ರಾಷ್ಟ್ರೀಯ

ಅನ್ನದಾತನ ಈ ಸಾವು ನ್ಯಾಯವೇ…?

Pinterest LinkedIn Tumblr

Annadata-Karnatak-Former--S “ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಿ ನಮ್ಮನ್ನು ಕಾಪಾಡಿ ಪ್ರಭೂ…” ದೇಶದ ಶ್ರೀಮಂತ ರಾಜ್ಯ ಮಹಾರಾಷ್ಟ್ರದ ಕೆಲ ರೈತರು, ರೈತ ಮಹಿಳೆಯರು ಅಲ್ಲಿನ ಸರ್ಕಾರಕ್ಕೆ ಬರೆದುಕೊಂಡಿರುವ ಮನವಿ ಪತ್ರದ ಒಕ್ಕಣೆಯಿದು.

ಇದೇನೂ ಹಳೆ ಕಥೆ ಅಲ್ಲ. ನಿನ್ನೆ- ಮೊನ್ನೆಯ ಘಟನೆ. ಕರುಳಿರಿಯುವ ಈ ಒಂದು ವಾಕ್ಯದಲ್ಲಿ ಅದೆಂತಹ ಘನಘೋರ ದುರಂತದ ಮೃತ್ಯು ಛಾಯೆ ಆವರಿಸಿದೆ. ಈ ದೇಶದ ಅನ್ನದಾತನ ದಾರುಣ ಸ್ಥಿತಿಯನ್ನು ಬಣ್ಣಿಸಲು, ಅರ್ಥ ಮಾಡಿಕೊಳ್ಳಲು ಈ ಒಂದು ವಾಕ್ಯವೇ ಸಾಲದೆ? ಪುಟಗಟ್ಟಲೆ ಬರೆದು ವಿವರಿಸಬೇಕಾದ ಕ್ರೂರ ಸತ್ಯವನ್ನು ಈ ಒಂದು ವಾಕ್ಯ ಅದೆಷ್ಟು ನಿಖರವಾಗಿ ಅನಾವರಣಗೊಳಿಸುತ್ತದೆ? ಆದರೆ ಅದನ್ನರಿಯುವ ಹೃದಯ, ಅದರೊಳಗೊಂದಷ್ಟು ಮಾನವ ಸಹಜ ಅಂತಃಕರಣ ಇರಬೇಕಷ್ಟೆ. ದೇಶದ ಬೆನ್ನೆಲುಬು ಎಂದೇ ಬಿಂಬಿಸುವ ಅನ್ನದಾತನ ದುರಂತ ಕಥೆಯ ಮುನ್ನುಡಿ ಮತ್ತು ಕಠೋರ ಸತ್ಯ ಇದು. ಆ ಬೆನ್ನೆಲುಬಿಗೇ ಹೀಗೆ ಕ್ಯಾನ್ಸರ್ ತಗುಲಿಕೊಂಡರೆ ದೇಶ ಇನ್ನೆಂದಾದರೂ ಎದ್ದು ನೆಟ್ಟಗೆ ನಿಲ್ಲಲು ಸಾಧ್ಯವೇ?

ಈ ದೇಶದ ರೈತ ಇನ್ನೂ ಎಷ್ಟು ದಿನ ಕಾಯಬೇಕು ಆ ಅಚ್ಛೇ ದಿನ್ ಭಾಗ್ಯಕ್ಕೆ…?

ದೇಶದಲ್ಲಿ ಸಾಲು ಸಾಲಾಗಿ ರೈತರು ಸಾಯುತ್ತಿದ್ದಾರೆ. ಅವರ ಕುಟುಂಬಗಳು ಬೀದಿಗೆ ಬರುತ್ತಿವೆ. ಅನ್ನದಾತ ಹೊಟ್ಟೆಗೆ ಅನ್ನವಿಲ್ಲದೆ ಸಾಲದ ಶೂಲ ಏರುತ್ತಿದ್ದಾನೆ. ಇದು ಇಂದಿನ ನಮ್ಮ ರೈತ ಸಮುದಾಯದ ಸ್ಥಿತಿಗತಿಗೆ ಹಿಡಿದ ಕನ್ನಡಿ. ವಿಶೇಷವೆಂದರೆ ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ದೇಶಕ್ಕೆ  ಅಗ್ರ ಸ್ಥಾನ. ಕರ್ನಾಟಕದಲ್ಲಿ ರೈತ: ವ್ಯಂಗ್ಯವೆಂದರೆ, ನೇಗಿಲ ಯೋಗಿ ಎಂಬ ಹಾಡನ್ನು ರಾಜ್ಯ ಸರ್ಕಾರಗಳು ನಾಡಗೀತೆಯಂತೆ ಹಾಡಲು ಆದೇಶ ನೀಡಿರುವುದು. ಕರ್ನಾಟಕದಲ್ಲಿ ಅತಿವೃಷ್ಟಿ , ಅನಾವೃಷ್ಟಿ , ಕೊಳವೆ ಬಾವಿಯಲ್ಲಿ ನೀರಿನ ವೈಫಲ್ಯ, ಬೆಳೆಗೆ ರೋಗ ಮುಂತಾದ ಕಾರಣಗಳಿಂದಾಗಿ ರೈತ ಮಕ್ಕಳು ಕಂಗೆಟ್ಟು ಹೋಗಿದ್ದಾರೆ.

ಅಲ್ಲಿ ರೈತ ಸಾಯುತ್ತಿದ್ದರೆ ಇಲ್ಲಿ ರೈತ ಗೀತೆ ಮೊಳಗುತ್ತಿದೆ. ಇದು ವ್ಯಂಗ್ಯದ ಪರಮಾವಧಿ. ರೈತರಿಗೆ ನಾವು ಮಾಡುತ್ತಿರುವ ಅಪಮಾನ. ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ ಎಂಬ ಬೋಧವಾಕ್ಯವೇನೋ ಸರಿಯೇ. ಆದರೆ ಸಾಲದಲ್ಲಿ ಸಿಲುಕಿ ದಡ ಹತ್ತಲಾರದ ಅಮಾಯಕ ರೈತರು ಸಾವಿಗೆ ಶರಣಾಗುತ್ತಿರುವುದು ಬಿಟ್ಟರೆ ಬೇರೆ ಮಾರ್ಗ ಎಲ್ಲಿದೆ ಎಂಬಂತಹ ಸ್ಥಿತಿಗೆ ರೈತರು ತಲುಪಿಯಾಗಿದೆ. ಅವರಿಗೀಗ ಬೇಕಾಗಿರುವುದು ಉಪದೇಶವಲ್ಲ ನೆರವಿನ ಹಸ್ತ.
ಕಳೆದ ಮೂರೇ ದಿನದ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 10-15

ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದರೆ ನಿಜಕ್ಕೂ ನಮ್ಮ ಸರ್ಕಾರಗಳು ಸತ್ತಿವೆಯೋ ಬದುಕಿವೆಯೋ ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ.
ಸಾವಿಗೆ ಶರಣಾದ ರೈತರ ಕುಟುಂಬದ ಮಕ್ಕಳು ಹೆಂಗಸರ ಗೋಳನ್ನು ಕಂಡರೆ ಎಂಥವರ ಕರುಳೂ ಬಾಯಿಗೆ ಬರುತ್ತದೆ.

ಇದಕ್ಕೆ ಪರಿಹಾರ ಏನು? ಕೊನೆ ಎಂದು…?
160ಕ್ಕೂ ಹೆಚ್ಚು ಬಲಿ: ಕಳೆದ ಕೆಲ ವರ್ಷಗಳಲ್ಲಿ ಈ ಕರ್ನಾಟಕ ನೂರಾರು ರೈತ ಮಕ್ಕಳ ಸಾವಿಗೆ ಸಾಕ್ಷಿಯಾಗಿದೆ. ಅದರಲ್ಲಿ ಕೇವಲ ಎರಡು ವರ್ಷಗಳಿಂದೀಚೆಗೆ ಘಟಿಸಿರುವ ರೈತರ ಸರಣಿ ಸಾವುಗಳು ಕರ್ನಾಟಕದ ಮಾನ ಹರಾಜು ಹಾಕಿವೆ. ಇದು ನಿಷ್ಠುರ ಸತ್ಯ.
2013ರ ಮೇ ತಿಂಗಳಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರೈತರಲ್ಲಿ ನಿಜಕ್ಕೂ ಏನೋ ಭರವಸೆಯ ಕಿರಣವೊಂದು ಮೂಡಿತ್ತು. ಆದರೆ ಆ ಭರವಸೆ ಕೆಲವೇ ದಿನಗಳಲ್ಲಿ ಹುಸಿಯಾದಂತಾಗಿದೆ. ರೈತರ ಸಾವು ನಿಲ್ಲಲಿಲ್ಲ. ಅವರ ಹೆಂಡತಿ-ಮಕ್ಕಳ ಗೋಳು ತಪ್ಪಲಿಲ್ಲ .

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಮುಂಗಾರು ಅಧಿವೇಶನದ ವೇಳೆ ರಾಜ್ಯದ ಕೃಷಿ ಸಚಿವ ಕೃಷ್ಣ ಭೈರೇಗೌಡರು ಖುದ್ದಾಗಿ ನೀಡಿದ (ಜು.7) ಮಾಹಿತಿಯಂತೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿಯೇ 139 ಮಂದಿ ರೈತರು  ಸಾವಿಗೆ ಶರಣಾಗಿದ್ದಾರೆ. ಇದು ಜು.7ರವರೆಗಿನ ಚಿತ್ರಣ ಇನ್ನ್ನೂ ಭೀಕರ ಎಂದರೆ ಜು.7ರಿಂದೀಚೆಗೆ, ಒಂದೇ ವಾರದಲ್ಲಿ 20ಕ್ಕೂ ಹೆಚ್ಚು ರೈತರು ಸಾಲದ ಅಗ್ನಿಕುಂಡದಲ್ಲಿ ಬೆಂದು ಹೋಗಿದ್ದಾರೆ. ಕಬ್ಬು, ಹತ್ತಿ, ಶುಂಟಿ ಏನೆಲ್ಲ ಬೆಳೆದ ರೈತರು ಈ ಮಾರಣ ಹೋಮದಲ್ಲಿ ಬಲಿಪಶುಗಳಾಗಿದ್ದಾರೆ.

2012-13ರ ಸಾಲಿನಲ್ಲಿ 77 ಮಂದಿ ರೈತರು ಆತ್ಮಹತ್ಯೆಗೆ ಶರಣಾದರೆ, 2013-14ರಲ್ಲಿ 58 ಮಂದಿ, 2014-15ರಲ್ಲಿ 48 ಮಂದಿ ಹಾಗೂ 2015ರ ಆರಂಭದಿಂದ ಇಲ್ಲಿಯವರೆಗೆ 80ಕ್ಕೂ ಹೆಚ್ಚು ಸಂಖ್ಯೆಯ ರೈತರು ಸಾವಿನ ಮನೆ ಹೊಕ್ಕಿದ್ದಾರೆ.
ಹಾಗಾದರೆ ಈ ಸರ್ಕಾರಗಳು ಏನು ಮಾಡುತ್ತಿವೆ. ಸತ್ತ ರೈತನ ಕುಟುಂಬಕ್ಕಷ್ಟು ಪರಿಹಾರ ನೀಡಿ ಕೈ ತೊಳೆದುಕೊಂಡು ಬಿಟ್ಟರಾಯಿತೆ? ಇಷ್ಟೇನಾ ಈ ಸರ್ಕಾರದ ಜವಾಬ್ದಾರಿ?

ಇನ್ನು ವಿರೋಧ ಪಕ್ಷಗಳಾದರೂ ಏನು ಮಾಡುತ್ತಿವೆ, ರೈತರು, ರೈತರು ಅಂತ ಪರ ಕೂಗಾಡಿ, ಗದ್ದಲ ಎಬ್ಬಿಸಿದರೆ ಸಮಸ್ಯೆಗಳು ಬಗೆಹರಿದವೇ? ಸರ್ಕಾರ ಪರಿಹಾರ ಕೊಡುವುದು, ವಿಪಕ್ಷಗಳು ಬೊಬ್ಬೆ ಹೊಡೆಯುವುದು ಇಷ್ಟಕ್ಕೇನಾ ಜನ ನಮ್ಮ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದು, ಇಷ್ಟಾದರೂ ಒಬ್ಬನೇ ಒಬ್ಬ ಜನ ನಾಯಕ ಪ್ರಾಮಾಣಿಕನಾಗಿ ಮೃತ ರೈತನ ಮನೆಗೆ ಹೋಗಿ, ಸತ್ತ ರೈತನ  ಅನಾಥ ಮಕ್ಕಳಿಗೆ ಎದೆತುಂಬಿ ಸಾಂತ್ವನ ಹೇಳಿದ ಉದಾಹರಣೆ ಇದೆಯೇ?

ಮೃತ ರೈತನಿಗಾಗಿ ಅವನ ವಿಧವೆ ಪತ್ನಿಗಾಗಿ, ಅನಾಥ ಮಕ್ಕಳಿಗಾಗಿ ಯಾವೊಬ್ಬ ರಾಜಕಾರಣಿಯ ಕಣ್ಣಲ್ಲಿ ಎರಡು ಹನಿ ಕಂಬನಿ ಮಿಡಿದಿವೆಯೇ? ರೈತರ ಸಾವಿನಲ್ಲೂ ಇವರ ದರಿದ್ರ ರಾಜಕೀಯವೇ?

ನಾಚಿಕೆಯಾಗಬೇಕು. ರೋಗವನ್ನು ತಡೆಯಿರಿ:

ರೋಗ ಬಂದ ಮೇಲೆ ಔಷಧಕ್ಕೆ, ಚಿಕಿತ್ಸೆಗೆ ಪರದಾಡುವುದನ್ನೇ ಕಾಯಕ ಮಾಡಿಕೊಳ್ಳದೆ, ಕಾಯಿಲೆಗಳೇ ಬರದಂತೆ ತಡೆಯುವ ಬಗ್ಗೆ ಸರ್ಕಾರಗಳು ಮುನ್ನೆಚ್ಚರಿಕೆಯಿಂದ ಕೆಲಸ ಮಾಡಬೇಕು. ಈ ರಾಜಕಾರಣಿಗಳೆಲ್ಲ ಹಳ್ಳಿಹಳ್ಳಿಗೆ ತೆರಳಿ ರೈತರ ಜೊತೆ ಸಂವಾದ ನಡೆಸಿ ಅವರ ಸಂಕಷ್ಟಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು. ರೈತರಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು. ಏನಾದರೂ ಹೆಚ್ಚು ಕಡಿಮೆ ಆದರೆ ನೇರವಾಗಿ ಆ ಅಧಿಕಾರಿಯೇ ಹೊಣೆಗಾರನಾಗಬೇಕು. ಕಚೇರಿಗಳಲ್ಲಿ ಕುಳಿತು ಏನು ಮಾಡುತ್ತಿದ್ದಾರೆ, ಸಾವಿರ ಸಾವಿರ ಸಂಬಳ ತಿನ್ನುವ ನಮ್ಮ ಅಧಿಕಾರಿಗಳೆಲ್ಲ?

ಈ ರೀತಿಯ ನೀತಿ ರೂಪಿಸುವ ಮೂಲಕ ಸರ್ಕಾರ ರೈತರಿಗೆ ನೆರವಾಗಬೇಕು.  ಆಡಳಿತ ಯಂತ್ರ, ಸರ್ಕಾರಗಳು ರೈತರ ಬಳಿಗೆ ಹೋಗುವಂತಾಗಬೇಕು, ಅಲ್ಲಿಗೆ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ.
ಯಾಕೆ ಸಿದ್ದರಾಮಯ್ಯ ಸರ್ಕಾರ ಹಾಗೆ ಮಾಡುತ್ತಿಲ್ಲ. ವಿರೋಧ ಪಕ್ಷಗಳೇಕೆ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡುತ್ತಿಲ್ಲ. ಅಮಾಯಕರ ಜೀವಗಳ ಜೊತೆ, ರಾಜಕಾರಣಿಗಳ  ಚೆಲ್ಲಾಟವೇ… ಈ ಸಾವುಗಳು ನ್ಯಾಯವೇ…? ಸರ್ಕಾರ ಉತ್ತರಿಸಲೇಬೇಕು ಈ ಪ್ರಶ್ನೆಗಳಿಗೆಲ್ಲ ಮಹಾಭಾರತದಲ್ಲಿ ನಾರದರು ಧರ್ಮರಾಯನಿಗೆ ರಾಜ ನೀತಿಯ ಬಗ್ಗೆ ಹೇಳುತ್ತಾ, ಬೇಸಾಯ, ರೈತರು, ಸರ್ಕಾರ ಅಥವಾ ರಾಜ ರೈತರನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಬೇಸಾಯ ಮಾಡುವವನೇ ಇಲ್ಲವಾದರೆ ದೇಶದ ಸ್ಥಿತಿ ಏನಾಗುತ್ತದೆ ಎಂಬುದನ್ನು ಅತ್ಯಂತ ಮನೋಜ್ಞವಾಗಿ ವಿವರಿಸುತ್ತಾರೆ. “ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದಾ ಕೃಷಿಯ ಉದ್ಯೋಗಿಸುವ  ಜನವನು ಪಾಲಿಸುವುದಾ ಜನಪದದ ಜಗದಿ ವಸು ತೆರಳುವುದು ವಸುವಿನಿಂ ಸಾ ಧಿಸುವೊಡಾವುದು ಅಸಾಧ್ಯ ಅದರಿಂ
ಕೃಷಿ ವಿಹೀನರ ದೇಶವದು ದುರ್ದೇಶ ಕೇಳೆಂದ.” ಈ ಜಗತ್ತಿನ ಎಲ್ಲ ಚಟುವಟಿಕೆಗಳಿಗೂ ಬೇಸಾಯವೇ ಆಧಾರ. ಕೃಷಿಯಿಂದಲೇ ಸಕಲ ಸಂಪತ್ತು. ಕೃಷಿಯಲ್ಲಿ ತೊಡಗಿರುವ ರೈತರನ್ನು ರಾಜನು ಗೌರವದಿಂದ ಪಾಲಿಸಬೇಕು. ಕೃಷಿಯಿಂದ ಅಷ್ಟೈಶ್ವರ್ಯ, ಇಲ್ಲದಿದ್ದರೆ ಸರ್ವನಾಶ. ಕೃಷಿಯೊಂದಿದ್ದರೆ ಏನೆಲ್ಲ ಸಾಧಿಸಬಹುದು. ಆದ್ದರಿಂದ ಕೃಷಿ, ಕೃಷಿಕರು ಇಲ್ಲದ ದೇಶ ದುರ್ದೇಶ ಅಂದರೆ ದರಿದ್ರದ  ತವರು ಎನ್ನುತ್ತಾರೆ ನಾರದ ಮಹರ್ಷಿ.

ಈಸಬೇಕು ಇದ್ದು ಜೈಸಬೇಕು ಅಣ್ಣಾ, ನೀವು ಆತ್ಮಹತ್ಯೆಗೆ ಮುಂದಾಗುವ ಮುನ್ನ ಒಮ್ಮೆ ಹಿಂದಿರುಗಿ ನೋಡಿ, ನಿಮ್ಮ ನಂತರ ಬೀದಿಗೆ ಬೀಳುವ ನಿಮ್ಮ  ಆ ಅನಾಥ ಮಡದಿ-ಮಕ್ಕಳ ದೀನ ಮುಖಗಳನ್ನೊಮ್ಮೆ ಊಹಿಸಿಕೊಳ್ಳಿ. ಅವರು ಅನುಭವಿಸುವ ಯಾತನೆ, ಅವಮಾನ, ದುಃಖಗಳನ್ನೊಮ್ಮೆ ಕಲ್ಪಿಸಿಕೊಳ್ಳಿ, ಸಾವು ಪರಿಹಾರ ಅಂತ ನೀವು ಹಾಗೆ ಭಾವಿಸಬಹುದು. ಆದರೆ ನಿಮ್ಮ ಕಲ್ಪನೆಯ ಪರಿಹಾರ ಮತ್ತೆ ನೂರಾರು ಸಮಸ್ಯೆಗಳನ್ನು  ಈಯುತ್ತದೆ. ಆ ಸಮಸ್ಯೆಗಳ ಉರುಳಲ್ಲಿ ನಿಮ್ಮವರು ನರಳುತ್ತಾರೆ. ಸಂಯಮವಿರಲಿ, ಆತ್ಮಸ್ಥೈರ್ಯವಿರಲಿ, ಈಸಬೇಕು, ಇದ್ದು ಜೈಸಬೇಕು.

ರೈತರ ಶಾಪ ತಟ್ಟದಿರಲಿ ರೈತರ ಶವಗಳು, ಅವರ ಕುಟುಂಬದವರ ಕನಸುಗಳ ಗೋರಿಯ ಮೇಲೆ ಕಟ್ಟಿದ ಯಾವ ಸಾಮ್ರಾಜ್ಯಗಳೂ ಉಳಿದ ಉದಾಹರಣೆಗಳಿಲ್ಲ. ನಮ್ಮ ಇತಿಹಾಸದಲ್ಲಿ ಸಾಲದ ಸುಳಿಯಲ್ಲಿ ಬಿದ್ದು ಜೀವ ತೆತ್ತ ರೈತರ ಹೆಂಡಿರು-ಮಕ್ಕಳ ಕಣ್ಣೀರಿನಲ್ಲಿ ಎಲ್ಲವನ್ನೂ ಧ್ವಂಸ ಮಾಡಿಬಿಡುವ ಕರಾಳ ಶಕ್ತಿಯಿದೆ. ಎಂತೆಂತಹ ಸೌಧಗಳನ್ನೂ ಉರುಳಿಸುವ ಗುಣ ಅವರ ಬಿಸಿಯುಸಿರಿಗಿದೆ. ಇಡೀ ದೇಶ ಒಂದಾಗಿ  ರೈತರನ್ನು ಕಾಪಾಡಿಕೊಳ್ಳುವ ಪಣ ತೊಡಬೇಕಾಗಿದೆ. ಬನ್ನಿ… ನಿದ್ದೆಯ ಮಬ್ಬಿನಿಂದ ಹೊರಬನ್ನಿ .
-ಚಿಕ್ಕರಸು

Write A Comment