ಹೈದರಾಬಾದ್(ಪಿಟಿಐ):1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ಗೆ ಗಲ್ಲು ಕಾಯಂಗೊಂಡಿರುವ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೈದರಾಬಾದ್ನಲ್ಲಿ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಶಿಕ್ಷೆಯಿಂದ ವಿನಾಯ್ತಿ ಕೋರಿ ಮೆಮನ್ ಸಲ್ಲಿಸಿದ್ದ ಎರಡನೇ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿತ್ತು.
ಮೆಮನ್ನನ್ನು ಜುಲೈ 30ರಂದು ಬೆಳಿಗ್ಗೆ 7 ಗಂಟೆಗೆ ನಾಗಪುರ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸಿದೆ.
‘ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿತ್ತು. ಅದರಂತೆ ಭದ್ರತೆ ಕಲ್ಪಿಸಲಾಗಿದೆ’ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಎಂ. ಮಹೇಂದ್ರ ರೆಡ್ಡಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
