ರಾಷ್ಟ್ರೀಯ

ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆ: ಬೊಕ್ಕಸಕ್ಕೆ ₹16 ಸಾವಿರ ಕೋಟಿ ಹೊರೆ

Pinterest LinkedIn Tumblr

sreniನವದೆಹಲಿ (ಪಿಟಿಐ): ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒಆರ್‌ಒಪಿ) ಯೋಜನೆ ಜಾರಿಯಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರದ ಬೊಕ್ಕಸಕ್ಕೆ 16 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆ  ಬೀಳಲಿದೆ ಎಂದು ಎಚ್‌ಎಸ್‌ಬಿಸಿ ವರದಿ ಹೇಳಿದೆ.

ಯೋಧರ ಬೇಡಿಕೆಯಂತೆ ಸಮಾನ ಹುದ್ದೆಗೆ ಸಮಾನ ಪಿಂಚಣಿ ನೀಡುವ ಸೌಲಭ್ಯದಿಂದಾಗಿ ಬಜೆಟ್ ಮೇಲೆ ಕೂಡ   ಭಾರಿ ಪರಿಣಾಮವಾಗಲಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ಆದರೆ, ಎಚ್‌ಎಸ್‌ಬಿಸಿ ವರದಿ ವ್ಯಕ್ತಪಡಿಸಿರುವ ಆತಂಕವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ , ಒಆರ್‌ಒಪಿ ಜಾರಿಯಿಂದ ಸರ್ಕಾರದ ಮೇಲೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.   ವಿತ್ತೀಯ ಕೊರತೆಗೆ ಅವಕಾಶ ನೀಡದಂತೆ   ಒಆರ್‌ಒಪಿ ಯೋಜನೆಯ ವೆಚ್ಚವನ್ನು ಸರಿದೂಗಿಸಲು ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು  ಅವಕಾಶವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೇ 3.9ರಷ್ಟಿರುವ ವಿತ್ತೀಯ ಕೊರತೆಯ ಗುರಿ ಗಮನದಲ್ಲಿರಿಸಿಕೊಂಡು ಒಆರ್‌ಒಪಿ ಯೋಜನೆಗೆ ಹಣ ತೆಗೆದಿರಿಸಲಾಗಿದೆ ಎಂದರು.

8ರಿಂದ 10 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಹುದು ಎಂದು ಈ ಮೊದಲು ಅಂದಾಜಿಸಲಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ.

ಬಜೆಟ್‌ ಮೇಲೂ ಪರಿಣಾಮ: ಹೆಚ್ಚುವರಿ ಪಿಂಚಣಿ ಹಾಗೂ ಜುಲೈ 2014ರಿಂದ ಪೂರ್ವಾನ್ವಯವಾಗುವಂತೆ ಹಿಂಬಾಕಿ ಪಾವತಿ ಬಜೆಟ್‌ ಮೇಲೆ ಗುರುತರ ಪರಿಣಾಮ ಬೀರಲಿದೆ ಎಂದು ಎಚ್‌ಎಸ್‌ಬಿಸಿಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಂಜುಲ್ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ. ಹೊಸ ಪಿಂಚಣಿ ಯೋಜನೆ ಜಾರಿಯಿಂದ ಯೋಧರ ವಾರ್ಷಿಕ ಪಿಂಚಣಿ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂಪಾಯಿ ಹೆಚ್ಚಾಗಲಿದೆ. ಅದೇ ರೀತಿ   2 ವರ್ಷದಲ್ಲಿ ಬಾಕಿ ಪಿಂಚಣಿ ಪಾವತಿಗೆ 12 ಸಾವಿರ ಕೋಟಿ ರೂಪಾಯಿ ನೀಡಬೇಕಾಗುತ್ತದೆ ಎಂದೂ  ಅಭಿಪ್ರಾಯಪಟ್ಟಿದೆ.

ಯೋಧರ ಉಪವಾಸ ಸತ್ಯಾಗ್ರಹ ಮುಂದುವರಿಕೆ
ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ‘ಒಂದು ಶ್ರೇಣಿ, ಒಂದು ಪಿಂಚಣಿ’  ಜಾರಿಗೊಳಿಸಿದ ನಂತರ ಉಪವಾಸ ಸತ್ಯಾಗ್ರಹ ಕೈಬಿಡುವುದಾಗಿ ಹೇಳಿದ್ದ ಪ್ರತಿಭಟನಾನಿರತ ಮಾಜಿ ಯೋಧರು ಮತ್ತೆ ಸರಣಿ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಸೋಮವಾರ ಘೋಷಿಸಿದ್ದಾರೆ.

ಸರ್ಕಾರ ಘೋಷಿಸಿರುವ ಒಆರ್‌ಒಪಿ ಯೋಜನೆಯಲ್ಲಿರುವ ಕೆಲವು ತಾರತಮ್ಯ ನೀತಿಗಳನ್ನು ಕೈಬಿಡುವಂತೆ ಒತ್ತಾಯಿಸಿ ವಾರಾಂತ್ಯದಲ್ಲಿ ಬೃಹತ್‌ ರ‍್ಯಾಲಿ ನಡೆಸಲಾಗುವುದು ಎಂದೂ  ಮಾಜಿ ಯೋಧರು ಹೇಳಿದ್ದಾರೆ.

ಒಆರ್‌ಒಪಿಗೆ ಸಂಬಂಧಿಸಿದಂತೆ ಸರ್ಕಾರ ಲಿಖಿತ ಭರವಸೆ ನೀಡಬೇಕು ಎಂದು ಅವರು ಮತ್ತೊಂದು ಹೊಸ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಒಆರ್‌ಒಪಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭರವಸೆ ನೀಡಿದ ನಂತರ ಸರಣಿ ಉಪವಾಸ ಸತ್ಯಾಗ್ರಹ ಹಿಂತೆಗೆದುಕೊಳ್ಳುವುದಾಗಿ  ಮಾಜಿ ಯೋಧರು ಘೋಷಿಸಿದ್ದರು.

ಮಂಗಳವಾರ ಸಭೆ ಸೇರಲಿರುವ ಮಾಜಿ ಯೋಧರ ಪ್ರಮುಖ ಸಮಿತಿ ಹೋರಾಟದ ಮುಂದಿನ ರೂಪರೇಷೆಗಳನ್ನು ನಿರ್ಧರಿಸಲಿದೆ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್‌ ಬಲ್ಬೀರ್‌ ಸಿಂಗ್ ಹೇಳಿದ್ದಾರೆ. ಮಾಜಿ ಯೋಧರ ಮುಷ್ಕರ 86ನೇ ದಿನಕ್ಕೆ ಕಾಲಿಟ್ಟಿದೆ. ಯೋಧರ ದಾರಿ ತಪ್ಪಿಸಿದ ಸರ್ಕಾರ: ಈ ನಡುವೆ ಒಆರ್‌ಒಪಿಗೆ ಸಂಬಂಧಿಸಿದಂತೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್‌, ಕೇಂದ್ರದ ಎನ್‌ಡಿಎ ಸರ್ಕಾರ ಕಪಟತನದಿಂದ ಒಆರ್‌ಒಪಿ ಯೋಜನೆಯನ್ನು ದುರ್ಬಲಗೊಳಿಸುವ ಮೂಲಕ ಮಾಜಿ ಯೋಧರಿಗೆ ಮೋಸ ಮಾಡಿದೆ ಎಂದು ಆರೋಪಿಸಿದೆ.

ಉದ್ದೇಶಪೂರ್ವಕವಾಗಿ ಮಹತ್ವದ ಅಂಶಗಳನ್ನು  ಕೈಬಿಟ್ಟಿರುವ ಮೋದಿ ಸರ್ಕಾರ ಮಾಜಿ ಯೋಧರನ್ನು ಗೊಂದಲಕ್ಕೆ ಕೆಡವಿದೆ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಘ್ವಿ ವಾಗ್ದಾಳಿ ನಡೆಸಿದರು.

***
ಒಆರ್‌ಒಪಿಯಿಂದ ಬಜೆಟ್‌ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗದಂತೆ ಆರ್ಥಿಕ ಶಿಸ್ತು ರೂಪಿಸಿದ್ದೇವೆ
-ಜಯಂತ್‌ ಸಿನ್ಹಾ,
ಹಣಕಾಸು ಖಾತೆ ರಾಜ್ಯ ಸಚಿವ

***
ಒಂದು ಶ್ರೇಣಿ ಒಂದು ಪಿಂಚಣಿ ಜಾರಿಯಿಂದ ಬೊಕ್ಕಸದ ಮೇಲೆ ಹೊರೆಯಾಗುವ ಜತೆಗೆ ಬಜೆಟ್ ಮೇಲೂ ಪರಿಣಾಮವಾಗಲಿದೆ.
-ಪ್ರಂಜುಲ್‌ ಭಂಡಾರಿ,
ಎಚ್‌ಎಸ್‌ಬಿಸಿ ಮುಖ್ಯ ಅರ್ಥಶಾಸ್ತ್ರಜ್ಞೆ

Write A Comment