ಕನ್ನಡ ವಾರ್ತೆಗಳು

ನರ್ಮ್ ಯೋಜನೆಯಡಿ ಮಂಗಳೂರಿಗೆ ಮಂಜೂರಾಗಿರುವ 35 ಸರಕಾರಿ ಸಿಟಿ ಬಸ್‌ಗಳಿಗೆ ಪರವಾನಿಗೆ ನೀಡಲು ಆರ್‌ಟಿಎ ಒಪ್ಪಿಗೆ : 18 ಬಸ್‌ಗಳಿಗೆ ಮಾತ್ರ ಸ್ಟೇಟ್‌ಬ್ಯಾಂಕ್ ಪ್ರವೇಶ

Pinterest LinkedIn Tumblr

Rto_meet_photo_1

ಮಂಗಳೂರು, ಆ.23: ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಜಿಲ್ಲಾ ದಂಡಾಧಿಕಾರಿ (ಡಿಎಂ) ಅಧಿ ಸೂಚನೆಯನ್ನು ಸಡಿಲಗೊಳಿಸಿದ ಬೆನ್ನಲ್ಲೇ, ಶನಿವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದ ನರ್ಮ್ ಯೋಜನೆಯಡಿ ಮಂಗಳೂರಿಗೆ ಮಂಜೂರಾಗಿರುವ 35 ಸರಕಾರಿ ಸಿಟಿ ಬಸ್‌ಗಳಿಗೆ ಪರವಾನಿಗೆ ನೀಡಲು ಒಪ್ಪಿಗೆ ನೀಡಲಾಗಿದೆ.

ಆದರೆ, ಪರಿಷ್ಕೃತ ಡಿಎಂ ಅಧಿಸೂಚನೆಯಲ್ಲಿ ಆದೇಶಿ ಸಲಾಗಿರುವಂತೆ ನರ್ಮ್ ಯೋಜನೆಯ 18 ಬಸ್‌ಗಳಿಗೆ ಮಾತ್ರವೇ ಸ್ಟೇಟ್‌ಬ್ಯಾಂಕ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದ 17 ಬಸ್‌ಗಳಿಗೆ ಸ್ಟೇಟ್‌ಬ್ಯಾಂಕ್ ಹೊರತುಪಡಿಸಿ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ರೂಟ್‌ಗಳನ್ನು ಅಧ್ಯಯನ ಮಾಡಿ ಒಂದು ವಾರದೊಳಗೆ ಪರವಾನಿಗೆಗೆ ಪರಿಷ್ಕೃತ ಅರ್ಜಿ ಸಲ್ಲಿಸುವಂತೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎ.ಬಿ.ಇಬ್ರಾಹೀಂ ಕೆಎಸ್ಸಾರ್ಟಿಸಿಗೆ ಸೂಚಿಸಿದರು.

ಶನಿವಾರ ಈ ಬಗ್ಗೆ ನಡೆದ ವಿಶೇಷ ಆರ್‌ಟಿಎ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಎ.ಬಿ.ಇಬ್ರಾಹೀಂ, ಜಿಲ್ಲಾ ದಂಡಾಧಿಕಾರಿ (ಡಿಎಂ) ಅಧಿಸೂಚನೆಯಂತೆ 18 ನರ್ಮ್ ಬಸ್‌ಗಳಿಗೆ ಸ್ಟೇಟ್‌ಬ್ಯಾಂಕ್‌ವರೆಗೆ ಪ್ರಯಾಣಿಸಲು ಹಾಗೂ ಉಳಿದ 17 ಬಸ್‌ಗಳಿಗೆ ಕೆಎಸ್ಸಾರ್ಟಿಸಿಯಿಂದ ನಗರದೊಳಗೆ ಓಡಾಡಲು ಪರವಾನಿಗೆ ನೀಡುತ್ತಿರುವುದಾಗಿ ತಿಳಿಸಿದರು.

(2013ರ ಸೆಪ್ಟಂಬರ್ 11ರಂದು ಹೊರಡಿಸಲಾಗಿದ್ದ ಡಿಎಂ ಅಧಿಸೂಚನೆಯನ್ನು ಸಡಿಲಗೊಳಿಸಿ, ಹೊಸ ಅಧಿಸೂಚನೆಯನ್ನು ಆಗಸ್ಟ್ 20ರಂದು ಹೊರಡಿ ಸಲಾಗಿತ್ತು.)

ಕೆಎಸ್ಸಾರ್ಟಿಸಿ ಪರ ವಕೀಲ ರಾಜೇಶ್ ಶೆಟ್ಟಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಾ, ಕಳೆದ ಮಾರ್ಚ್ ನಲ್ಲಿ ನಡೆದ ಆರ್‌ಟಿಎ ಸಭೆಯ ನಿರ್ಧಾರದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದಾಗ ಒಟ್ಟು 2,304 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಸ್ಟೇಟ್‌ಬ್ಯಾಂಕ್ ಮೂಲಕವೇ ಬಸ್‌ಗಳನ್ನು ಕೋರಲಾಗಿದೆ.

ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಪರಿಗಣಿಸಿ ಕಳೆದ ಆಗಸ್ಟ್ 5ರ ಸಭೆಯಲ್ಲಿ 18 ರೂಟ್‌ಗಳಿಗೆ 35 ಬಸ್‌ಗಳಿಗೆ ಪರವಾನಿಗೆಗೆ ಬೇಡಿಕೆ ಸಲ್ಲಿಸಲಾಗಿದೆ. ಸ್ಟೇಟ್‌ಬ್ಯಾಂಕ್ ಮೂಲಕವೇ ಎಲ್ಲಾ ಬಸ್‌ಗಳಿಗೂ ಪರವಾನಿಗೆ ನೀಡಬೇಕೆಂದು ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎ.ಬಿ.ಇಬ್ರಾಹೀಂ, ಡಿಎಂ ಅಧಿಸೂಚನೆಯನ್ನು ಆರ್‌ಟಿಎ ಸಭೆಯಲ್ಲಿ ಪ್ರಶ್ನಿಸುವ ಅವಕಾಶ ಇಲ್ಲ. ಸಾರ್ವಜನಿಕರ ಬೇಡಿಕೆಯಲ್ಲಿ ನಗರದೊಳಗೆ ಸ್ಟೇಟ್‌ಬ್ಯಾಂಕ್ ಕೊನೆಯ ತಾಣವಾಗಿರದ ಹಲವಾರು ರೂಟ್‌ಗಳಿದ್ದು, ಆ ರೂಟ್ ಗಳಲ್ಲಿ ಬಸ್ ಓಡಿಸಲು ಮುಂದಾಗುವ ಮೂಲಕ ಕೆಎಸ್ಸಾರ್ಟಿಸಿ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿ ಸಬೇಕೆಂದು ತಾಕೀತು ಮಾಡಿದರು.

Rto_meet_photo_2 Rto_meet_photo_3 Rto_meet_photo_4 Rto_meet_photo_5 Rto_meet_photo_6

ಸಭೆಯಲ್ಲಿ ಉಪಸ್ಥಿತರಿದ್ದ ಪ್ರಾಧಿಕಾರದ ಸದಸ್ಯ, ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಮಾತನಾಡಿ, ನಗರ ಕೇವಲ ಸ್ಟೇಟ್‌ಬ್ಯಾಂಕ್‌ಗೆ ಮಾತ್ರ ಸೀಮಿತವಾಗಿಲ್ಲ. ನಗರದೊಳಗೆ ಅನೇಕ ಕಡೆಗಳಲ್ಲಿ ಸಾರ್ವಜನಿಕರಿಂದ ಸರಕಾರಿ ಬಸ್‌ಗಳಿಗೆ ಬೇಡಿಕೆ ಇವೆ. ಈ ಬಗ್ಗೆ ಗಮನ ಹರಿಸಿ ಎಂದು ಕೆಎಸ್ಸಾರ್ಟಿಸಿಗೆ ಸೂಚಿಸಿದರು. ಖಾಸಗಿ ಬಸ್ ಮಾಲಕರ ಪರ ವಕೀಲರು, ಖಾಸಗಿಯವರು ಕಳೆದ 75 ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ. ನರ್ಮ್ ಬಸ್‌ಗಳ ಬಗ್ಗೆ ನಮಗೆ ಆಕ್ಷೇಪ ಇಲ್ಲ. ಆದರೆ, ಖಾಸಗಿಯವರ ಸೇವೆಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಕೆಲ ಖಾಸಗಿ ಬಸ್ ಮಾಲಕರು ಪ್ರತಿಕ್ರಿಯಿಸಿ, ತಾವು ಆರ್‌ಟಿಎಯಿಂದ 18 ಬಸ್‌ಗಳಿಗೆ ಸ್ಟೇಟ್‌ಬ್ಯಾಂಕ್‌ವರೆಗೆ ಅವಕಾಶ ನೀಡುವುದನ್ನು ಒಪ್ಪಲಾರೆವು ಎಂದು ಆಕ್ಷೇಪಿಸಿದರು. ‘‘1991ರಿಂದ ಸ್ಟೇಟ್‌ಬ್ಯಾಂಕ್‌ವರೆಗೆ ಸುಮಾರು 600ಕ್ಕೂ ಅಧಿಕ ಬಸ್‌ಗಳಿಗೆ ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದರೂ ಅದನ್ನು ಪುರಸ್ಕರಿಸಲಾಗಿಲ್ಲ. ನರ್ಮ್ ಯೋಜನೆಯಡಿ ನಗರದಿಂದ ದೂರದ ಮುಡಿಪುವರೆಗೆ ಬಸ್ ಹಾಕಿರುವುದು ಒಂದು ತಂತ್ರ ಎಂದರು.

ತಿಂಗಳಲ್ಲಿ ಬಸ್‌ಗಳ ಓಡಾಟ: ಕೆಎಸ್ಸಾರ್ಟಿಸಿ

ಕೆಎಸ್ಸಾರ್ಟಿಸಿಯವರಿಗೆ ನೀಡಲಾಗಿರುವ ಪರವಾನಿಗೆಗಳಲ್ಲೇ ಕೆಲವು ಕಡೆ ಬಸ್‌ಗಳನ್ನು ಓಡಿಸುತ್ತಿಲ್ಲ. ಹಾಗಿರುವಾಗ ನರ್ಮ್ ಬಸ್‌ಗಳನ್ನು ಅವರು ಯಾವಾಗ ಆರಂಭಿಸುವುದು ಎಂದು ಕೆಲ ಖಾಸಗಿ ಬಸ್ ಮಾಲಕರು ಸಭೆಯಲ್ಲಿ ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಸಾರ್ಟಿಸಿ ಪರ ವಕೀಲ ರಾಜೇಶ್ ಶೆಟ್ಟಿ, ಆರ್‌ಟಿಒದಿಂದ ಬಸ್‌ಗಳಿಗೆ ಸಮಯದ ವೇಳಾಪಟ್ಟಿ (ಟೈಮಿಂಗ್ಸ್)ಯನ್ನು ನೀಡಿದ ಒಂದು ತಿಂಗಳಲ್ಲಿ ಬಸ್‌ಗಳು ನಗರದಲ್ಲಿ ಸಂಚರಿಸಲಿವೆ ಎಂದು ಭರವಸೆ ನೀಡಿದರು.

ಪರವಾನಿಗೆ ಪಡೆದ 18 ನರ್ಮ್ ಬಸ್‌ಗಳು:

ನರ್ಮ್ ಯೋಜನೆಯಡಿ ನಗರದ ವಿವಿಧ ಕಡೆಗಳಿಗೆ ಸ್ಟೇಟ್‌ಬ್ಯಾಂಕ್‌ವರೆಗೆ 18 ಸರಕಾರಿ ಸಿಟಿಬಸ್‌ಗಳಿಗೆ ಆರ್‌ಟಿಎ ಸಭೆಯಲ್ಲಿ ಪರವಾನಿಗೆ ಮಂಜೂರಾಗಿದೆ. ಅವುಗಳು ಈ ಕೆಳಗಿನಂತಿವೆ.

ಗುರುಪುರ- ಕೈಕಂಬ(ವಯಾ ಮಲ್ಲಿಕಟ್ಟೆ), ಮೂಡುಶೆಡ್ಡೆ(ಮಲ್ಲಿಕಟ್ಟೆ), ಪಿಲಿಕುಳ (ಮಲ್ಲಿಕಟ್ಟೆ) , ಕಾಟಿಪಳ್ಳ (ಹೊನ್ನಕಟ್ಟೆ) , ಮಂಗಳಪೇಟೆ(ಕಾನ), ಕಾಟಿಪಳ್ಳ-ಕೈಕಂಬ (ಜನತಾ ಕಾಲನಿ), ಶಕ್ತಿನಗರ (ನಂತೂರು) , ಕುಂಜತ್ತಬೈಲು (ರಥಬೀದಿ- ಕೂಳೂರು), ಕುಂಜತ್ತಬೈಲ್(ಕಾವೂರು) , ತಲಪಾಡಿ- ಬೋಂದೇಲ್ (ಸ್ಟೇಟ್‌ಬ್ಯಾಂಕ್) , ವಾಮಂಜೂರು (ಪಚ್ಚನಾಡಿ) , ಮುಡಿಪು (ಮಡ್ಯಾರ್) , ಮುಡಿಪು (ದೇರಳಕಟ್ಟೆ), ಸೋಮೇಶ್ವರ (ಉಳ್ಳಾಲ) , ಬಜಾಲ್ (ಪಡೀಲ್) , ಫೈಸಲ್ ನಗರ/ ಜಲ್ಲಿಗುಡ್ಡೆ(ಪಡೀಲ್) , ಗಣೇಶ್‌ಪುರ (ರಥಬೀದಿ- ಕೃಷ್ಣಾಪುರ), ಕಿನ್ಯಾ(ಕೆ.ಪಿ. ರಸ್ತೆ).

ಸಾರ್ವಜನಿಕರ ಪರವಾದ ಮಂಡಿಸಿದ ನ್ಯಾಯವಾದಿ:

ಆರ್‌ಟಿಎ ಸಭೆಯಲ್ಲಿ ಸಾರ್ವಜನಿಕರ ಪರವಾಗಿ ನ್ಯಾಯವಾದಿ ಮಯೂರ ಕೀರ್ತಿ ವಾದ ಮಂಡಿಸುವ ಮೂಲಕ ಗಮನಸೆಳೆದರು.

‘‘ಸ್ಟೇಟ್‌ಬ್ಯಾಂಕ್‌ನಿಂದಲೇ ನರ್ಮ್ ಬಸ್‌ಗಳಿಗೆ ಅವಕಾಶ ನೀಡಬೇಕೆಂದು ಸಾರ್ವಜನಿಕರ ಬೇಡಿಕೆ. ಮುಡಿಪುವಿನಿಂದ ನಗರದೊಳಗೆ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಸ್ಥರು ಪ್ರಯಾಣಿಸುತ್ತಿದ್ದು, ಅಲ್ಲಿಯ ಜನರಿಗೆ ಇನ್ನೂ ಹೆಚ್ಚಿನ ಬಸ್‌ಗಳ ಅಗತ್ಯವಿರುವ ಬಗ್ಗೆ ಈಗಾಗಲೇ ಸಾರ್ವಜನಿಕರು ಪ್ರಾಧಿಕಾರಕ್ಕೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದಾರೆ. ಇದನ್ನು ಪುರಸ್ಕರಿಸಬೇಕು’’ ಎಂದು ಅವರು ವಾದಿಸಿದರು.

35 ಬಸ್‌ಗಳಿಗೆ ಸ್ಟೇಟ್‌ಬ್ಯಾಂಕ್ ಪ್ರವೇಶ ನೀಡಲು ಆಗ್ರಹ

ಸಾರ್ವಜನಿಕರ ಪರವಾಗಿ ಮಾತನಾಡಿದ ಮಂಗಳೂರು ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್, ‘‘ಖಾಸಗಿಯವರು ಒಳ್ಳೆಯ ಸೇವೆ ನೀಡಿದ್ದರೂ ಜನ ಸರಕಾರಿ ಬಸ್‌ಗಳಿಗೆ ಬೇಡಿಕೆ ಸಲ್ಲಿಸುತ್ತಿರುವ ಬಗ್ಗೆ ಪ್ರಾಧಿಕಾರ ಗಮನಹರಿಸಬೇಕಿದೆ. ನರ್ಮ್ ಯೋಜನೆಯಡಿ ನಗರಕ್ಕೆ ಮಂಜೂರಾಗಿರುವ 35 ಬಸ್‌ಗಳಿಗೂ ಸ್ಟೇಟ್‌ಬ್ಯಾಂಕ್‌ಗೆ ಪರವಾನಿಗೆ ನೀಡಬೇಕು’’ ಎಂದು ಮನವಿ ಮಾಡಿದರು.

ಡಿವೈಎಫ್‌ಐ ಮುಖಂಡ ಬಿ.ಕೆ. ಇಮ್ತಿಯಾಝ್ ಕೂಡಾ ಸಾರ್ವಜನಿಕರ ಪರ ಮಾತನಾಡುತ್ತಾ, ನರ್ಮ್ ಯೋಜನೆಯ ಎಲ್ಲಾ ಬಸ್‌ಗಳಿಗೆ ಸ್ಟೇಟ್‌ಬ್ಯಾಂಕ್‌ಗೆ ಪರವಾನಿಗೆ ನೀಡಬೇಕೆಂದರು. ಇಸ್ಮಾಯೀಲ್, ಸಂತೋಷ್ ಬಜಾಲ್ ಮತ್ತಿತರರೂ ಇದಕ್ಕೆ ದನಿಗೂಡಿಸಿದರು.

ವರದಿ ಕೃಪೆ : ವಾಭಾ

Write A Comment