ್ಯಾಂಕ್‌ಗಳು ತೆರೆದಿದ್ದವು. ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು.
ನಗರದ ವಿವಿಧ ವೃತ್ತಗಳಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಅನೇಕ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಧರಣಿ ನಡೆಸಿದರು. ಸಂಸದರ ನೇತೃತ್ವದಲ್ಲಿ ರೈಲು ನಿಲ್ದಾಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಲಿಂಗಸುಗೂರು, ದೇವದುರ್ಗ, ಮಾನ್ವಿ, ಸಿಂಧನೂರುಗಳಲ್ಲಿ ಮತ್ತು ಇತರ ಪ್ರಮುಖ ಪಟ್ಟಣಗಳಲ್ಲಿ ಬಸ್ ಸಂಚಾರ ಇರಲಿಲ್ಲ. ಅಂಗಡಿಗಳು ಮುಚ್ಚಿದ್ದವು.