ರಾಷ್ಟ್ರೀಯ

ಒಂದು ಹುದ್ದೆ ಒಂದು ಪಿಂಚಣಿ ಸಾಕಾರ: ನಿವೃತ್ತ ಸೈನಿಕರ ನಾಲ್ಕು ದಶಕಗಳ ಹೋರಾಟಕ್ಕೆ ಜಯ; ಶೀಘ್ರದಲ್ಲೇ ಧರಣಿ ಅಂತ್ಯ

Pinterest LinkedIn Tumblr

saiನವದೆಹಲಿ (ಪಿಟಿಐ): ಮಾಜಿ ಯೋಧರ ಹೋರಾಟಕ್ಕೆ ಕೇಂದ್ರ ಸರ್ಕಾರ ಕೊನೆಗೂ ಮಣಿದಿದೆ. ನಾಲ್ಕು ದಶಕಗಳಿಂದ ಬಾಕಿ ಇದ್ದ  ‘ಒಂದು ಹುದ್ದೆ, ಒಂದು ಪಿಂಚಣಿ’ ಯೋಜನೆ ಜಾರಿಗೊಳಿಸುವುದಾಗಿ ಶನಿವಾರ ಘೋಷಿಸಿದೆ.

ಇದರೊಂದಿಗೆ ಯೋಜನೆ ಜಾರಿಗೆ ಒತ್ತಾಯಿಸಿ ಇಲ್ಲಿಯ ಜಂತರ್‌ ಮಂತರ್‌ನಲ್ಲಿ ಕಳೆದ 84 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಮಾಜಿ ಯೋಧರಿಗೆ ಭಾಗಶಃ ಜಯ ಸಿಕ್ಕಂತಾಗಿದೆ.

ಸರ್ಕಾರದ ಘೋಷಣೆ ತಮ್ಮ ಬೇಡಿಕೆಯನ್ನು ಪೂರ್ಣ ಈಡೇರಿಸುತ್ತಿಲ್ಲ ಎಂದು ಪ್ರತಿಭಟನಾ ನಿರತರು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಅವರ ಪ್ರತಿನಿಧಿಗಳು ಮತ್ತು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ನಡುವೆ ಶನಿವಾರ ಸಂಜೆ ನಡೆದ ಮಾತುಕತೆ ಫಲಪ್ರದವಾಯಿತು.  ಹೀಗಾಗಿ ಮಾಜಿ ಯೋಧರು ನಡೆಸುತ್ತಿರುವ ಪ್ರತಿಭಟನೆ ಶೀಘ್ರ ಕೊನೆಗೊಳ್ಳುವ ಸಾಧ್ಯತೆ ಇದೆ.

ಸ್ವಯಂ ನಿವೃತ್ತಿ ಪಡೆದ ಯೋಧರನ್ನು ಯೋಜನೆಯ ಹೊರಗಿಡುವ ಪ್ರಸ್ತಾವನೆ ಸೇರಿದಂತೆ ಸರ್ಕಾರದ ಮೂರು ನಿರ್ಧಾರಗಳನ್ನು ಮಾಜಿ ಯೋಧರು ವಿರೋಧಿಸಿದ್ದರು.  ಏಳು ಬೇಡಿಕೆಗಳ ಪೈಕಿ  ಕೇವಲ ಒಂದನ್ನು ಮಾತ್ರ  ಈಡೇರಿಸಲು ಒಪ್ಪಿರುವುದಕ್ಕೆ ಅಸಮಾಧಾನ  ಹೊರ ಹಾಕಿದ್ದರು.

ಸ್ವಯಂ ನಿವೃತ್ತಿ ಪಡೆದ ಯೋಧರಿಗೂ ಯೋಜನೆಯ ಲಾಭ ನೀಡಲು ಒಪ್ಪಿದರೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಾಗಿ ಯೋಧರು ಸಂದೇಶ ರವಾನಿಸಿದ್ದರು. ಆ ಹಿನ್ನೆಲೆ ಪರಿಕ್ಕರ್‌ ಮತ್ತು ಪ್ರತಿಭಟನಾ ನಿರತರ ನಡುವೆ ಶನಿವಾರ ರಾತ್ರಿ ಮಾತುಕತೆ ನಿಗದಿಪಡಿಸಲಾಯಿತು.

‘ಸೇನೆಯಲ್ಲಿ ಸ್ವಯಂ ನಿವೃತ್ತಿ (ವಿಆರ್‌ ಎಸ್‌) ಯೋಜನೆಯೇ ಇಲ್ಲ, ಅವಧಿಗೆ  ಮುನ್ನ ಮಾತ್ರ ನಿವೃತ್ತರಾಗಬಹುದು’ ಎಂದು ಪರಿಕ್ಕರ್‌ ಸ್ಪಷ್ಟಪಡಿಸಿದರು.

ಸಮಾಧಾನ: ‘ಸಚಿವರ ಉತ್ತರ ಸಮಾಧಾನ ತಂದಿದೆ, ನಮ್ಮ ಸಂದೇಹ ನಿವಾರಣೆಯಾಗಿದೆ’ ಎಂದು ಸಚಿವರನ್ನು ಭೇಟಿ ಮಾಡಿ ಹೊರಬಂದ ಹೋರಾಟಗಾರರ ಮುಖಂಡ ನಿವೃತ್ತ ಮೇಜರ್‌ ಜನರಲ್‌ ಸತ್ಬೀರ್‌ ಸಿಂಗ್‌ ಹೇಳಿದರು.

ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಾಟಕ ಮಾಡುತ್ತಿದೆ ಎಂದು ಈ ಮೊದಲು ಸತ್ಬೀರ್‌ ಹರಿಹಾಯ್ದಿದ್ದರು.
ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ  ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್‌ ಅವರು ಮೂರು ಸೇನಾಪಡೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ‘ಒಂದು ಹುದ್ದೆ, ಒಂದು ಪಿಂಚಣಿ’ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದರು.

ಹಿಂದಿನ ಸರ್ಕಾರ ಒಆರ್‌ಒಪಿ ಯೋಜನೆ ಜಾರಿಗೆ ಕೇವಲ ₨ 800 ಕೋಟಿ ಅಂದಾಜು ವೆಚ್ಚವನ್ನು ಅವೈಜ್ಞಾನಿಕವಾಗಿ ನಿಗದಿ ಮಾಡಿತ್ತು. ಆದರೆ, ನಿಜವಾದ ವೆಚ್ಚ ₨ 8–10 ಸಾವಿರ ಕೋಟಿ  ಆಗಿದ್ದು, ಮುಂದಿನ ದಿನಗಳಲ್ಲಿ ಮೊತ್ತ ಇನ್ನೂ ಹೆಚ್ಚಾಗಲಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸರ್ಕಾರ ಯೋಜನೆ ಜಾರಿ ಮಾಡಿದೆ  ಎಂದು ಪರಿಕ್ಕರ್‌ ತಿಳಿಸಿದರು.
*
ಪರಿಕ್ಕರ್  ಹೇಳಿದ್ದು
* ಪ್ರತಿ ಐದು ವರ್ಷಗಳಿಗೊಮ್ಮೆ ಮಾತ್ರ ಪಿಂಚಣಿ ಪರಿಷ್ಕರಣೆ. ಎರಡು ವರ್ಷಗಳಿಗೊಮ್ಮೆ ಪಿಂಚಣಿ ಪರಿಷ್ಕರಣೆ  ಮಾಡುವ ಬೇಡಿಕೆ  ಒಪ್ಪುವುದು ಸಾಧ್ಯವಿಲ್ಲ
* ಒಆರ್‌ಒಪಿ ಕುರಿತು ಆರು ತಿಂಗಳ ಒಳಗೆ ವರದಿ ಸಲ್ಲಿಸಲು ಏಕ ಸದಸ್ಯ ಕಾನೂನು ಆಯೋಗ ನೇಮಕ

ಒಆರ್‌ಒಪಿ ಮುಖ್ಯಾಂಶಗಳು
* 2014ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ‘ಒಂದು ಹುದ್ದೆ, ಒಂದು ಪಿಂಚಣಿ’ ಜಾರಿ.
* ಅನೇಕ ವರ್ಷಗಳ ಹಿಂದೆ ನಿವೃತ್ತರಾದ ಯೋಧರು ಇಂದು ನಿವೃತ್ತರಾಗುವ ಅವರ ದರ್ಜೆಯ ಯೋಧರಷ್ಟೇ ಪಿಂಚಣಿ ಪಡೆಯುತ್ತಾರೆ.
* 2013ರಲ್ಲಿ ಪಡೆಯುತ್ತಿದ್ದ ಗರಿಷ್ಠ ಹಾಗೂ ಕನಿಷ್ಠ ಪಿಂಚಣಿಯ ಸರಾಸರಿ ತೆಗೆದು ಲೆಕ್ಕಾಚಾರ.
* ಸರಾಸರಿಗಿಂತ ಹೆಚ್ಚು ಪಿಂಚಣಿ ಪಡೆಯುತ್ತಿದ್ದವರ  ಪಿಂಚಣಿ ಮೊತ್ತದಲ್ಲಿ ವ್ಯತ್ಯಯವಿಲ್ಲ.
* ಆರು ತಿಂಗಳಿಗೆ ಒಂದರಂತೆ ನಾಲ್ಕು ಕಂತುಗಳಲ್ಲಿ ಬಾಕಿ ಪಾವತಿ.  ಯುದ್ಧದಲ್ಲಿ ಪತಿಯನ್ನು ಕಳೆದುಕೊಂಡ ವಿಧವೆಯರಿಗೆ ಒಂದು ಕಂತಿನಲ್ಲಿ ಬಾಕಿ ಪಿಂಚಣಿ ಹಣ ಪಾವತಿ
* ‘ಯೋಜನೆ ಜಾರಿಗೆ 8–10 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚ. ಹಿಂಬಾಕಿ ಪಾವತಿಗೆ 10–12 ಸಾವಿರ ಕೋಟಿ ರೂಪಾಯಿ ವ್ಯಯ
* 26 ಲಕ್ಷ ನಿವೃತ್ತ ಯೋಧರು ಮತ್ತು 6 ಲಕ್ಷ ಯೋಧರ ವಿಧವಾ ಪತ್ನಿಯರಿಗೆ ಲಾಭ
* ಒಂದು ತಿಂಗಳಲ್ಲಿ ಜಾರಿ ಪ್ರಕ್ರಿಯೆ

Write A Comment