ಹೊಸದಿಲ್ಲಿ, ಆ.30: ಕಳೆದ 2001 ಹಾಗೂ 2011ರ ನಡುವಿನ ದಶಕದಲ್ಲಿ, ಭಾರತದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 22.9 ಕೋಟಿಯಿಂದ 31.5 ಕೋಟಿಗೇರಿದೆ. ಅದು ಸುಮಾರು ಸೇ.38ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಒಟ್ಟಾರೆ ಜನಸಂಖ್ಯಾವೃದ್ದಿ ಶೇ.18ರಷ್ಟಿತ್ತು. ಆದರೆ, ಶುಕ್ರವಾರ ಬಿಡುಗಡೆ ಯಾದ ಜನಗಣತಿ ಮಾಹಿತಿಯು ಈ ಒಟ್ಟಾರೆ ಸಂಖ್ಯೆಗಳಲ್ಲಿ ಭಾರಿ ದೊಡ್ಡ ಬದಲಾವಣೆಯನ್ನು ಬೆಟ್ಟು ಮಾಡಿದೆ.
ಈ ದಶಕದಲ್ಲಿ 15-19 ವಯೋಮಾನದ ವಿದ್ಯಾರ್ಥಿಗಳ ಸಂಖ್ಯೆ ನಾಟಕೀಯವಾಗಿ ಶೇ.73ರಷ್ಟು ಏರಿದೆ. ಅಂದರೆ, 4.4 ಕೋಟಿ ಇದ್ದುದು 7.6 ಕೋಟಿಗಳಷ್ಟಾಗಿದೆ. ಈ ವಯೋ ಗುಂಪು ಪ್ರೌಢ ಹಾಗೂ ಪದವಿ ಪೂರ್ವ ಮಟ್ಟಗಳಿಗೆ ಸಂಬಂಧಿಸಿದೆ. ಹಾಗಾಗಿ, ಉನ್ನತ ದರ್ಜೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹ ಮಟ್ಟದಲ್ಲಿ ಏರುತ್ತಿದೆ. ಅದರಲ್ಲಿ ವಿದ್ಯಾರ್ಥಿನಿಯರ ಪ್ರಮಾಣವೇ ಅಧಿಕವಾಗಿದೆ.
ಇಂದು ಭಾರತದಲ್ಲಿ ವಿದ್ಯೆಯ ಹಸಿವು ಆಳವಾಗಿದೆ. ಅದು ಈ ಹಿಂದೆ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಎಂದೂ ಇರಲಿಲ್ಲ. ಆರ್ಥಿಕ ಸುದೃಢತೆಗೆ ಶಿಕ್ಷಣವು ಖಚಿತ ಮಾರ್ಗ ವೆಂದು ಪರಿಗಣಿಸಲಾಗುತ್ತಿದೆಯೆಂದು ಭಾರತದಲ್ಲಿ ಶಿಕ್ಷಣ ಮತ್ತು ಉದ್ಯೋಗದ ಕುರಿತು ಅಧ್ಯಯನ ನಡೆಸುತ್ತಿರುವ ಐಐಟಿ-ದಿಲ್ಲಿ ಯ ಪ್ರೊಫೆಸರ್ ಜಯನ್ ಜೋಸ್ ಥೋಮಸ್ ವಿವರಿಸಿದ್ದಾರೆ. ಈ ಎಲ್ಲ ವಿದ್ಯಾವಂತರಿಗೆ ಸೂಕ್ತವಾದ ಉದ್ಯೋಗಗಳನ್ನು ನೀಡಲು ಸಾಧ್ಯವೇ? ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆಯೆಂದು ಅವರು ಹೇಳಿದ್ದಾರೆ.
ಹೊಸ ಜನಗಣತಿ ಮಾಹಿತಿಯು ಹಿಂದೆ ಉಳಿದಿರುವ-ವಿದ್ಯಾರ್ಥಿಗಳ ಬೆಳೆವಣಿಗೆಯ ಕಳಪೆ ಮಗ್ಗುಲನ್ನೂ ಬಹಿರಂಗಪಡಿಸಿದೆ. ಏಳರ ಹರೆಯದ ಪ್ರತಿ ಐವರು ಮಕ್ಕಳಲ್ಲಿ ಒಂದು ಮಗು ಇನ್ನೂ ಶಾಲೆಗೆ ಸೇರಿಲ್ಲ. ಅವರ ಸಂಖ್ಯೆ 48 ಲಕ್ಷದಷ್ಟಿದೆ. 13ರ ಹರೆಯಕ್ಕಾಗುವಾಗ ಈ ಪ್ರಮಾಣ ಶೇ.7ಕ್ಕೆ ಇಳಿಯುತ್ತದೆ. ಅಂದರೆ, ಸುಮಾರು 16 ಲಕ್ಷ ಮಕ್ಕಳು ಈಗಲೂ, ಶಾಲೆಗೆ ಸೇರದವರಿದ್ದಾರೆ. ಕೆಲವು ಮಕ್ಕಳು ತಡವಾಗಿ ಶಾಲೆಗೆ ಸೇರುವ ಹಾಗೂ ಇನ್ನು ಕೆಲ ವರು ಎಂದೂ ಶಾಲೆಗೆ ಸೇರದಿರುವ ಪ್ರವೃತ್ತಿ ಕಾಣಿಸುತ್ತಿದೆ.
5 ವರ್ಷ ಹಾಗೂ ಅದಕ್ಕಿಂತ ಮೇಲಿನ 30.8 ಕೋಟಿಗೂ ಹೆಚ್ಚು ಭಾರತೀಯರು, ಅಂದರೆ ಶೇ.25ರಷ್ಟು ಮಂದಿ-ಎಂದೂ ಯಾವುದೇ ಶಿಕ್ಷಣ ಸಂಸ್ಥೆಗೆ ದಾಖಲಾಗಿಲ್ಲ. ಆದರೆ, ಇದು ಭೂತ ಕಾಲದ ಚರಿತ್ರೆಯಾಗಿದೆ. ಈಗ ಅವರಲ್ಲಿ ಮುಕ್ಕಾಲಂಶದಷ್ಟು (ಶೇ.72) ಮಂದಿ 25 ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಯದವರಾಗಿದ್ದಾರೆ.
2001 ಹಾಗೂ 2011ರ ಜನಗಣತಿ ವರ್ಷಗಳಲ್ಲಿ ಈ ವಿದ್ಯಾರ್ಥಿ ಸಂಖ್ಯಾ ಸ್ಫೋಟ ನಿಖರವಾಗಿ ಹೇಗೆ ಸಂಬಂಧಿಸಿತೆಂದು ತಿಳಿಯಲು, ಎನ್ಎಸ್ಎಸ್ಒದಿಂದ ಬರುವ ಅಂಕಿ-ಅಂಶಗಳನ್ನು ಥೋಮಸ್ ವಿಶ್ಲೇಷಣೆ ನಡೆಸಿದ್ದಾರೆ.
1996 ಹಾಗೂ 2004-05ರ ನಡುವೆ 5-9 ಹಾಗೂ 10-14 ವಯೋ ಗುಂಪಿನ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಗಣ ನೀಯ ಪ್ರಮಾಣದಲ್ಲಿ ಹೆಚ್ಚಿದೆ. ಇದಕ್ಕೆ ಸರ್ವಶಿಕ್ಷಾ ಅಭಿಯಾನ, ಮಧ್ಯಾಹ್ನದ ಬಿಸಿಯೂಟಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ನ ಹಲವು ನಿರ್ದೇಶನಗಳು ಇತ್ಯಾದಿ ಇದಕ್ಕೆ ಕಾರಣ. 2004-05ರ ಬಳಿಕ, 15-19 ವಯೋ ಗುಂಪಿನ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಗಮನಾರ್ಹವಾಗಿ ಏರಿದುದನ್ನು ಥೋಮಸ್ ವಿಶ್ಲೇಷಿಸಿರುವ ಎನ್ಎಸ್ಎಸ್ಒ ಅಂಕಿ-ಅಂಶಗಳು ತೋರಿಸಿವೆ. ಕುತೂಹಲದ ವಿಷಯವೆಂದರೆ, ಇತ್ತೀಚಿನ ಹಲವು ವರ್ಷಗಳಲ್ಲಿ ಇಡೀ 5ರಿಂದ 24 ವಯೋ ಗುಂಪಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿ, ಶ್ರೀಮಂತರು ಹಾಗೂ ಬಡವರ ನಡುವಿನ ಅಂತರ ಕಡಿಮೆಯಾಗಿರುವುದನ್ನು ಥೋಮಸ್ ಗಮನಿಸಿದ್ದಾರೆ. ಅಂದರೆ, ಅತಿ ಬಡ ವಗದರ್ವರೂ ವಿದ್ಯಾವಂತರಾಗಲು ಆಸಕ್ತಿ ಹೊಂದಿದ್ದಾರೆ. ಅದಕ್ಕೆ ಬಹುಶಃ ಹೆತ್ತವರು ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಲು ಸಾಧ್ಯವಾದ ಮಟ್ಟಿಗೆ ಆರ್ಥಿಕ ತ್ಯಾಗ ಮಾಡಲು ಬಯಸುತ್ತಿರುವುದು ಕಾರಣವಿರಬಹುದು.
ಆದರೆ, ಭಾರತದಲ್ಲಿ ಇನ್ನೊಂದು ಅಂತರ ಇನ್ನೂ ಕಡಿಮೆಯಾಗುತ್ತಿಲ್ಲ. ಅದು ಪ್ರಾದೇಶಿಕ ಅಸಮತೋಲನ. 2011ರ ಅಂಕಿ-ಅಂಶಗಳು ತಿಳಿಸುವಂತೆ, 15-19ರ ವಯೋ ಗುಂಪಿನ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವು ರಾಜ್ಯದಿಂದ ರಾಜ್ಯಕ್ಕೆ ಭಾರಿ ವ್ಯತ್ಯಾಸ ಹೊಂದಿದೆ. ಕೇರಳವು ಗರಿಷ್ಠ ವಿದ್ಯಾರ್ಥಿಗಳ ಪಾಲು (ಶೇ.83) ಹೊಂದಿದ್ದರೆ, ಒಡಿಶಾ ಕನಿಷ್ಠ (ಶೇ.43) ದಾಖಲಾತಿ ಪ್ರಮಾಣ ಹೊಂದಿದೆ.
ಆಶ್ಚರ್ಯದ ವಿಷಯವೆಂದರೆ, ಪಶ್ಚಿಮ ಬಂಗಾಳ ಹಾಗೂ ಗುಜರಾತ್ಗಳೂ 15-19 ವಯೋ ಗುಂಪಿನ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣದಲ್ಲಿ ಕ್ರಮವಾಗಿ ಶೇ.53 ಹಾಗೂ ಶೇ.51 ರಷ್ಟು ತಳ ಮಟ್ಟದಲ್ಲಿವೆ. ಇದು ರಾಜ್ಯದಲ್ಲಿ ಉನ್ನತ ಶಿಕ್ಷಣದ ಆಯ್ಕೆ ಯ ಲಭ್ಯತೆಯನ್ನು ಪ್ರತಿಬಿಂಬಿಸುತ್ತದೆ. ಮಹಾರಾಷ್ಟ್ರ, ಹರ್ಯಾಣ ಹಾಗೂ ತಮಿಳುನಾಡುಗಳಂತಹ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಹಾಗೂ ನಗರೀಕರಣಗೊಂಡಿರುವ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಪ್ರಮಾಣ ಅತಿ ಹೆಚ್ಚಿದೆ.