ಕರ್ನಾಟಕ

ಗ್ರಾಮೀಣ ಪ್ರದೇಶದಲ್ಲಿ 10 ಗಂಟೆ ಲೋಡ್‌ ಶೆಡ್ಡಿಂಗ್‌; ಉದ್ಯಮಗಳಿಗೆ ಲುಕ್ಸಾನು ಗಂಟೆಗೆ ₹ 200 ಕೋಟಿ

Pinterest LinkedIn Tumblr

no-power-2ಬೆಂಗಳೂರು:  ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್‌ ಬಿಕ್ಕಟ್ಟಿನಿಂದ ಕೈಗಾರಿಕಾ ಕ್ಷೇತ್ರಕ್ಕೆ ಭಾರಿ ಹಿನ್ನಡೆ ಉಂಟಾಗಿದ್ದು, ಕೈಗಾರಿಕೆಗಳು ಪ್ರತಿ  ಗಂಟೆಗೆ ₹ 200 ಕೋಟಿ ನಷ್ಟ ಅನುಭವಿಸುತ್ತಿವೆ.

‘ಒಂದು ಗಂಟೆ ವಿದ್ಯುತ್‌ ಕಡಿತ ಮಾಡಿದರೆ ರಾಜ್ಯದ ಕೈಗಾರಿಕೆಗಳು ₹200 ಕೋಟಿ ನಷ್ಟ ಅನುಭವಿಸುತ್ತವೆ. ಬೆಂಗಳೂರಿನಲ್ಲಿರುವ ಕೈಗಾರಿಕೆಗಳು ಗಂಟೆಗೆ ₹ 120 ಕೋಟಿ ನಷ್ಟ ಅನುಭವಿಸುತ್ತವೆ. ಈಗ ರಾಜಧಾನಿಯಲ್ಲಿ ಎರಡು ಗಂಟೆ ಲೋಡ್‌ ಶೆಡ್ಡಿಂಗ್‌ ಜಾರಿಯಲ್ಲಿದೆ. ಆ ಪ್ರಕಾರ ರಾಜಧಾನಿಯಲ್ಲೇ ಎರಡು ಗಂಟೆಗೆ ಕೈಗಾರಿಕೆಗಳು ₹240 ಕೋಟಿ ನಷ್ಟ ಅನುಭವಿಸುತ್ತಿವೆ’ ಎಂದು ವಾಣಿಜ್ಯೋದ್ಯಮಗಳ ಮಹಾಸಂಘ ‘ಅಸೋಚಾಮ್‌’ ತಿಳಿಸಿದೆ.

‘ಬೆಂಗಳೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕೈಗಾರಿಕೆಗಳಿಗೆ 24 ಗಂಟೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ ಎಂದು ಇಂಧನ ಇಲಾಖೆ ಪ್ರಕಟಿಸಿದೆ. ಆದರೆ, ವಾಸ್ತವ ಸ್ಥಿತಿ ಭಿನ್ನವಾಗಿದೆ. ದಿನಕ್ಕೆ ಕನಿಷ್ಠ ನಾಲ್ಕೈದು ಗಂಟೆ ಅನಿಯಮಿತ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಈ ರೀತಿಯ ವಿದ್ಯುತ್‌ ಕಡಿತದಿಂದ ಉದ್ಯಮಿಗಳು ದುಪ್ಪಟ್ಟು ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಅಸೋಚಾಮ್‌ ತಿಳಿಸಿದೆ.

ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ 6 ಲಕ್ಷ ಕೈಗಾರಿಕೆಗಳಿವೆ. ರಾಜ್ಯದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ ಶೇ 25ರಿಂದ 30ರಷ್ಟು ವಿದ್ಯುತ್ತನ್ನು ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಬಳಸುತ್ತಿವೆ. ಸಮರ್ಪಕ ವಿದ್ಯುತ್‌ ಪೂರೈಕೆಯಾಗದ ಕಾರಣ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಉದ್ಯಮಿಗಳು ಎಚ್ಚರಿಸಿದ್ದಾರೆ.

‘ಅನಿಯಮಿತ ವಿದ್ಯುತ್‌ ಕಡಿತದಿಂದ  ಕೈಗಾರಿಕಾ ಬೆಳವಣಿಗೆಗೆ  ಭಾರಿ ಹಿನ್ನಡೆ ಉಂಟಾಗಿದೆ. ಇದರ ಪರಿಣಾಮ ಕರ್ನಾಟಕದ ಬಂಡವಾಳ ಹೂಡಿಕೆಯ ಮೇಲೂ ಬೀರಲಿದೆ.  ಹೀಗಾಗಿ  ವಿದ್ಯುತ್‌ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಅನಿಯಮಿತವಾಗಿ  ವಿದ್ಯುತ್ ತೆಗೆಯುವ ಬದಲು ಕಡಿತದ ಬಗ್ಗೆ ವೇಳಾಪಟ್ಟಿ ಪ್ರಕಟಿಸಬೇಕು’ ಎಂದು (ಎಫ್‌ಕೆಸಿಸಿಐ) ಅಧ್ಯಕ್ಷ ತಲ್ಲಂ ಆರ್‌. ದ್ವಾರಕಾನಾಥ್‌ ಒತ್ತಾಯಿಸುತ್ತಾರೆ.

Write A Comment