ಬರೇಲಿ, ಆ.23: ಅಧಿಕಾರಶಾಹಿ ಮಾನವೀಯತೆಯನ್ನು ಎಂದೋ ಕಳೆದುಕೊಂಡಿದೆ ಎನ್ನುವುದಕ್ಕೆ ತಾಜಾ ನಿದರ್ಶನವಿಲ್ಲಿದೆ. ರಕ್ತ ಹೆಪ್ಪುಗಟ್ಟಿಸುವ ಈ ಬರ್ಬರ ಘಟನೆ ನಡೆದಿದ್ದು ಇಲ್ಲಿಗೆ ಸಮೀಪದ ಕಿಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.
ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿದ್ದು,ಘಟನಾ ಸ್ಥಳದ ವ್ಯಾಪ್ತಿಯ ಕುರಿತು ಸರಕಾರಿ ರೈಲ್ವೆ ಪೊಲೀಸರು(ಜಿಪಿಎಫ್) ಮತ್ತು ಕಿಲಾ ಪೊಲೀಸರ ಕಿತ್ತಾಟದಲ್ಲಿ ಆರು ಗಂಟೆಗಳ ಕಾಲ ಹಳಿಗಳಲ್ಲಿಯೇ ಬಿದ್ದುಕೊಂಡಿದ್ದ ಆ ನತದೃಷ್ಟನ ದೇಹದ ಮೇಲೆ ಇನ್ನೂ 16 ರೈಲುಗಳು ಹಾದು ಹೋಗಿದ್ದು, ಅದು ಗುರುತು ಹಿಡಿಯಲೂ ಸಾಧ್ಯವಾಗದಷ್ಟು ಛಿದ್ರವಿಚ್ಛಿದ್ರಗೊಂಡಿತ್ತು.
ಗುರುವಾರ ಬೆಳಗ್ಗೆ 6:18ರ ಸುಮಾರಿಗೆ ಸ್ಮಶಾನ ಭೂಮಿ ಕ್ರಾಸಿಂಗ್ ಬಳಿ ಹೌರಾದಿಂದ ಅಮೃತಸರಕ್ಕೆ ಚಲಿಸುತ್ತಿದ್ದ ಅಕಾಲ್ ತಖ್ತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಸುಮಾರು 20-22ರ ಹರೆಯದ ಅಪರಿಚಿತ ಯುವಕ ಮೃತಪಟ್ಟಿದ್ದ. ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ಕಿಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರೆ ಅತ್ತ ರೈಲಿನ ಚಾಲಕ ಬರೇಲಿ ರೈಲ್ವೆ ನಿಲ್ದಾಣದಲ್ಲಿಯ ನಿಯಂತ್ರಣ ಕೊಠಡಿಗೆ ಸುದ್ದಿ ಮುಟ್ಟಿಸಿದ್ದ. ಜಿಆರ್‌ಪಿ ಸಿಬ್ಬಂದಿ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸುವಂತೆ ಕಿಲಾ ಪೊಲೀಸರಿಗೆ ಸೂಚಿಸಿದ್ದರು.
ಇದು ಉಭಯತರ ಡುೆ ಜಗಳಕ್ಕೆ ಕಾರಣವಾಗಿತ್ತು. ಘಟನಾ ಸ್ಥಳ ತಮ್ಮ ಅಧಿಕಾರ ವ್ಯಾಪ್ತಿಗೆ ಸೇರಿದ್ದಲ್ಲ ಎಂಬ ನೆಪವೊಡ್ಡಿ ಶವವನ್ನು ಅಲ್ಲಿಂದ ಸಾಗಿಸಲು ಇಬ್ಬರೂ ಸಿದ್ಧರಿರಲಿಲ್ಲ. ಈ ಕಿತ್ತಾಟ ಆರು ಗಂಟೆಗೂ ಹೆಚ್ಚು ಕಾಲ ನಡೆದಿದ್ದು ಅಷ್ಟೂ ಹೊತ್ತು ಹಳಿಗಳ ಮೇಲೆಯೇ ಬಿದ್ದುಕೊಂಡಿದ್ದ ಯುವಕನ ಶವದ ಮೇಲೆ ಬರೋಬ್ಬರಿ 16 ಎಕ್ಸಪ್ರೆಸ್ ರೈಲುಗಳು ಹಾದು ಹೋಗಿದ್ದವು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಹಿರಿಯ ರೈಲ್ವೆ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಕಿಲಾ ಪೊಲೀಸರು ಶವವನ್ನು ತಮ್ಮ ವಶಕ್ಕೆ ತಗೆದುಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಆದರೆ ಆ ವೇಳೆಗೆ ಚೂರುಚೂರಾಗಿದ್ದ ಶವ ಗುರುತು ಹಿಡಿಯುವ ಸ್ಥಿತಿಯಲ್ಲಿರಲಿಲ್ಲ.