ಬೆಂಗಳೂರು: ಮಳೆಯ ಅಭಾವದಿಂದ ಅಕ್ಷರಶಃ ಬರ ಪರಿಸ್ಥಿತಿ ಎದುರಿಸುತ್ತಿದ್ದ ರಾಜ್ಯದ 14 ಜಿಲ್ಲೆಗಳಲ್ಲಿ ಸೋಮವಾರ ವ್ಯಾಪಕ ಮಳೆಯಾಗಿದೆ. ಹೈದ್ರಾಬಾದ್ ಕರ್ನಾಟಕದ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದು ಆಸ್ತಿ–ಪಾಸ್ತಿ ಹಾಗೂ ಬೆಳೆಗೆ ಹಾನಿಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಹಲವಾರು ಮನೆಗಳಿಗೆ ನೀರು ನುಗ್ಗಿ ಆಹಾರಧಾನ್ಯ, ಬಟ್ಟೆ, ಪಾತ್ರೆಗಳು ನೀರಲ್ಲಿ ತೇಲಿಕೊಂಡು ಹೋಗಿವೆ.
ಬಳ್ಳಾರಿ ಜಿಲ್ಲೆಯಲ್ಲಿನ ಸಾವಿರಾರು ಎಕರೆಯಷ್ಟು ಭತ್ತ, ಕಬ್ಬು, ಮೆಕ್ಕೆಜೋಳ, ಹತ್ತಿ, ತೊಗರಿ ಬೆಳೆ ಜಲಾವೃತವಾಗಿವೆ. ನೂರಾರು ಪಂಪ್‌ಗಳು ನೀರಿನಲ್ಲಿ ಮುಳುಗಿವೆ. ಸಣ್ಣ ಸೇತುವೆಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ಉರುಳಿಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಪಂಪ್‌ಸೆಟ್ ಚಾಲನೆ ಮಾಡಲು ಹೋದಾಗ ಪ್ರವಾಹ ಬಂದಿದ್ದರಿಂದ ಪಂಪ್‌ಸೆಟ್ ಮನೆಗಳ ಮೇಲೆ ಭಾನುವಾರ ಇಡೀ ರಾತ್ರಿ ಆಶ್ರಯ ಪಡೆದಿದ್ದ ಸಿರಗುಪ್ಪ ಸಮೀಪದ 22 ರೈತರನ್ನು ಅಗ್ನಿಶಾಮಕ ದಳದ ಪೊಲೀಸರು ಸೋಮವಾರ ರಕ್ಷಿಸಿದ್ದಾರೆ.
34 ಜನರ ರಕ್ಷಣೆ: ಹೊಸಪೇಟೆ ಹೊರ ವಲಯದಲ್ಲಿರುವ ರಾಯರ ಕೆರೆ ಒಂದೇ ರಾತ್ರಿಯಲ್ಲಿ ಭರ್ತಿಯಾಗಿದೆ. ಕೆರೆ ಅಚ್ಚುಕಟ್ಟು ಪ್ರದೇಶದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯುತ್ತಿದ್ದ ವಾಹನ ಬಹುತೇಕ ನೀರಿನಲ್ಲಿ ಮುಳುಗಿದ್ದು, ಹೊರಬರಲಾಗದ ಸ್ಥಿತಿಯಲ್ಲಿದ್ದ 12 ಕಾರ್ಮಿಕರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮುಂಬೈ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಮಳೆ ಜೋರಾಗಿ ಸುರಿದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯತೊಡಗಿದ್ದು ಹಿಂಗಾರು ಬಿತ್ತನೆಗೆ ಅನುಕೂಲವಾಗಿದೆ. ಆದರೆ ಕೊಯ್ಲಿಗೆ ಬಂದ ಬೆಳೆಗೆ ತೊಂದರೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 90 ಸಾವಿರ ಹೆಕ್ಟೇರ್ ಭತ್ತ ಹಾಗೂ 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಮಳೆ ಕೊರತೆಯ ಕಾರಣ ಬಹುತೇಕ ಬೆಳೆ ಒಣಗುತ್ತಾ ಬಂದಿತ್ತು. ಇದೀಗ ಮತ್ತೆ ಮಳೆ ಸುರಿದ ಕಾರಣ ಬೆಳೆ ಚೇತರಿಕೆಗೆ ಸಂಜೀವಿನಿ ದೊರೆತಂತಾಗಿದ್ದು, ರೈತರ ಮೊಗದಲ್ಲಿ ಹರ್ಷದ ಹೊನಲಿಗೆ ಕಾರಣವಾಗಿದೆ.
ಇನ್ನೆರಡು ದಿನ ಮಳೆ
ಬೆಂಗಳೂರು: ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಇನ್ನೂ ಎರಡು ದಿನ ಉತ್ತಮ ಮಳೆಯಾಗಲಿದೆ.‘ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ, ಗಾಳಿಯ ಒತ್ತಡ ಕಡಿಮೆಯಾಗಿದೆ. ಹೀಗಾಗಿ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ಮೋಡಗಳಿಂದ ಮಳೆಯಾಗುತ್ತಿದೆ’ ಎಂದು ಹವಾಮಾನ ತಜ್ಞ ಪ್ರೊ.ಎಂ.ಬಿ.ರಾಜೇಗೌಡ ತಿಳಿಸಿದರು.ಮಳೆ ಅಬ್ಬರ ಹಾಗೂ ಸಿಡಿಲಿನ ಹೊಡೆತಕ್ಕೆ ರಾಜ್ಯದಲ್ಲಿ ಮಹಿಳೆಯೊಬ್ಬರು ಸೇರಿ ಮೂವರು ಬಲಿಯಾಗಿದ್ದಾರೆ. ಬಳ್ಳಾರಿ, ಉಡುಪಿ ಹಾಗೂ ತುಮಕೂರು ಜಿಲ್ಲೆಯಲ್ಲಿ ಮೂವರು ಮೃತಪಟ್ಟಿದ್ದಾರೆ.