ರಾಷ್ಟ್ರೀಯ

ಬಿಹಾರವನ್ನು ಅಣಕಿಸುವುದರಲ್ಲಿ ಕೆಲವರಿಗೆ ಖುಷಿ: ಮೋದಿ ಡಿಎನ್‌ಎ ಹೇಳಿಕೆಗೆ ಸೋನಿಯಾ ತಿರುಗೇಟು

Pinterest LinkedIn Tumblr

rally-newಪಾಟ್ನಾ, ಆ.30: ಪ್ರಧಾನಿ ನರೇಂದ್ರ ಮೋದಿಯ ಡಿಎನ್‌ಎ ಹೇಳಿಕೆ ವಿರುದ್ಧ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ. ಪಾಟ್ನಾದಲ್ಲಿ ಇಂದು ಆಯೋಜಿಸಿದ ‘ಸ್ವಾಭಿಮಾನ್ ರ್ಯಾಲಿ’ಯಲ್ಲಿ ಜೆಡಿಯು,ಆರ್‌ಜೆಡಿ ಹಾಗೂ ಸಮಾಜವಾದಿ ಪಕ್ಷಗಳ ಉನ್ನತ ನಾಯಕರ ಜೊತೆ ವೇದಿಕೆ ಹಂಚಿಕೊಂಡು ಮಾತನಾಡಿದ ಅವರು, ಕೇಂದ್ರ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡರು.

‘‘ಬಿಹಾರವನ್ನು ಮೂದಲಿಸುವುದರಲ್ಲಿ ಕೆಲವರು ಖುಷಿಪಡುತ್ತಾರೆ. ರಾಜ್ಯದ ಡಿಎನ್‌ಎ ಹಾಗೂ ಸಂಸ್ಕೃತಿಯನ್ನು ಕೆಟ್ಟದ್ದಾಗಿ ವಿಶ್ಲೇಷಿಸಲು ತಮಗೆ ಸಿಕ್ಕಿದ ಅವಕಾಶವನ್ನು ಅವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಈ ರಾಜ್ಯವನ್ನು ಬೀಮಾರು(ರೋಗಿ) ಎಂಬ ಹೀನ ಶಬ್ದಗಳಿಂದ ಅವರು ಕರೆದಿದ್ದಾರೆ’’ ಎಂದು ಕಳೆದ ಜುಲೈಯಲ್ಲಿ ಮುಝಫ್ಫರ್‌ಪುರದಲ್ಲಿ ಮೋದಿ ಮಾಡಿದ್ದ ಭಾಷಣವನ್ನು ಉಲ್ಲೇಖಿಸುತ್ತಾ ಸೋನಿಯಾ ಹೇಳಿದರು.

ಆಡಂಬರ ಪ್ರದರ್ಶನದಲ್ಲಿಯೇ ಮೋದಿ ಸರಕಾರ ನಿರತವಾಗಿದೆಯೇ ಹೊರತು ಬೇರೆ ಏನನ್ನೂ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ‘‘ಮೋದಿ ಸರಕಾರವು ಈಗಾಗಲೇ ತನ್ನ ಅಧಿಕಾರ ಅವಧಿಯ ನಾಲ್ಕನೆ ಒಂದು ಭಾಗವನ್ನು ಪೂರ್ಣಗೊಳಿಸಿದೆ. ಆಡಂಬರ ಪ್ರದರ್ಶನವನ್ನಷ್ಟೇ ಅಲ್ಲದೆ ಬೇರೇನನ್ನು ಅವರು ಮಾಡಿದ್ದಾರೆ?’’ ಎಂದು ನೆರೆದಿದ್ದ ಸಭಿಕರನ್ನು ಪ್ರಶ್ನಿಸಿದರು.
ಯೋಧರು ಹಾಗೂ ಅರೆ ಸೇನಾ ಪಡೆ ಸಿಬ್ಬಂದಿಯು ಗಡಿಯಲ್ಲಿ ನಿರಂತರವಾಗಿ ಪಾಕ್ ಉಗ್ರರ ದಾಳಿಗೆ ಬಲಿಯಾಗುತ್ತಿದ್ದರೂ ಸರಕಾರ ಮಾತ್ರ ಆ ದೇಶದ ಬಗ್ಗೆಯಿರುವ ತನ್ನ ನಿಲುವನ್ನು ದೇಶದ ಜನರ ಮುಂದೆ ವ್ಯಕ್ತಪಡಿಸುತ್ತಿಲ್ಲ ಎಂದು ದೂರಿದರು.
ಆರ್ಥಿಕ ಬಿಕ್ಕಟ್ಟಿಗೆ ಮೋದಿಯೇ ಕಾರಣ ಎಂದ ಅವರು, ಅವರ ತಪ್ಪುಗಳಿಂದಾಗಿಯೇ ಹಣದುಬ್ಬರ ಗಗನಕ್ಕೇರಿದೆ ಎಂದು ಆಪಾದಿಸಿದರು. ಹಣದುಬ್ಬರ ಹೆಚ್ಚುತ್ತಿದೆ ಹಾಗೂ ಹಣದ ವೌಲ್ಯ ಕಡಿಮೆಯಾಗುತ್ತಿದೆ. ಭ್ರಷ್ಟಾಚಾರ ಮುಕ್ತ ಭಾರತದ ಕುರಿತಾಗಿ ಪ್ರಧಾನಿ ಟೊಳ್ಳು ಭರವಸೆಯನ್ನಷ್ಟೇ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಹಾರದ ಅಭಿವೃದ್ಧಿಗಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನೀಡಿರುವ ಕೊಡುಗೆಯನ್ನು ಸೋನಿಯಾ ಈ ಸಂದರ್ಭದಲ್ಲಿ ಶ್ಲಾಘಿಸಿದರು.
‘‘ಪ್ರಧಾನಿ ಮೋದಿ ಈ ಹಿಂದೆ ಪಾಕ್ ಬಗ್ಗೆ ಉಪನ್ಯಾಸ ನೀಡುತ್ತಿದ್ದರು. ಗಡಿಯಲ್ಲಿ ನಮ್ಮ ಯೋಧರು ಹತ್ಯೆಗೈಯಲ್ಪಡುತ್ತಿರುವ ಹಾಗೂ ಜನರ ಮೇಲೆ ದಾಳಿ ನಡೆಯುತ್ತಿರುವ ಈ ವೇಳೆಯಲ್ಲಿ ಪಾಕಿಸ್ತಾನದ ಬಗ್ಗೆ ಅವರು ಹೊಂದಿರುವ ನಿಲುವೇನು? ದೇಶವು ಇದನ್ನು ತಿಳಿಯಲು ಬಯಸುತ್ತಿದೆ’’

-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

Write A Comment