ಕನ್ನಡ ವಾರ್ತೆಗಳು

ಆ.29ರಂದು ಮಣಿಪಾಲದಲ್ಲಿ ತುಳು ಚಿತ್ರ ಸಂಭ್ರಮ – ಕನ್ನಡ ಚಲನಚಿತ್ರಗಳ ಕುರಿತು ವಿಚಾರ ಸಂಕಿರಣ

Pinterest LinkedIn Tumblr

Rajndr_babu_meet_4

ಮಂಗಳೂರು, ಆ.23: ಕರ್ನಾಟಕ ಚಲನಚಿತ್ರ ಅಕಾಡಮಿ, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಮತ್ತು ವಾರ್ತಾ ಇಲಾಖೆಗಳ ಸಹಯೋಗದಲ್ಲಿ ಆ.29ರಂದು ಬೆಳಗ್ಗೆ 10:30ಕ್ಕೆ ಮಣಿಪಾಲ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಆಡಿಟೋರಿಯಂನಲ್ಲಿ ಕನ್ನಡ ಚಲನಚಿತ್ರಗಳ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ತರಂಗ ವಾರ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಪೈ ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಎಸ್. ವಿ.ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರ ಸಂಕಿರಣದಲ್ಲಿ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಎಸ್. ಪೈ ‘ಕನ್ನಡ ಚಲನ ಚಿತ್ರಗಳು ಎದುರಿಸುತ್ತಿರುವ ಸವಾಲುಗಳು’ ಕುರಿತ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಲಿರುವರು ಎಂದರು.

ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ನಿರ್ದೇಶಕ ಗೌತಮ್ ಪೈ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಥಾಮಸ್ ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಣಿಪಾಲ ಟ್ಯಾಪ್‌ಮಿ ಸಂಸ್ಥೆಯ ಡೀನ್ ಡಾ.ಗುರುರಾಜ್ ಕಿದಿಯೂರು ವಿಷಯ ಪ್ರವೇಶ ಭಾಷಣ, ಪ್ರಶಾಂತ್ ವಿ.ವೈ ಸಮೀಕ್ಷಾ ವರದಿ ಬಗ್ಗೆ ಮಾತನಾಡಲಿದ್ದಾರೆ. ವಿಚಾರ ಸಂಕಿರಣದಲ್ಲಿ ಹಿರಿಯ ಪತ್ರಕರ್ತರಾದ ಜೋಗಿ, ಸದಾಶಿವ ಶೆಣೈ ಹಾಗೂ ಬಾಲಕೃಷ್ಣ ಪುತ್ತಿಗೆ ಕನ್ನಡ ಚಲನಚಿತ್ರಗಳ- ಅವಲೋಕನ ನಡೆಸಲಿದ್ದಾರೆ ಎಂದು ರಾಜೇಂದ್ರ ಸಿಂಗ್ ಬಾಬು ವಿವರಿಸಿದರು.

Rajndr_babu_meet_1 Rajndr_babu_meet_2 Rajndr_babu_meet_3

ತುಳು ಚಿತ್ರ ಸಂಭ್ರಮ

ಇದೇ ಸಂದರ್ಭ ತುಳು ಚಿತ್ರರಂಗ 50 ಚಲನಚಿತ್ರಗಳ ಮೈಲಿಗಲ್ಲನ್ನು ದಾಟಿದ ಸಂಭ್ರಮಕ್ಕಾಗಿ ಕರ್ನಾಟಕ ಚಲನಚಿತ್ರ ಅಕಾಡಮಿ, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಮತ್ತು ವಾರ್ತಾ ಇಲಾಖೆಗಳ ಸಹಯೋಗದಲ್ಲಿ ಆ.29ರಂದು ಸಂಜೆ 5.00ಕ್ಕೆ ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ‘ತುಳು ಚಿತ್ರ ಸಂಭ್ರಮ’ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಎಸ್. ವಿ.ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ತುಳು ಚಿತ್ರ ಸಂಭ್ರಮವನ್ನು ಉದ್ಘಾಟಿಸಲಿರುವರು. ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಮೋಹನ್ ಆಳ್ವ ಅವರು ತುಳು ಭಾಷೆಯ ಸುವರ್ಣ ಚಿತ್ರಗಳು ಪುಸ್ತಕ ಕುರಿತು ಮಾತನಾಡಲಿದ್ದಾರೆ. ಸಂಗೀತ ನಿರ್ದೇಶಕ ಗುರುಕಿರಣ್ ತುಳು ಚಿತ್ರ ಸಂಭ್ರಮದ ಅವಲೋಕನ ನಡೆಸಲಿದ್ದಾರೆ. ಉಳಿದಂತೆ ಸಚಿವರು, ಸಂಸದರು,ಶಾಸಕರು, ಗಣ್ಯರು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಬಾಬು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿಯ ರಿಜಿಸ್ಟ್ರಾರ್ ಎಚ್.ಬಿ.ದಿನೇಶ್, ಮಣಿಪಾಲ್ ಟ್ಯಾಪ್‌ಮಿ ಡೀನ್ ಡಾ.ಗುರುರಾಜ್ ಕಿದಿಯೂರ್ ಉಪಸ್ಥಿತರಿದ್ದರು.

ಕನ್ನಡ ಚಲನಚಿತ್ರರಂಗದ ಏಳಿಗೆಗೆ ವಿವಿಧ ಯೋಜನೆ ಸಿದ್ದ :

ಪರಭಾಷಾ ಚಿತ್ರಗಳ ಹಾವಳಿಯಿಂದ ಸೊರಗುತ್ತಿರುವ ಕನ್ನಡ ಚಲನಚಿತ್ರರಂಗದ ಏಳಿಗೆಗೆ ವಿವಿಧ ಯೋಜನೆಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಸಿದ್ಧಗೊಳಿಸುತ್ತಿದೆ ಎಂದು ಎಸ್‌.ವಿ ರಾಜೇಂದ್ರಸಿಂಗ್ ಬಾಬು ಹೇಳಿದ್ದಾರೆ.

ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಪರಭಾಷಾ ಚಿತ್ರಗಳು ಏಕಕಾಲದಲ್ಲಿ ಕರ್ನಾಟಕದಲ್ಲೂ ಬಿಡುಗಡೆಯಾಗುತ್ತಿರುವುದರಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮಾದರಿಯನ್ನು ಅನುಸರಿಸಬೇಕೆಂದರು.

ಈಗಾಗಲೇ ಅಕಾಡೆಮಿಯ ನಿಯೋಗವು ಕೇರಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಕೇರಳದಲ್ಲಿ ಪರಭಾಷಾ ಚಿತ್ರಗಳ ಮೇಲೆ ಪ್ರತೀ ಟಿಕೆಟ್ನಲ್ಲಿ ರೂ.3ರಿಂದ 5ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ವರ್ಷಕ್ಕೆ ಸುಮಾರು 10 ಕೋಟಿ ಸಂಗ್ರಹವಾಗುತ್ತದೆ, ಈ ಮೊತ್ತಕ್ಕೆ ರಾಜ್ಯ ಸರಕಾರ 10 ಕೋಟಿ ನೀಡಿ ಆ ಮೊತ್ತವನ್ನು ಚಿತ್ರಮಂದಿರ ನಿರ್ಮಾಣ, ಸಹಾಯಧನಕ್ಕಾಗಿ ಬಳಸಲಾಗುತ್ತಿದೆ.

ಈ ರೀತಿ ಕೇರಳದಲ್ಲಿ ಮಲ್ಟಿಪ್ಲೆಕ್ಸ್ ಮಾದರಿಯಲ್ಲಿ ಏಕತೆರೆಯ 13 ಚಿತ್ರಮಂದಿರಗಳನ್ನು ತೆರೆಯಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 25 ಚಿತ್ರಮಂದಿರ ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರವೇಶ ಶುಲ್ಕ ರೂ.80 ವಿಧಿಸಲಾಗಿದೆ. ಈ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಿದರೆ ಸಾಮಾನ್ಯ ಜನ ಕೂಡಾ ಚಿತ್ರಮಂದಿರಗಳತ್ತ ಬರಲು ಸಾಧ್ಯವಾಗಲಿದೆ ಎಂದರು.

ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ದುಬಾರಿ ಟಿಕೆಟ್ ದರ, ತಿಂಡಿ, ತೀರ್ಥಗಳಿಂದ ಸಾಮಾನ್ಯ ಜನರಿಂದ ಮಲ್ಟಿಪ್ಲೆಕ್ಸ್ ದೂರವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಮುಂಗಡಪತ್ರದಲ್ಲಿ ಘೋಷಿಸಿದಂತೆ ಕನ್ನಡ ಭಾಷೆ ಸೇರಿದಂತೆ ಕರ್ನಾಟಕ ಪ್ರಾದೇಶಿಕ ಭಾಷೆಗಳಿಗಾಗಿ ಸೀಮಿತವಾಗಿ 300 ಜನತಾ ಚಿತ್ರಮಂದಿರಗಳನ್ನು ನಿರ್ಮಿಸುವ ಯೋಜನೆ ಜಾರಿಗೆ ಬರಲಿದೆ.

ಇದರಿಂದ ಚಿತ್ರಮಂದಿರಗಳ ಸಮಸ್ಯೆಗೆ ಪರಿಹಾರ ಸಿಗಲಿದೆ. ಜತೆಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರಮುಖ ವೇಳೆಯಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ತಿಳಿಸಿದರು.

ಚಲನಚಿತ್ರ ಅಕಾಡೆಮಿಯಿಂದ ನಡೆಯುತ್ತಿರುವ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮವನ್ನು ಮಂಗಳೂರಿನಲ್ಲೂ ನಡೆಸಲಾಗುವುದು, ಮಂಗಳೂರಿನಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣ, ಕನ್ನಡ, ತುಳು ಚಲನಚಿತ್ರೋತ್ಸವ, ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕ್ರ್ಯಾಶ್ ಕೋರ್ಸ್ ಮೊದಲಾದ ಯೋಜನೆಗಳಿವೆ ಎಂದು ತಿಳಿಸಿದರು.

Write A Comment