ಲಖನೌ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಂಸ್ಕೃತ ಭಾಷೆ ಪ್ರಚಾರವನ್ನು ಸಮರ್ಥಿಸಿಕೊಂಡಿದ್ದು, ಸಂಸ್ಕೃತವನ್ನು ವಿದೇಶಿ ವಿದ್ವಾಂಸರು ಸಹ ವೈಜ್ಞಾನಿಕ ಭಾಷೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಸಂಸ್ಕೃತವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಲಖನೌದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಹಾಭಿಯಾನಂ’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಸಂಸ್ಕೃತದ ಮಹಾಕಾವ್ಯಗಳಲ್ಲಿರುವ ಕಠಿಣವಾದ ತಾತ್ವಿಕ ಪ್ರಶ್ನೆಗಳಿಗೆ ಉತ್ತರಿಸಲು ಸಂಸ್ಕೃತಕ್ಕಿಂತ ಮತ್ತೊಂದು ಭಾಷೆಗೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಯಾವುದೇ ವಿಷಯದಲ್ಲೂ ಸಹ ಸಂಸ್ಕೃತ ಅತ್ಯಂತ ಪ್ರಯೋಜನಕಾರಿ ಭಾಷೆ ಎಂಬುದನ್ನು ಜನರು ಇತ್ತೀಚಿನ ದಿನಗಳಲ್ಲಿ ಒಪ್ಪುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಸೂಪರ್ ಕಂಪ್ಯೂಟರ್ ನ್ನು ನಿರ್ಮಾಣ ಮಾಡಬೇಕಾದರೆ ನಾಸಾ ಸಹ ಸಂಸ್ಕೃತ ಇದಕ್ಕೆ ಸರಿಹೊಂದುವ ಉತ್ತಮ ಭಾಷೆ ಎಂದು ಅಭಿಪ್ರಾಯಪಟ್ಟಿದೆ. ಸಂಸ್ಕೃತದಿಂದ ಭಾರತೀಯರಾದ ನಾವೇ ದೂರ ಸರಿಯುತ್ತಿರುವುದು ಅಣಕ. ಇಂಗ್ಲೀಷ್ ಅಥವಾ ಇನ್ನಿತರ ಭಾಷೆಗಳಂತೆ ಗೊಂದಲಕ್ಕೀಡು ಮಾಡುವ ಕಾಗುಣಿತ, ಉಚ್ಚಾರಣೆ ಸಮಸ್ಯೆ ಸಂಸ್ಕೃತ ಭಾಷೆಗೆ ಇಲ್ಲ. ಅಮೇರಿಕಾ, ಯುಕೆಗಳ ಯುಅವಕರೂ ಸಂಸ್ಕೃತ ಅಧ್ಯಯನಕ್ಕೆ ಆಸಕ್ತಿ ತೋರುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಚ್ಛಾ ಶಕ್ತಿ ಇದ್ದಾರೆ, ಸಂಸ್ಕೃತದ ಜ್ಞಾನವನ್ನು ಎಲ್ಲಾ ಮನೆಗಳಿಗೂ ತಲುಪಿಸಬಹುದು ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.