ರಾಷ್ಟ್ರೀಯ

ಕಲಬುರ್ಗಿ ಹತ್ಯೆ: ದೆಹಲಿಯಲ್ಲಿ ಪ್ರತಿಭಟನೆ

Pinterest LinkedIn Tumblr

kalನವದೆಹಲಿ: ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಖಂಡಿಸಿ ಲೇಖಕರು ಹಾಗೂ ಬುದ್ಧಿಜೀವಿಗಳು ಇಲ್ಲಿನ ಜಂತರ್‌ ಮಂತರ್‌ ಬಳಿ ಶನಿವಾರ ಪ್ರತಿಭಟನೆ ನಡೆಸಿದರು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ದೇಶದ ವಿವಿಧ ಭಾಗಗಳ ಲೇಖಕರು, ಚಿಂತಕರು ಭಾಗವಹಿಸಿದ್ದರು.

‘ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿಚಾರವಾದಿಗಳ ಮೇಲಿನ ದಾಳಿ ಪ್ರಕರಣಗಳು ಹೆಚ್ಚಿವೆ. ಜನಪರವಾಗಿ ಆಲೋಚಿಸುವ ವ್ಯಕ್ತಿಗಳನ್ನು ದೈಹಿಕವಾಗಿ ಮುಗಿಸುವ ಕೆಲಸವನ್ನು ಫ್ಯಾಸಿಸ್ಟ್‌ ಶಕ್ತಿಗಳು  ಮಾಡುತ್ತಿವೆ. ದಾಬೋಲ್ಕರ್‌, ಪನ್ಸಾರೆ ಅವರನ್ನು ಕೊಲ್ಲಲಾಗಿತ್ತು. ಈಗ ಎಂ.ಎಂ. ಕಲಬುರ್ಗಿ ಹತ್ಯೆ ಮಾಡಲಾಗಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಸಂಪ್ರದಾಯದ ಹೆಸರಲ್ಲಿ ನಡೆಯುವ ಆಚರಣೆಗಳು, ಮೂಢ ನಂಬಿಕೆಗಳನ್ನು ಕಲಬುರ್ಗಿ ವಿರೋಧಿಸುತ್ತಿದ್ದರು. ಅವರ ಚಿಂತನೆ, ಸಂಶೋಧನೆ ಹಾಗೂ ಬರಹಗಳಲ್ಲಿ ವೈಚಾರಿಕತೆ ಪ್ರಖರವಾಗಿತ್ತು.  ಅವರ ಹತ್ಯೆ ವಿಚಾರವಾದಿಗಳು, ಪ್ರಗತಿಪರರಿಗೆ ಎಚ್ಚರಿಕೆ ಆಗಿದೆ ಎಂದು ಈ ಫ್ಯಾಸಿಸ್ಟ್‌ ಶಕ್ತಿಗಳು ಭಾವಿಸಿವೆ.
ಆದರೆ, ನಮ್ಮ ದನಿಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಏಕೆಂದರೆ ಅದು ಹತ್ತಿಕ್ಕಿದಷ್ಟೂ ಪ್ರಬಲವಾಗುತ್ತದೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಹಂತಕರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುವ ದಾಳಿಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಮುಂದಿನ ದಾಳಿಯ ಗುರಿ ಎಂದು ಕೆಲ ದುಷ್ಟಶಕ್ತಿಗಳಿಂದ ಬೆದರಿಕೆ ಎದುರಿಸುತ್ತಿರುವ ಕೆ.ಎಸ್‌. ಭಗವಾನ್‌  ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಈ ಬೆದರಿಕೆ ಹಾಕಿರುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು.

ಜನ ನಾಟ್ಯ ಮಂಚ್‌ ಮುಖಂಡ ಮಲೈಶ್ರೀ ಹಸ್ಮಿ, ಪ್ರಗತಿಪರ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಅಲಿ ಜಾವೆದ್‌, ಜನವಾದಿ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಂ.ಪಿ ಸಿಂಗ್‌, ಸಂಜೀವ್‌ ಕುಮಾರ್, ಹಿಂದಿ ಕವಿ ಪಂಕಜ್‌ ಸಿಂಗ್‌ ಹಾಗೂ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬಿಗುಲ್‌ ಹಾಗೂ ಇಫ್ತಾ ಕಲಾವಿದರು ಕ್ರಾಂತಿ ಗೀತೆಗಳನ್ನು ಹಾಡಿದರು. ಜನ ಸಂಸ್ಕೃತಿ (ಮಲೆಯಾಳಿ) ಗುಂಪು ಮತ್ತು ಅಘಾಝ್‌ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
*
ತಜ್ಞರೊಂದಿಗೆ ಸಿಐಡಿ ಚರ್ಚೆ
ಹುಬ್ಬಳ್ಳಿ: ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಬಳಸಲಾದ ಗುಂಡು, ರಿವಾಲ್ವರ್ ಮತ್ತಿತರ ವಿವರಗಳನ್ನು ಸಂಗ್ರಹಿಸುತ್ತಿರುವ ಸಿಐಡಿ ಎಸ್ಪಿ ಡಾ.ಡಿ.ಸಿ.ರಾಜಪ್ಪ ನೇತೃತ್ವದ  ತಂಡ, ಕಲಬುರ್ಗಿ ಅವರ ಮರಣೋತ್ತರ ಪರೀಕ್ಷೆ ನಡೆಸಿದ ಕಿಮ್ಸ್‌ ಆಸ್ಪತ್ರೆಯ ನ್ಯಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಜಾನನ ನಾಯಕ್‌ ಅವರೊಂದಿಗೆ ಶನಿವಾರ ಒಂದು ಗಂಟೆ ಚರ್ಚೆ ನಡೆಸಿತು. ಮಹಾರಾಷ್ಟ್ರದ ಖ್ಯಾತ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹಾಗೂ ಸಿಪಿಐ ಮುಖಂಡ ಗೋವಿಂದರಾವ್‌ ಅವರನ್ನು ಹತ್ಯೆ ಮಾಡಿದ ಬಗೆಯಲ್ಲಿಯೇ ಡಾ.ಕಲಬುರ್ಗಿ ಅವರನ್ನು ಗುಂಡಿಟ್ಟು ಕೊಂದಿರುವುದರಿಂದ ಈ ಮೂರೂ ಕೊಲೆಗಳನ್ನು ಒಂದೇ  ಗುಂಪು ಮಾಡಿದೆಯೇ ಎಂಬುದರತ್ತ ಸಿಐಡಿ ಅಧಿಕಾರಿಗಳು ಗಮನ ಹರಿಸಿದ್ದಾರೆ.

Write A Comment