ರಾಷ್ಟ್ರೀಯ

ಫೇಸ್‌ಬುಕ್‌ನಲ್ಲಿ ಮಿಲಿಟರಿ ಮಾಹಿತಿ ಸೋರಿಕೆ: ಮೂವರು ಸೇನಾಧಿಕಾರಿಗಳ ಮೇಲೆ ಸಂಶಯದ ಕಣ್ಣು

Pinterest LinkedIn Tumblr

n-INDIA-ARMY-large570ಹೊಸದಿಲ್ಲಿ, ಆ.30: ಸಾಮಾಜಿಕ ಮಾಧ್ಯಮಗಳಲ್ಲಿ ಸೇನಾ ಮಾಹಿತಿಯನ್ನು ಸೋರಿಕೆ ಮಾಡುವ ಇನ್ನೊಂದು ಪ್ರಕರಣದಲ್ಲಿ, ಫೇಸ್‌ಬುಕ್‌ನಲ್ಲಿ ಲೈಂಗಿಕ ಹರಟೆಯ ವೇಳೆ ಸೇನಾ ತುಕಡಿಗಳಿರುವ ಸ್ಥಳವನ್ನು ಬಹಿರಂಗಪಡಿಸಿರುವ ಆರೋಪದಲ್ಲಿ ಮೂವರು ಭೂಸೇನಾ ಅಧಿಕಾರಿಗಳೀಗ ಕಣ್ಗಾವಲಿನಲ್ಲಿದ್ದಾರೆ.
ನಿವೃತ್ತಿಯ ಬಳಿಕ ಮೋವ್‌ನ ಆರ್ಮಿ ವಾರ್ ಕಾಲೇಜ್‌ನಲ್ಲಿ ಮರು ನೇಮಕಗೊಂಡಿರುವ ಒಬ್ಬ ಕರ್ನಲ್, ರಾಜಪೂತ್ ರೆಜಿಮೆಂಟ್‌ನ ಒಬ್ಬ ಮೇಜರ್ ಹಾಗೂ ಸಶಸ್ತ್ರ ದಳದ ಒಬ್ಬ ಲೆಫ್ಟಿನೆಂಟ್ ಒಆರ್‌ಇಎಟಿಯ (ಸೇನಾ ರಹಸ್ಯ) ಭಾಗಗಳನ್ನು ಬಹಿರಂಗಪಡಿಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇದು, ಸ್ಥಾಪಿತ ಭದ್ರತಾ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆಯೆಂದು ಮೂಲಗಳು ತಿಳಿಸಿವೆ.
ಇದೊಂದು ಆನ್‌ಲೈನ್ ಮಾಯಾ ಬಲೆಯಂತೆ ತೋರುತ್ತಿದೆ. ಏಕೆಂದರೆ, ಅವರನ್ನು ಹರಟೆಗೆ ಪ್ರಚೋದಿಸಿರುವ ವ್ಯಕ್ತಿ, ಒಬ್ಬಳು ಆಕರ್ಷಕ ಮಹಿಳೆಯಂತೆ ಪೋಸ್ ನೀಡಿದ್ದು, ಫೇಸ್‌ಬುಕ್‌ನಲ್ಲಿ ತನ್ನ ಭಾವಚಿತ್ರಗಳನ್ನು ಕಳುಹಿಸಿದ್ದಾಳೆ. ಅಧಿಕಾರಿಗಳು ಆ ಮಹಿಳೆಯೊಂದಿಗೆ ಲೈಂಗಿಕ ಹರಟೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಆಕೆ ಅವರಿಂದ ಸೇನಾ ಘಟಕಗಳು ಹಾಗೂ ಬ್ರಿಗೇಡ್‌ಗಳಿರುವ ನಿರ್ದಿಷ್ಟ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಳೆಂದು ಅವು ಹೇಳಿವೆ.
ಈ ಅಧಿಕಾರಿಗಳೀಗ ಆಡಳಿತಾತ್ಮಕ ಕ್ರಮ ಅಥವಾ ಸೇನಾ ವಿಚಾರಣೆಯ ಮೂಲಕ ಶಿಸ್ತು ಕ್ರಮವನ್ನು ಎದುರಿಸಬೇಕಾಗಿದೆ. ಈಗಿರುವ ಸಾಮಾಜಿಕ ಮಾಧ್ಯಮ ಹಾಗೂ ಸೈಬರ್ ಭದ್ರತೆಯ ವಿಧಾನಗಳ ಕುರಿತು ಖಚಿತಪಡಿಸುವಂತೆ ಮಿಲಿಟರಿ ಗೂಢಚರ್ಯೆ ಮಹಾನಿರ್ದೇಶಕ ದೇಶದ ಎಲ್ಲ ಸೇನಾ ಘಟಕಗಳಿಗೆ ಪತ್ರ ಬರೆದಿದ್ದಾರೆ.

Write A Comment