ಕರ್ನಾಟಕ

ಬೆಂಗಳೂರು ವಿವಿ ಮೂರು ಹೋಳು: ವಿಧೇಯಕ ಅಂಗೀಕಾರ

Pinterest LinkedIn Tumblr

Bangalore-VVಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗಗಳನ್ನಾಗಿ ವಿಭಜಿಸುವ ವಿಧೇಯಕವನ್ನು ಶುಕ್ರವಾರ ವಿಧಾನ ಸಭೆ ಅಂಗೀಕರಿಸಿದೆ.

ಬೆಳಗಾವಿಯಲ್ಲಿ ನಡೆದ ಮಳೆಗಾಲದ ಅಧಿವೇಶನದಲ್ಲಿಯೇ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್‌.ವಿ.ದೇಶಪಾಂಡೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-2015 ಮಂಡಿಸಿದ್ದರು.

ಬೆಂಗಳೂರು ವಿವಿಯ ಆಡಳಿತ ಮತ್ತು ಕಾರ್ಯ ನಿರ್ವಹಣೆಯ ಸುಧಾರಣೆ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯದ ಕಾಯ್ದೆ-2000ಕ್ಕೆ ತಿದ್ದುಪಡಿ ತರಲಾಗಿದೆ. ವಿವಿಯನ್ನು ಮೂರು ಭಾಗಗಳನ್ನಾಗಿ ವಿಭಾಗಿಸಿ ಹಾಗೂ ‘ಬ್ಯಾಂಗಲೂರ್ ವಿವಿ’ ಎಂದು ಇರುವ ಹೆಸರನ್ನು ‘ಬೆಂಗಳೂರು ವಿವಿ’ ಎಂದು ಬದಲಾಯಿಸುವುದೂ ಈ ವಿಧೇಯಕದಲ್ಲಿ ಸೇರಿ ಕೊಂಡಿದೆ.

ಎಲ್ಲಿಲ್ಲಿ ಕೇಂದ್ರ ಸ್ಥಾನ?: ಜ್ಞಾನಭಾರತಿಯಲ್ಲಿ ಕ್ಯಾಂಪಸ್ ಇರುವ ಬೆಂಗಳೂರು ವಿವಿಯು ಬೆಂಗಳೂರು ಗ್ರಾಮೀಣ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಕಾಲೇಜ್‌ಗಳನ್ನು ಒಳಗೊಳ್ಳಲಿದೆ. ಬೆಂಗಳೂರು ಸೆಂಟ್ರಲ್ ವಿವಿ ಎಂದು ಕರೆಯುವ ಹೊಸ ವಿವಿಯು ಬೆಂಗಳೂರು ನಗರದ ಸುಮಾರು 13 ವಿಧಾನಸಭಾ ಕ್ಷೇತ್ರಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಲಿದ್ದು, ಬೆಂಗಳೂರು ಸೆಂಟ್ರಲ್ ಕಾಲೇಜ್ ಕೇಂದ್ರೀಯ ಸ್ಥಾನವಾಗಲಿದೆ. ಬೆಂಗಳೂರು (ಉತ್ತರ) ಎಂಬ ಮತ್ತೊಂದು ವಿವಿ ಸ್ಥಾಪನೆಯಾಗಲಿದ್ದು, ಇದಕ್ಕೆ ಜಂಗಮಕೋಟೆಯಲ್ಲಿ (ಶಿಡ್ಲಘಟ್ಟ ತಾಲೂಕು) ಕೇಂದ್ರ ಸ್ಥಾನವಿರಲಿದೆ. ಸದ್ಯಕ್ಕೆ ಕೋಲಾರ ಪಿಜಿ ಸೆಂಟರ್‌ನಲ್ಲಿ ತಾತ್ಕಾಲಿಕ ಕಚೇರಿ ಹೊಂದಲಿದೆ. ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಹದಿನೇಳು ವಿಧಾನಸಭಾ ಕೇತ್ರಗಳು ಇದರ ಕಾರ್ಯವ್ಯಾಪ್ತಿಯಲ್ಲಿರುತ್ತವೆ.

Write A Comment