ಹೊಸದಿಲ್ಲಿ, ಆ.23: ಏಶ್ಯದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ, ಮಹಾರಾಷ್ಟ್ರದ ಲಾಸಲ್ಗಾಂವ್ನಲ್ಲಿ ಈರುಳ್ಳಿಯ ಸಗಟು ದರವು ಕೆಜಿಗೆ ರೂ. 57ಕ್ಕೇರಿದೆ. ಇದರಿಂದಾಗಿ ದೇಶದ ಹೆಚ್ಚಿನ ಭಾಗಗಳಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟದ ಬೆಲೆ ಇನ್ನಷ್ಟು ಏರುವ ಸಾಧ್ಯತೆಯಿದ್ದು, ಗ್ರಾಹಕರಿಗೆ ಕಣ್ಣೀರು ತರಿಸಿದೆ.
ದರಸೂಕ್ಷ್ಮ ದಿಲ್ಲಿ ಹಾಗೂ ದೇಶದ ಇತರ ಕೆಲವು ಭಾಗಗಳ ಮಾರುಕಟ್ಟೆಗಳಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟದ ಬೆಲೆ ಉತ್ಪನ್ನದ ಗುಣಮಟ್ಟವನ್ನಾಧರಿಸಿ ಕೆಜಿಗೆ ರೂ. 80ರ ವರೆಗೇರಿದೆ.
ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ (ಎನ್ಎಚ್ಆರ್ಡಿಎಫ್) ಮಾಹಿತಿಯಂತೆ, ಲಾಸಲ್ಗಾಂವ್ನಲ್ಲಿ ಶುಕ್ರವಾರ ಕೆಜಿಗೆ ರೂ. 55 ಇದ್ದ ಈರುಳ್ಳಿಯ ಸಗಟು ಬೆಲೆ, ಶನಿವಾರ ರೂ. 57ಕ್ಕೇರಿದೆ.ಆದಾಗ್ಯೂ, ಮುಂಬೈನಲ್ಲಿ ರೂ. 50 ಹಾಗೂ ಕೋಲ್ಕತಾದಲ್ಲಿ ರೂ. 52ಕ್ಕೆ ಹೋಲಿಸಿದರೆ ರಾಜಧಾನಿಯಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟದ ಬೆಲೆ ಕಿ.ಗ್ರಾಂಗೆ ರೂ. 66ರಷ್ಟಿದೆಯೆಂದು ಸರಕಾರದ ಅಂಕಿ-ಅಂಶ ಪ್ರತಿಪಾದಿಸಿದೆ.
ಸರಕಾರದ ಅನೇಕ ಕ್ರಮಗಳ ಹೊರತಾಗಿಯೂ, ದೇಶೀಯ ಆವಕದ ಕೊರತೆಯಿಂದಾಗಿ ಪೂರೈಕೆಯಲ್ಲಿ ಬಿಗಿ ಹಿಡಿತದಿಂದಾಗಿ ಕಳೆದ ಕೆಲವು ವಾರಗಳಿಂದ ಈರುಳ್ಳಿಯ ಸಗಟು ಹಾಗೂ ಚಿಲ್ಲರೆ ಮಾರಾಟ ಬೆಲೆಗಳು ಗಗನಗಾಮಿಯಾಗುತ್ತಿವೆ.
ಈ ಸಲ ಮುಂಗಾರು ಮಳೆಯ ಕೊರತೆಯಿಂದಾಗಿ ನೀರುಳ್ಳಿಯ ಖಾರೀಫ್ ಬೆಳೆ ಕುಸಿಯುವ ಸಾಧ್ಯತೆಯು ಬೆಲೆಯೇರಿಕೆಗೆ ಇನ್ನಷ್ಟು ಕೊಡುಗೆ ನೀಡಿದೆ.
ಕೇಂದ್ರಿಯ ಸಂಸ್ಥೆ ಎಸ್ಎಫ್ಸಿಎ, ಬೆಲೆ ಸ್ಥಿರತೆ ನಿಧಿಯಿಂದ ಸುಮಾರು 8 ಸಾವಿರ ಟನ್ ಈರುಳ್ಳಿ ಖರೀದಿಸಿದ್ದರೂ ದಿಲ್ಲಿಯ ಬಳಕೆದಾರರಿಗೆ ಪ್ರಯೋಜನ ಲಭಿಸಿಲ್ಲ. ಎಸ್ಎಫ್ಸಿಎ, ಮ ದರ್ ಡೈರಿ ಹಾಗೂ ದಿಲ್ಲಿ ಮಿಲ್ಕ್ ಸ್ಕೀಂ ಬೂತ್ಗಳ ಮೂಲಕ ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ಪೂರೈಸುತ್ತಿವೆ. ಮದರ್ ಡೈರಿಯ ಸಫಲ್ ಮಳಿಗೆಯಲ್ಲಿ ಈರುಳ್ಳಿಯನ್ನು ಕಿ.ಗ್ರಾಂ.ಗೆ ರೂ. 40ರಂತೆ ಮಾರಲಾಗುತ್ತಿದೆ. ಇದೇ ವೇಳೆ 100 ಡಿಎಂಎಸ್ ಮಳಿಗೆಗಳು ಕಿ.ಗ್ರಾಂಗೆ ರೂ. 35ರಂತೆ ಮಾರುತ್ತಿವೆ.
ದಿಲ್ಲಿ ಸರಕಾರವೂ 280 ಕಡೆಗಳಲ್ಲಿ ಈರುಳ್ಳಿಯನ್ನು ಕಿ.ಗ್ರಾಂಗೆ ರೂ. 30ರಂತೆ ಭಾರೀ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದೆ. ಆದರೂ, ಬೆಲೆ ಏರುತ್ತಲೇ ಸಾಗಿದೆ.
