ರಾಷ್ಟ್ರೀಯ

ಮುಸ್ಲಿಮರು ಎರಡೇ ಮಕ್ಕಳನ್ನು ಹೊಂದುವಂತೆ ಕಾನೂನು ತನ್ನಿ: ಪ್ರವೀಣ್ ತೊಗಾಡಿಯಾ

Pinterest LinkedIn Tumblr

praveen-togadiaನಾಶಿಕ್: ಮುಸಲ್ಮಾನರು ಮತ್ತು ಕ್ರಿಸ್ತಿಯನ್ನರ ವಿರುದ್ಧ ಆಕ್ರಮಣಕಾರಿ ಹೇಳಿಕೆಗಳಿಗೆ ಹೆಸರಾಗಿರುವ ವಿಶ್ವ ಹಿಂದೂ ಪರಿಷತ್ ನ ಮುಖಂಡ ಪ್ರವೀಣ್ ತೊಗಾಡಿಯಾ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾರತ ದೇಶದಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಪಡುವ ವಿಷಯ. ಮುಸಲ್ಮಾನರು ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಅವರನ್ನು ಶಿಕ್ಷಿಸಬೇಕು ಎಂದು ಹೇಳಿದ್ದಾರೆ.

ಇಬ್ಬರು ಮಕ್ಕಳನ್ನು ಮಾತ್ರ ಹೊಂದಿರಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಕಾನೂನು ತರಬೇಕು. ಸರ್ಕಾರ ಮುಸ್ಲಿಮರಿಗೆ ನೀಡುವ ಸವಲತ್ತು, ಸೌಲಭ್ಯವನ್ನು ತೆಗೆದುಹಾಕಿದರೆ ಮುಸ್ಲಿಮರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಆರ್ ಎಸ್ ಎಸ್ ಮುಖವಾಣಿ ಆರ್ಗನೈಸರ್ ನಲ್ಲಿ ಹೇಳಿದ್ದಾರೆ.

ಇನ್ನೊಂದೆಡೆ ನಾಶಿಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಮುದಾಯ ಸದ್ಯದಲ್ಲಿಯೇ “ಜನಾಂಗೀಯ ಶುದ್ಧೀಕರಣ”  ಮಾಡಬೇಕಾಗಿ ಬರಬಹುದು. ಈ ಬೆಳವಣಿಗೆಗಳ ವಿರುದ್ಧ ಹಿಂದೂಗಳು ಕೂಡಲೇ ಜಾಗರೂಕತೆ ವಹಿಸಬೇಕು. ಇಲ್ಲದಿದ್ದರೆ ಕಾಶ್ಮೀರ ಮತ್ತು ಆಫ್ಘಾನಿಸ್ತಾನದಲ್ಲಿ ಮುಸ್ಲಿಮರು ಹಿಂದೂ ಜನರನ್ನು ಜನಾಂಗೀಯ ಶುದ್ಧೀಕರಣ ಮಾಡಿಕೊಂಡಂತೆ ಉಳಿದ ಕಡೆಯೂ ಮಾಡಲು ಹೊರಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತೀಚೆಗೆ ಬಿಡುಗಡೆಗೊಂಡ ಧಾರ್ಮಿಕ ಜನಗಣತಿಯಲ್ಲಿ ತಿಳಿಸಿರುವಂತೆ ನಮ್ಮ ದೇಶದಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗುತ್ತಿರುವುದಕ್ಕೆ ಹಿಂದೂಗಳು ಆತಂಕಪಡಬೇಕು. ಈ ವಿಷಯವನ್ನು ನಾಡಿದ್ದು ಶನಿವಾರ ನಾಶಿಕ್ ನಲ್ಲಿ ನಡೆಯಲಿರುವ ವಿಎಚ್ ಪಿ ನಾಯಕರ ಸಂತ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಸೆಪ್ಟೆಂಬರ್ 6ರಂದು ನಡೆಯುವ ಸುವರ್ಣ ಮಹೋತ್ಸವ ವರ್ಷಾಚರಣೆಯಲ್ಲಿ  ಘೋಷಿಸಲಾಗುವುದು ಎಂದು ತಿಳಿಸಿದರು.

ಭಾರತ ದೇಶದಲ್ಲಿ ಹಿಂದೂಗಳ ಸಂಖ್ಯೆ ಇಳಿಮುಖವಾಗುತ್ತಿರುವುದನ್ನು ಹಿಂದೂ ಮುಖಂಡರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹಿಂದೂಗಳಿಗೆ ಪ್ರತಿಯಾಗಿ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿರುವುದು ಕೂಡ ಕಳವಳಪಡುವ ವಿಷಯ. ಇದು ಹಿಂದೂ ಜನಾಂಗಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

ಧಾರ್ಮಿಕ ಜನಗಣತಿ ಪ್ರಕಾರ, 2001ರಿಂದ 2011ರ ಅವಧಿಯಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 0.7ರಷ್ಟು ಇಳಿಕೆಯಾಗಿದ್ದರೆ, ಮುಸಲ್ಮಾನರ ಸಂಖ್ಯೆ ಶೇಕಡಾ 0.8ರಷ್ಟು ಏರಿಕೆಯಾಗಿದೆ.ಈ ಸಮಸ್ಯೆಯನ್ನು ಬಗೆಹರಿಸಲು ನಾವು ಸರ್ಕಾರದ ಜೊತೆ ಕೆಲಸ ಮಾಡಲು ಇಚ್ಛಿಸುತ್ತೇವೆ ಎಂದು ತೊಗಾಡಿಯಾ ಹೇಳಿದರು.

Write A Comment